
ಮಂಗಳೂರು: ಅಗ್ರ ಶ್ರೇಯಾಂಕಿತ, ಕೇರಳದ ಮಾರ್ತಾಂಡನ್ ಕೆ.ಯು ಹಾಗೂ ಎರಡನೇ ಶ್ರೇಯಾಂಕಿತ, ಇಂಟರ್‌ನ್ಯಾಷನಲ್ ಮಾಸ್ಟರ್ ತಮಿಳುನಾಡಿನ ಬಾಲಸುಬ್ರಹ್ಮಣ್ಯಂ ರಾಮನಾಥನ್ ಇಲ್ಲಿ ಶುಕ್ರವಾರ ಆರಂಭಗೊಂಡ ರಾಷ್ಟ್ರಮಟ್ಟದ ಫಿಡೆ ರೇಟೆಡ್ ಮುಕ್ತ ಚೆಸ್ ಟೂರ್ನಿಯ ಅಗ್ರ ಸ್ಥಾನ ಹಂಚಿಕೊಂಡರು.
ಕರ್ನಾಟಕ ತುಳು ಅಕಾಡೆಮಿಯ ಅಮೃತ ಸೊಮೇಶ್ವರ ಸಭಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ಎರಡು ಸುತ್ತುಗಳಲ್ಲಿ ಜಯ ಗಳಿಸಿದ ಇವರಿಬ್ಬರು ತಲಾ ಎರಡು ಪಾಯಿಂಟ್ ಗಳಿಸಿದ್ದಾರೆ. ಮೂರನೇ ಶ್ರೇಯಾಂಕಿತ, ತಮಿಳುನಾಡಿನ ಪ್ರಸನ್ನ ಕಾರ್ತಿಕ್, 6ನೇ ಶ್ರೇಯಾಂಕಿತ ಕೇರಳದ ಶ್ರೀದತ್ ಶ್ರೀಧರನ್, 8ನೇ ಶ್ರೇಯಾಂಕಿತ ತಮಿಳುನಾಡಿನ ವಿಘ್ನೇಶ್ವರನ್ ಎಸ್, 9ನೇ ಶ್ರೇಯಾಂಕದ ಗೋವಾ ಆಟಗಾರ್ತಿ ಜೋಶುವಾ ಮಾರ್ಕ್ ಟೆಲಿಸ್ ಮತ್ತು ಕರ್ನಾಟಕದ 10ನೇ ಶ್ರೇಯಾಂಕದ ಅಯು ಅತೀಂದ್ರಿಯ ಶೆಟ್ಟಿ ಕೂಡ ತಲಾ 2 ಪಾಯಿಂಟ್‌ಗಳೊಂದಿಗೆ ಅಗ್ರ ಸ್ಥಾನ ಹಂಚಿಕೊಂಡಿದ್ದಾರೆ.
2059 ರೇಟಿಂಗ್ ಹೊಂದಿರುವ ಮಾರ್ತಾಂಡನ್ ಕರ್ನಾಟಕದ ಸಚಿತಾ ಎ ಅವರನ್ನು ಸೋಲಿಸಿ ಗೆಲುವಿನ ಓಟ ಆರಂಭಿಸಿದರು. 2039 ರೇಟಿಂಗ್‌ನ ಬಾಲಸುಬ್ರಹ್ಮಣ್ಯಂ ರಾಮನಾಥನ್ ಮೊದಲ ಸುತ್ತಿನಲ್ಲಿ ದೇವತೀರ್ಥ ವಿರುದ್ಧ ಜಯ ಗಳಿಸಿದರು. ಅನಿಲ್ ಕುಮಾರ್, ದಿಶಾ ಯು.ಎ, ಆರ್ಥವ್ ಶಿರೋಡ್ಕರ್, ರಾಹುಲ್ ಜೈನ್, ವರ್ಷಾ ಎ ಮತ್ತು ಪಂಕಜ್ ಭಟ್ ತಲಾ 1.5 ಪಾಯಿಂಟ್ ಗಳಿಸಿದ್ದಾರೆ.
2ನೇ ಸುತ್ತಿನ ಪ್ರಮುಖ ಫಲಿತಾಂಶಗಳು: ಮಾರ್ತಾಂಡನ್‌ಗೆ ಮಾಧವ ಟಿ ವಿರುದ್ಧ ಜಯ, ಬಾಲಸುಬ್ರಹ್ಮಣ್ಯಂ ರಾಮನಾಥನ್‌ಗೆ ಶ್ರದ್ಧಾ ಎಸ್ ರೈ ವಿರುದ್ಧ, ಪ್ರಸನ್ನ ಕಾರ್ತಿಕ್‌ಗೆ ನೀಲೇಶ್ ಮುಬಾಬ್ ವಿರುದ್ಧ, ಸಿದ್ಧಾರ್ಥ್ ಶ್ರೀಕುಮಾರ್‌ಗೆ ಸಮರ್ಥ್ ಭಟ್ ವಿರುದ್ಧ, ವಿಘ್ನೇಶ್ವರನ್‌ಗೆ ಕಿಶನ್‌ಕುಮಾರ್ ವಿರುದ್ಧ, ಜೊಶುವಾಗೆ ನಿಹಾರಿಕಾ ವಿರುದ್ಧ, ಆಯು ಅತೀಂದ್ರಿಯ ಶೆಟ್ಟಿಗೆ ರಾಯಾಂಶ್ ಅಗರವಾಲ್ ವಿರುದ್ಧ ಜಯ; ರಾಹುಲ್ ಜೈನ್ ಮತ್ತು ಅನಿಲ್ ಕುಮಾರ್, ವರ್ಷಾ ಮತ್ತು ದಿಶಾ, ಪಂಕಜ್ ಭಟ್, ಆರ್ಥವ್ ನಡುವಿನ ಪಂದ್ಯ ಡ್ರಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.