
ರವೀಶ್ ಕೋಟೆ
ಮಂಗಳೂರು: ಟೂರ್ನಿಯ ಏಕೈಕ ಇಂಟರ್‌ನ್ಯಾಷನಲ್ ಮಾಸ್ಟರ್ ಸೇರಿದಂತೆ ಅಗ್ರ ಶ್ರೇಯಾಂಕದ ಇಬ್ಬರು ಆಟಗಾರರು ನಿರಾಶೆ ಕಂಡ ರಾಷ್ಟ್ರಮಟ್ಟದ ಫಿಡೆ ರೇಟೆಡ್ ಮುಕ್ತ ಚೆಸ್ ಟೂರ್ನಿಯ ಎರಡನೇ ದಿನ ಮಂಗಳೂರಿನ ರವೀಶ್ ಕೋಟೆ, ತಮಿಳುನಾಡಿನ ಪ್ರಸನ್ನ ಕಾರ್ತಿಕ್, ವೈಷ್ಣವ್ ಎಸ್ ಮತ್ತು ಕೇರಳದ ಅಜೀಶ್ ಆ್ಯಂಟನಿ ಅಗ್ರ ಸ್ಥಾನಗಳನ್ನು ಹಂಚಿಕೊಂಡರು.
ಕರ್ನಾಟಕ ತುಳು ಅಕಾಡೆಮಿಯ ಅಮೃತ ಸೊಮೇಶ್ವರ ಸಭಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ನಾಲ್ಕನೇ ಸುತ್ತಿನ ಕೊನೆಗೆ ಈ ನಾಲ್ವರು ತಲಾ 4 ಪಾಯಿಂಟ್ ಕಲೆ ಹಾಕಿದ್ದಾರೆ. ಉತ್ತಮ ಟೈಬ್ರೇಕರ್ ಆಧಾರದಲ್ಲಿ ಅನೀಶ್ ಆ್ಯಂಟನಿ ಅಗ್ರಸ್ಥಾನದಲ್ಲಿದ್ದಾರೆ.
ಅಗ್ರ ಶ್ರೆಯಾಂಕಿತ ಕೇರಳದ ಮಾರ್ತಾಂಡನ್ ಶನಿವಾರ ಮೂರನೇ ಸುತ್ತಿನಲ್ಲಿ ಕರ್ನಾಟಕದ ವೆಂಕಟನಾಗ ಕಾರ್ತಿಕ್ ಜೊತೆ ಡ್ರಾ ಮಾಡಿಕೊಂಡರು. ನಾಲ್ಕನೇ ಸುತ್ತಿನಲ್ಲಿ ಮಹಾರಾಷ್ಟ್ರದ ವಿಹಾನ್ ಎದುರು ಗೆದ್ದು ಚೇತರಿಸಿಕೊಂಡರು. ಎರಡನೇ ಶ್ರೇಯಾಂಕಿತ ಇಂಟರ್‌ನ್ಯಾಷನಲ್ ಮಾಸ್ಟರ್ ತಮಿಳುನಾಡಿನ ಬಾಲಸುಬ್ರಹ್ಮಣ್ಯಂ ರಾಮನಾಥನ್ ಅವರಿಗೆ ಮೂರನೇ ಸುತ್ತಿನಲ್ಲಿ ಕರ್ನಾಟಕದ ಋಷಿಕೇಶ್ ಗಣಪತಿ ಸಮಬಲದ ಪೈಪೋಟಿ ನೀಡಿದರು. ನಾಲ್ಕನೇ ಸುತ್ತಿನಲ್ಲಿ ಜಾರ್ಖಂಡ್‌ನ ಅಭಿಜ್ಞಾ ಪಾಲ್ ವಿರುದ್ಧ ಗೆದ್ದು ಗೆಲುವಿನ ಲಯಕ್ಕೆ ಮರಳಿದರು.
ಮಾರ್ತಾಂಡನ್ ಮತ್ತು ಬಾಲಸುಬ್ರಹ್ಮಣ್ಯಂ ಜೊತೆ ಒಟ್ಟು 14 ಮಂದಿ 3.5 ಪಾಯಿಂಟ್ ಗಳಿಸಿದ್ದಾರೆ. ಕರ್ನಾಟಕದ ಇಶಾಬ್ ಬನ್ಸಾಲಿ, ಸ್ತುತಿ ಪ್ರದೀಪ್, ರಾಘವ್ ಬೂಡೂರು, ಇಂದ್ರಜಿತ್ ಮಜುಂದಾರ್, ಸಂಜಯ್ ಸಿಂಧಿಯಾ ಮತ್ತು ಅರವಿಂದ ಬಿ.ಆರ್ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ನಾಲ್ಕನೇ ಸುತ್ತಿನ ಪ್ರಮುಖ ಫಲಿತಾಂಶಗಳು: ಪ್ರಸನ್ನ ಕಾರ್ತಿಕ್‌ಗೆ ವಿಹಾನ್ ಶೆಟ್ಟಿ ವಿರುದ್ಧ, ಅಜೀಶ್ ಆ್ಯಂಟನಿಗೆ ಶ್ರೀಹರಿ ವಿರುದ್ಧ, ರವೀಶ್ ಕೋಟೆಗೆ ವಿಶ್ವಜೀತ್ ವಿರುದ್ಧ, ವೈಷ್ಣವ್‌ಗೆ ದಿವ್ಯಶ್ರೀ ಕೊಲ್ಲಿಪಾರ ವಿರುದ್ಧ ಜಯ; ಜೋಶುವಾ ಟೆಲಿಸ್ ಮತ್ತು ಸ್ರಗ್ವಿದಾ, ಸ್ತುತಿ ಪ್ರದೀಪ್ ಮತ್ತು ಇಶಾನ್ ಭನ್ಸಾಲಿ, ಇಂದ್ರಜೀತ್ ಮತ್ತು ರಾಘವ್, ಅಶ್ವಿನಿ ನಾಯರ್ ಮತ್ತು ಜಾಯ್ ಲಾಸರ್ ನಡುವಿನ ಪಂದ್ಯ ಡ್ರಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.