
ಮಂಗಳೂರು: ಕರಾರುವಾಕ್ ಗುರಿ ಇಟ್ಟ ಶೂಟರ್ ಹರ್ಷಿತಾ, ಆಲ್‌ರೌಂಡ್ ಆಟ ಪ್ರದರ್ಶಿಸಿದ ನಿಖಿತಾ ಮತ್ತು ರಕ್ಷಣೆಯ ಗೋಡೆ ಕಟ್ಟಿದ ಡಿಫೆಂಡರ್ ನಿತ್ಯಾ ಅವರ ಅಮೋಘ ಆಟದ ನೆರವಿನಿಂದ ಕರ್ನಾಟಕದ ಬಾಲಕಿಯರು ಪದವಿಪೂರ್ವ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ನೆಟ್‌ಬಾಲ್ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿದರು.
ಶಾಲಾ ಶಿಕ್ಷಣ ಇಲಾಖೆ ಹಾಗೂ ಮಂಗಳೂರು ತಾಲ್ಲೂಕಿನ ಎಡಪದವು ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಪಿಲಿಕುಳ ಸ್ಕೌಟ್ ಅಂಗಣದಲ್ಲಿ ಗುರುವಾರ ಆರಂಭಗೊಂಡ ಟೂರ್ನಿಯ ಲೀಗ್ ಪಂದ್ಯದಲ್ಲಿ ಕರ್ನಾಟಕ 35-3ರಲ್ಲಿ ಒಡಿಶಾ ತಂಡವನ್ನು ಮಣಿಸಿ ಶುಭಾರಂಭ ಮಾಡಿತು.
ಆಕ್ರಮಣಕಾರಿಯಾಗಿಯೇ ಆಟ ಆರಂಭಿಸಿದ ಆತಿಥೇಯ ಕಾಲೇಜಿನ ನಿಖಿತಾ ನಾಯಕತ್ವದ ತಂಡ ಕೊನೆಯವರೆಗೂ ಲಯವನ್ನು ಕಾಯ್ದುಕೊಂಡಿತು. ಹರ್ಷಿತಾ ನಿರಂತರವಾಗಿ ಚೆಂಡನ್ನು ಗುರಿ ಮುಟ್ಟಿಸಿ ಸಂಭ್ರಮಿಸಿದರು. ಹಾಸನದ ನಿತ್ಯಾ ಎದುರಾಳಿಗಳು ತಮ್ಮ ಪೋಲ್ ಬಳಿ ಸುಳಿಯದಂತೆ ನೋಡಿಕೊಂಡರು.
ಫಲಿತಾಂಶಗಳು
ಬಾಲಕಿಯರ ವಿಭಾಗ
ಛತ್ತೀಸ್‌ಗಡ 34–4ರಲ್ಲಿ ತೆಲಂಗಾಣ ವಿರುದ್ಧ, 17–10ರಲ್ಲಿ ತಮಿಳುನಾಡು ವಿರುದ್ಧ, ಗೋವಾ 21–6ರಲ್ಲಿ ತೆಲಂಗಾಣ ವಿರುದ್ಧ, ಮಹಾರಾಷ್ಟ್ರ 33–6ರಲ್ಲಿ ಜಮ್ಮು ಕಾಶ್ಮೀರ ವಿರುದ್ಧ, ಪಂಜಾಬ್ 32–6ರಲ್ಲಿ ಆಂಧ್ರಪ್ರದೇಶ ವಿರುದ್ಧ ಜಯ ಗಳಿಸಿತು.
ರಾಜಸ್ತಾನ 22–3ರಲ್ಲಿ ಆಂಧ್ರಪ್ರದೇಶವನ್ನು, ಕೇರಳ 48–2ರಲ್ಲಿ ವಿದ್ಯಾಭಾರತಿ ತಂಡವನ್ನು, ಗುಜರಾತ್ 8–1ರಲ್ಲಿ ವಿದ್ಯಾಭಾರತಿ ತಂಡವನ್ನು ಮತ್ತು ಹರಿಯಾಣ 31–8ರಲ್ಲಿ ಮಧ್ಯಪ್ರದೇಶವನ್ನು ಸೋಲಿಸಿತು. ಚಂಢೀಗಡ ಮತ್ತು ಮಹಾರಾಷ್ಟ್ರ ನಡುವಿನ ಪಂದ್ಯ 20–20ರ ಸಮಬಲದಲ್ಲಿ ಮುಕ್ತಾಯಗೊಂಡಿತು.
ಬಾಲಕರ ವಿಭಾಗ
ಕೇರಳಕ್ಕೆ 34–13ರಲ್ಲಿ ಛತ್ತೀಸ್‌ಗಡ ವಿರುದ್ಧ, ಪಂಜಾಬ್‌ಗೆ 25–11ರಲ್ಲಿ ಗೋವಾ ವಿರುದ್ಧ, ಮಧ್ಯಪ್ರದೇಶಕ್ಕೆ 22–8ರಲ್ಲಿ ಸಿಬಿಎಸ್‌ಇ ತಂಡದ ವಿರುದ್ಧ, ರಾಜಸ್ತಾನಕ್ಕೆ 29–19ರಲ್ಲಿ ತೆಲಂಗಾಣ ವಿರುದ್ಧ, ವಿದ್ಯಾಭಾರತಿ ತಂಡಕ್ಕೆ 25–14ರಲ್ಲಿ ಮಹಾರಾಷ್ಟ್ರ ವಿರುದ್ಧ, ಐಪಿಎಸ್‌ಇಗೆ 18–14ರಲ್ಲಿ ಆಂಧ್ರಪ್ರದೇಶ ವಿರುದ್ಧ ಮತ್ತು ಚಂಢೀಗಡಕ್ಕೆ 20–13ರಲ್ಲಿ ಹರಿಯಾಣ ವಿರುದ್ಧ ಗೆಲುವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.