ADVERTISEMENT

ವಾಲಿಬಾಲ್ ಟೂರ್ನಿ: ಪಶ್ಚಿಮ ಬಂಗಾಳ ಚಾಂಪಿಯನ್, ಗುಜರಾತ್ ರನ್ನರ್ಸ್‌ ಅಪ್‌

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2024, 23:30 IST
Last Updated 1 ಫೆಬ್ರುವರಿ 2024, 23:30 IST
ಶಿವಮೊಗ್ಗದಲ್ಲಿ ಗುರುವಾರ ಮುಕ್ತಾಯವಾದ ರಾಷ್ಟ್ರೀಯ ವಾಲಿಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆದ  ಪಶ್ಚಿಮ ಬಂಗಾಳ ತಂಡದ ಆಟಗಾರ್ತಿಯರು ಟ್ರೋಫಿಯೊಂದಿಗೆ ಸಂಭ್ರಮಿಸಿದರು–ಪ್ರಜಾವಾಣಿ ಚಿತ್ರ/ ಶಿವಮೊಗ್ಗ ನಾಗರಾಜ್
ಶಿವಮೊಗ್ಗದಲ್ಲಿ ಗುರುವಾರ ಮುಕ್ತಾಯವಾದ ರಾಷ್ಟ್ರೀಯ ವಾಲಿಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆದ  ಪಶ್ಚಿಮ ಬಂಗಾಳ ತಂಡದ ಆಟಗಾರ್ತಿಯರು ಟ್ರೋಫಿಯೊಂದಿಗೆ ಸಂಭ್ರಮಿಸಿದರು–ಪ್ರಜಾವಾಣಿ ಚಿತ್ರ/ ಶಿವಮೊಗ್ಗ ನಾಗರಾಜ್   

ಶಿವಮೊಗ್ಗ: ಸ್ಕೂಲ್‌ ಗೇಮ್ಸ್ ಫೆಡರೇಷನ್‌ ಆಫ್ ಇಂಡಿಯಾ ಆಶ್ರಯದಲ್ಲಿ ಗುರುವಾರ ಇಲ್ಲಿ ಮುಕ್ತಾಯವಾದ 67ನೇ ರಾಷ್ಟ್ರೀಯ 19 ವರ್ಷದೊಳಗಿನ ಬಾಲಕಿಯರ ವಾಲಿಬಾಲ್ ಟೂರ್ನಿಯಲ್ಲಿ ಪಶ್ಚಿಮ ಬಂಗಾಳ ತಂಡ ಚಾಂಪಿಯನ್ ಆಗಿದೆ. 

ನೆಹರೂ ಕ್ರೀಡಾಂಗಣದಲ್ಲಿ ಗುರುವಾರ ಹೊನಲು ಬೆಳಕಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಶ್ಚಿಮ ಬಂಗಾಳ 25–14, 25–15, 25–23ರಿಂದ ಗುಜರಾತ್ ತಂಡವನ್ನು ಸೋಲಿಸಿತು. 

ಪಶ್ಚಿಮ ಬಂಗಾಳದ ವನಿತೆಯರು ಮೊದಲ ಎರಡು ಸೆಟ್‌ಗಳನ್ನು ಸುಲಭವಾಗಿ ಗೆದ್ದರು. ಮೂರನೇ ಸೆಟ್‌ನಲ್ಲಿ ಗುಜರಾತ್ ತಂಡ ತೀವ್ರ ಪ್ರತಿರೋಧ ಒಡ್ಡಿತು. ಎದುರಾಳಿಗಳ ಸವಾಲು ಮೀರಿದ ಪಶ್ಚಿಮ ಬಂಗಾಳ ತಂಡ ಗೆಲುವಿನ ನಗೆ ಬೀರಿತು.

ADVERTISEMENT

ಬೆಳಿಗ್ಗೆ ನಡೆದ ಸೆಮಿಫೈನಲ್‌ನಲ್ಲಿ ಪಶ್ಚಿಮ ಬಂಗಾಳ ತಂಡ ಮಹಾರಾಷ್ಟ್ರ ಎದುರು, ಗುಜರಾತ್ ತಂಡ ಕೇರಳದ ವಿರುದ್ಧ ಗೆಲುವು ಸಾಧಿಸಿದ್ದವು. 

ಮೂರನೇ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಕೇರಳ ತಂಡ 29–25, 18–25, 25–21,  ರಿಂದ ಮಹಾರಾಷ್ಟ್ರ ತಂಡವನ್ನು ಮಣಿಸಿತು. 

ಪಶ್ಚಿಮ ಬಂಗಾಳ ತಂಡದ ರಾಜನಂದಿನಿ ಪಂದ್ಯಶ್ರೇಷ್ಠ ‍ಪ್ರಶಸ್ತಿಗೆ ಪಾತ್ರರಾದರು. ಕೇರಳದ ಅನಾಮಿಕಾ ಹಾಗೂ ಪವಿತ್ರಾ, ಪಶ್ಚಿಮ ಬಂಗಾಳದ ಜಯಶ್ರೀ, ಗುಜರಾತ್‌ನ ದಿವ್ಯಾ ಹಾಗೂ ಪ್ರಿಯಾಂಶಿ ಅವರು ಟೂರ್ನಿಯ ಉತ್ತಮ ಆಟಗಾರ್ತಿ ಪ್ರಶಸ್ತಿ ಪಡೆದರು. 

ವಿಜೇತ ತಂಡಕ್ಕೆ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು. ಚಾಂಪಿಯನ್ ತಂಡ ₹25 ಸಾವಿರ ನಗದು ಹಾಗೂ ಟ್ರೋಫಿ ಪಡೆದರೆ, ರನ್ನರ್ಸ್‌ ಅ‍ಪ್‌ ತಂಡ ₹15 ಸಾವಿರ ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.