
ಬೆಂಗಳೂರು: ಕರ್ನಾಟಕದ ಶ್ವೇತಾ ಎಸ್.ಅಣ್ಣಿಕೆರೆ ಅವರು ಅಹಮದಾಬಾದಿನಲ್ಲಿ ಭಾನುವಾರ ಮುಕ್ತಾಯಗೊಂಡ ಸೀನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನ ಮಹಿಳೆಯರ 50 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು.
ಹಳಿಯಾಳದ ಅರ್ಲವಾಡ ಗ್ರಾಮದ ಶ್ವೇತಾ ಅವರು ಫೈನಲ್‌ನಲ್ಲಿ ರೈಲ್ವೇಸ್‌ನ ಅಂತರರಾಷ್ಟ್ರೀಯ ಕುಸ್ತಿಪಟು, ಅಗ್ರ ಶ್ರೇಯಾಂಕದ ನೀಲಂ ಅವರಿಗೆ ಮಣಿದರು.
ಕರ್ನಾಟಕದ ಆಟಗಾರ್ತಿ ಸೆಮಿಫೈನಲ್‌ನಲ್ಲಿ ಮಹಾರಾಷ್ಟ್ರದ ಗೌರಿ ಪಾಟೀಲ್ ಅವರನ್ನು 2 ಪಾಯಿಂಟ್‌ಗಳಿಂದ, ಕ್ವಾರ್ಟರ್‌ಫೈನಲ್‌ನಲ್ಲಿ ಹರಿಯಾಣದ ಮುಸ್ಕಾನ್ ಅವರನ್ನು 10–0 ಪಾಯಿಂಟ್‌ಗಳಿಂದ ಸೋಲಿಸಿದ್ದರು.
19 ವರ್ಷ ವಯಸ್ಸಿನ ಶ್ವೇತಾ, ಉತ್ತರಾಖಂಡದಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಗಳಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.
ಪುರುಷರ 70 ಕೆ.ಜಿ. ವಿಭಾಗದಲ್ಲಿ ರೈಲ್ವೇಸ್ ತಂಡವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ರೋಹನ್ ಎನ್.ಘೆವಡಿ ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಹಳಿಯಾಳದ ರೋಹನ್ ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಸರ್ವಿಸಸ್‌ನ ನವೀನ್ ಅವರನ್ನು 8–4 ಪಾಯಿಂಟ್‌ಗಳಿಂದ ಸೋಲಿಸಿದರು. ಹರಿಯಾಣದ ಅಭಿಮನ್ಯು ಚಿನ್ನದ ಪದಕ ಗೆದ್ದರೆ, ಉತ್ತರ ಪ್ರದೇಶದ ರವಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.