ADVERTISEMENT

ಎನ್‌ಬಿಎನಲ್ಲೂ ಅನುರಣಿಸಿದ ವರ್ಣಭೇದ ಪ್ರತಿಭಟನೆ

ರಾಯಿಟರ್ಸ್
Published 31 ಜುಲೈ 2020, 6:00 IST
Last Updated 31 ಜುಲೈ 2020, 6:00 IST
ಎನ್‌ಬಿಎ ಪಂದ್ಯ ಆರಂಭಗೊಳ್ಳುವುದಕ್ಕೂ ಮೊದಲು ಆಟಗಾರರು, ಕೋಚ್‌ಗಳು ಮತ್ತು ಅಧಿಕಾರಿಗಳು ಮೊಣಕಾಲೂರಿ ಪ್ರತಿಭಟನೆ ಸಲ್ಲಿಸಿದರು –ಎಎಫ್‌ಪಿ ಚಿತ್ರ
ಎನ್‌ಬಿಎ ಪಂದ್ಯ ಆರಂಭಗೊಳ್ಳುವುದಕ್ಕೂ ಮೊದಲು ಆಟಗಾರರು, ಕೋಚ್‌ಗಳು ಮತ್ತು ಅಧಿಕಾರಿಗಳು ಮೊಣಕಾಲೂರಿ ಪ್ರತಿಭಟನೆ ಸಲ್ಲಿಸಿದರು –ಎಎಫ್‌ಪಿ ಚಿತ್ರ   

ಲಾಸ್ ಏಂಜಲೀಸ್: ನಾಲ್ಕು ತಿಂಗಳು ಕಾದನಂತರ ಅಮೆರಿಕದ ಪ್ರತಿಷ್ಠಿತ ನ್ಯಾಷನಲ್ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್‌ನ (ಎನ್‌ಬಿಎ) ಟೂರ್ನಿ ಪುನರಾರಂಭಗೊಂಡಿದೆ. ಆದರೆ ಈಚೆಗೆ ವಿಶ್ವದಾದ್ಯಂತ ಸಂಚಲನ ಉಂಟುಮಾಡಿರುವ ವರ್ಣಭೇದ ನೀತಿ ವಿರುದ್ಧದ ಪ್ರತಿಭಟನೆಯ ಕಾವು ಈ ಟೂರ್ನಿಗೂ ತಟ್ಟಿದೆ.

ಪಂದ್ಯಗಳು ಆರಂಭವಾಗುವುದಕ್ಕೂ ಮೊದಲು ಅಮೆರಿಕದ ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ತಂಡಗಳ ಆಟಗಾರರು ಮೊಣಕಾಲೂರಿ ತಲೆ ತಗ್ಗಿಸಿ ಪ್ರತಿಭಟನೆ ದಾಖಲಿಸಿದರು. ‘ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ಸ್‌’ ಎಂಬ ಘೋಷಣೆ ಇದ್ದ ಟಿ–ಶರ್ಟ್‌ ಅವರು ಧರಿಸಿದ್ದರು.

ಉತಾ ಜಾಸ್‌, ನ್ಯೂ ಅರ್ಲೀನ್ಸ್ ಪೆಲಿಕಾನ್ಸ್, ಲಾಸ್ ಏಂಜಲೀಸ್ ಲೇಕರ್ಸ್‌ ಮತ್ತು ಕ್ಲಿಪರ್ಸ್ ತಂಡದ ಆಟಗಾರರು ಅಂಗಣದಲ್ಲಿದ್ದರು. ವರ್ಣಭೇದ ಮತ್ತು ಪೊಲೀಸ್ ದೌರ್ಜನ್ಯ ವಿರೋಧಿಸಿ ಈ ತಂಡಗಳ ಆಟಗಾರರು ಮೊಣಕಾಲೂರುತ್ತಿದ್ದಂತೆ ಕೋಚ್‌ಗಳು ಮತ್ತು ಪಂದ್ಯಗಳ ಅಧಿಕಾರಿಗಳೂ ಅವರಿಗೆ ಬೆಂಬಲ ಸೂಚಿಸಿ ಪ್ರತಿಭಟನೆ ಸಲ್ಲಿಸಿದರು.

ADVERTISEMENT

ಉಳಿದಿರುವ ಪಂದ್ಯಗಳನ್ನು ಒರ್ಲಾಂಡೊ ಸಮೀಪದ ವಾಲ್ಟ್ ಡಿಸ್ನಿ ವರ್ಲ್ಡ್‌ ರೆಸಾರ್ಟ್‌ನ ಕ್ರೀಡಾ ಸಂಕೀರ್ಣದಲ್ಲಿ ಆಯೋಜಿಸಲು ಎನ್‌ಬಿಎ ನಿರ್ಧರಿಸಿದೆ. ಇದಕ್ಕಾಗಿ 22 ತಂಡಗಳ ಆಟಗಾರರನ್ನು ಬಯೊಸೆಕ್ಯೂರ್ ವಲಯದಲ್ಲಿ ಇರಿಸಲಾಗಿದೆ. ಪಂದ್ಯಗಳಿಗಾಗಿ ಇಲ್ಲಿ ಗೊತ್ತುಪಡಿಸಿರುವ ಅಂಗಣಗಳಲ್ಲಿ ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ಸ್‌ ಘೋಷಣೆಯನ್ನು ಬರೆಯಲಾಗಿದೆ.

ಮೊದಲ ಪಂದ್ಯಕ್ಕೂ ಮುನ್ನ ಪ್ರದರ್ಶಿಸಿದ ವಿಡಿಯೊ ಒಂದರಲ್ಲಿ ಪೋರ್ಟ್‌ಲ್ಯಾಂಡ್ ಟ್ರೇಲ್ ಬ್ಲೇಜರ್ಸ್ ತಂಡದ ಗಾರ್ಡ್ ವಿಭಾಗದ ಆಟಗಾರ ಲಿಲಾರ್ಡ್ ಮಾತನಾಡಿ ‘ಇನ್ನು ಮುಂದೆ ನಾವು ಬಾಯಿ ಮುಚ್ಚಿಕೊಂಡು ಇರಲಾರೆವು’ ಎಂದು ಹೇಳಿದರು. ಜೆರ್ಸಿಗಳಲ್ಲಿ ಆಟಗಾರರು ತಮ್ಮ ಹೆಸರಿನ ಬದಲು ‘ಸಮಾನತೆ’, ‘ಶೈಕ್ಷಣಿಕ ಪರಿಷ್ಕರಣೆ’, ’ಅವರ ಹೆಸರು ಹೇಳಿ’ ಮುಂತಾದ ಬರಹಗಳನ್ನು ಬರೆದುಕೊಂಡಿದ್ದರು.

ಮೇ ತಿಂಗಳಲ್ಲಿ ಮಿನಿಪೊಲೀಸ್‌ನಲ್ಲಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಅವರು ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿ ಸಾವಿಗೀಡಾಗಿದ್ದರು. ಅದರ ನಂತರ ವಿಶ್ವದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಕ್ರೀಡಾ ಕ್ಷೇತ್ರದಲ್ಲಿ ‘ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ಸ್‌’ ದೊಡ್ಡ ಸದ್ದು ಮಾಡಿತ್ತು. ವೆಸ್ಟ್ ಇಂಡೀಸ್‌ನ ಕ್ರಿಕೆಟ್ ಆಟಗಾರರು ಸೇರಿದಂತೆ ಅನೇಕ ಕ್ರೀಡಾಪಟುಗಳು ವರ್ಣಭೇದ ನೀತಿಯ ವಿರುದ್ಧ ಸಿಡಿದೆದ್ದು ಬಹಿರಂಗ ಹೇಳಿಕೆ ನೀಡಿದ್ದರು.

‘ಎಷ್ಟೋ ವರ್ಷಗಳ ನಂತರ ಇಂಥ ಪ್ರತಿಭಟನೆ ಮಾಡುವ ಅವಕಾಶ ಲಭಿಸಿದೆ. ಈ ಅಭಿಯಾನ ನಿಲ್ಲಬಾರದು. ಪ್ರತಿಭಟನೆಯ ಧ್ವನಿ ನಿರಂತರವಾಗಿ ಕೇಳುತ್ತಿರಬೇಕು‘ ಎಂದು ಸ್ಯಾನ್ ಆ್ಯಂಟೊನಿಯೊ ತಂಡದ ಕೋಚ್ ಗ್ರೆಗ್ ಪೊಪೊವಿಚ್ ವಿಡಿಯೊ ಸಂವಾದದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಜಾಸ್ 106–104 ಪಾಯಿಂಟ್‌ಗಳಿಂದ ಪೆಲಿಕಾನ್ಸ್ ವಿರುದ್ಧ ಗೆಲುವು ಸಾಧಿಸಿತು. ಬ್ರೆಂಡನ್ ಇಂಗ್ರಾಮ್ 23 ಪಾಯಿಂಟ್ ಗಳಿಸಿ ಮಿಂಚಿದರೆ ಜೆಜೆ ರೆಡಿಕ್ 21, ಜೂ ಹಾಲಿಡೇ 20 ಪಾಯಿಂಟ್ ಕಲೆ ಹಾಕಿದರು. ಆದರೆ ಜಾಸ್ ತಂಡದ ಜಾರ್ಡನ್ ಕ್ರಾಕ್‌ಸನ್ 23, ಡೊನೊವಾನ್ ಮಿಚೆಲ್ ಮತ್ತು ಮೈಕ್ ಕಾನ್ಲಿ ತಲಾ 20 ಪಾಯಿಂಟ್ ಗಳಿಸಿ ಗೆಲುವಿಗೆ ಮಹತ್ತರ ಕಾಣಿಕೆ ನೀಡಿದರು.

ದಿನದ ಎರಡನೇ ಪಂದ್ಯವೂ ರೋಚಕವಾಗಿತ್ತು. ಲಾಸ್ ಏಂಜಲೀಸ್ ಲ್ಯಾಂಕರ್ಸ್‌ಗೆ ಲಾಸ್ ಏಂಜಲೀಸ್ ಕ್ಲಿಪರ್ಸ್ ಎರಡು ಪಾಯಿಂಟ್‌ಗಳಿಂದ ಮಣಿಯಿತು. ಆ್ಯಂಟನಿ ಡೇವಿಡ್ ಗಳಿಸಿಕೊಟ್ಟ 34 ಪಾಯಿಂಟ್‌ಗಳ ನೆರವಿನಿಂದ ಲ್ಯಾಂಕರ್ಸ್ 103 ಪಾಯಿಂಟ್ ಕಲೆ ಹಾಕಿದ್ದರೆ ಪಾಲ್ ಜಾರ್ಜ್ (30 ಪಾಯಿಂಟ್ಸ್) ಮತ್ತು ಕೇತ್ ಲೆನಾರ್ಡ್ (28) ಅವರ ಅಮೋಘ ಆಟದ ಬಲದಿಂದ ಕ್ಲಿಪರ್ಸ್ 101 ಪಾಯಿಂಟ್ ಗಳಿಸಿತು.

ಚಾರ್ಲೊಟಿ ಹೊಮೆಟ್ಸ್‌ 109–98 ಅಂತರದಲ್ಲಿ ಮಿಯಾಮಿ ಹೀಟ್ಸ್ ವಿರುದ್ಧ, ಮಾವೆರಿಕ್ಸ್ 113–97 ಪಾಯಿಂಟ್‌ಗಳಿಂದ ನಗೆಟ್ಸ್ ಎದುರು, ಸೆವೆಂಟಿ ಸಿಕ್ಸರ್‌ 124–106ರಲ್ಲಿ ಪಿಸ್ಟನ್ಸ್ ವಿರುದ್ಧ ಜಯ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.