
ನೀರಜ್ ಚೋಪ್ರಾ
ನವದೆಹಲಿ: ಝೆಕ್ ಕೋಚ್ ಯಾನ್ ಝೆಲೆಝ್ನಿ ಅವರೊಂದಿಗೆ ತರಬೇತಿ ಒಪ್ಪಂದವನ್ನು ಕೊನೆಗೊಳಿಸಿರುವುದಾಗಿ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಜಾವೆಲಿನ್ ಥ್ರೊ ತಾರೆ ನೀರಜ್ ಚೋಪ್ರಾ ಅವರು ಶನಿವಾರ ಪ್ರಕಟಿಸಿದ್ದಾರೆ.
ಒಂದು ವರ್ಷಕ್ಕೇ ಅವರು ಝೆಕ್ ದಿಗ್ಗಜ ತರಬೇತುದಾರನಿಂದ ಬೇರ್ಪಟ್ಟಿದ್ದಾರೆ. ಈ ಅವಧಿ ‘ಬೆಳವಣಿಗೆ, ಗೌರವ ಮತ್ತು ಕ್ರೀಡೆಯ ಜೊತೆಗಿನ ಪ್ರೀತಿಯದ್ದಾಗಿತ್ತು’ ಎಂದು ಚೋಪ್ರಾ ಹೇಳಿದ್ದಾರೆ.
ಒಪ್ಪಂದ ಕೊನೆಗೊಳಿಸಲು ಚೋಪ್ರಾ ನಿರ್ದಿಷ್ಟ ಕಾರಣ ನೀಡಿಲ್ಲ. ಜಾವೆಲಿನ್‌ನಲ್ಲಿ ಅನೇಕ ದಾಖಲೆಗಳನ್ನು ಸ್ಥಾಪಿಸಿರುವ ಝೆಲೆಝ್ನಿ ಅವರ ಅವಧಿಯಲ್ಲಿ ಹರಿಯಾಣದ ತಾರೆ ಮೊದಲ ಬಾರಿ ಭರ್ಚಿಯನ್ನು 90 ಮೀ. ದೂರ ಎಸೆಯುವಲ್ಲಿ ಯಶ ಕಂಡಿದ್ದರು. 2026ರ ಮೇ ತಿಂಗಳಲ್ಲಿ ದೋಹಾ ಡೈಮಂಡ್ ಲೀಗ್‌ನಲ್ಲಿ ಚೋಪ್ರಾ 90.23 ಮೀ. ದೂರ ಎಸೆದಿದ್ದರು.
‘ಬಾಲ್ಯದಿಂದಲೂ ತಾವು ಆರಾಧಿಸುತ್ತಿದ್ದ ವ್ಯಕ್ತಿಯಿಂದ ಪಡೆದ ತರಬೇತಿ ನನಗೆ ಕನಸು ನನಸಾದ ಅನುಭವ ನೀಡಿತು. ಕಸರತ್ತು, ತಾಂತ್ರಿಕ ಕೌಶಲ, ಹೊಸ ದೃಷ್ಟಿಕೋನ ಪಡೆಯಲು ನೆರವಾಯಿತು’ ಎಂದಿದ್ದಾರೆ ಚೋಪ್ರಾ.
59 ವರ್ಷ ವಯಸ್ಸಿನ ಝೆಲೆಝ್ನಿ ಅವರೂ ಸಹ ಚೋಪ್ರಾ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ‘ನೀರಜ್ ಅವರಂಥ ಅಥ್ಲೀಟುಗಳ ಜೊತೆ ಕೆಲಸ ಮಾಡಿದ್ದು ದೊಡ್ಡ ಅನುಭವ. ನಾವು ಜೊತೆಯಾಗಿ ಕೆಲಸ ಮಾಡಿದ್ದು ಮತ್ತು ಮೊದಲ ಬಾರಿ ಅವರು 90 ಮೀ. ತಡೆ ದಾಟಲು ಸಾಧ್ಯವಾಗಿದ್ದು ಸಂತಸ ತಂದಿದೆ’ ಎಂದು ಝೆಕ್ ಅಥ್ಲೀಟ್ ಹೇಳಿದ್ದಾರೆ. ಮುಂಬರುವ ವರ್ಷಗಳಲ್ಲಿ ಚೋಪ್ರಾ ಅವರು ಇನ್ನಷ್ಟು ಎತ್ತರಕ್ಕೇರುವ ಸಾಮರ್ಥ್ಯ ಹೊಂದಿದ್ದಾರೆ ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.