ನೀರಜ್ ಚೋಪ್ರಾ
ನವದೆಹಲಿ: ಈ ಬಾರಿಯ ವಿಶ್ವ ಜಾವೆಲಿನ್ ಚಾಂಪಿಯನ್‌ಶಿಪ್ ಅನ್ನು ಅಂದುಕೊಂಡಂತೆ ಮುಕ್ತಾಯಗೊಳಿಸಲು ಸಾಧ್ಯವಾಗಲಿಲ್ಲ. ಆದರೆ ವಿರಾಮದ ಬಳಿಕ ಮತ್ತೆ ಬಲವಾಗಿ ವಾಪಾಸ್ಸಾತಿ ಮಾಡುವುದಾಗಿ ನೀರಜ್ ಚೋಪ್ರಾ ಇಂದು (ಶುಕ್ರವಾರ) ಹೇಳಿದರು.
ನಿನ್ನೆ (ಗುರುವಾರ) ಮುಕ್ತಾಯಗೊಂಡ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನ ಐದನೇ ಸುತ್ತಿನಲ್ಲಿ ಅನಿರೀಕ್ಷಿತ ರೀತಿಯಲ್ಲಿ ಹೊರಬಿದ್ದ ಅವರು ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಇನ್ನು ತಮ್ಮ ಚೊಚ್ಚಲ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸಿ ಅಮೋಘ ಎಸೆತಗಾರಿಕೆ ತೋರಿದ ಭಾರತದ ಸಚಿನ್ ಯಾದವ್ ಅವರನ್ನು ನೀರಜ್ ಶ್ಲಾಘಿಸಿದ್ದಾರೆ. ಸಚಿನ್ ಯಾದವ್ ಫೈನಲ್‌ನ ಅಂತಿಮ ಸುತ್ತಿನಲ್ಲಿ 86.27 ಮೀಟರ್ ಎಸೆಯುವ ಮೂಲಕ ನೀರಜ್‌ಗಿಂತಲೂ ಉತ್ತಮ ಪ್ರದರ್ಶನ ತೋರಿದರು. ಮಾತ್ರವಲ್ಲ, ಅವರು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡರು.
ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಪೋಸ್ಟ್ ಮಾಡಿರುವ ಅವರು, ಟೋಕಿಯೊದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಅನ್ನು ಈ ರೀತಿಯಾಗಿ ಕೊನೆಗೊಳಿಸಲು ಬಯಸಿರಲಿಲ್ಲ. ಎಲ್ಲಾ ಸವಾಲುಗಳ ನಡುವೆಯೂ ನಾನು ಭಾರತಕ್ಕಾಗಿ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಬಯಸಿದ್ದೆ, ಆದರೆ ಅದು ನನ್ನ ರಾತ್ರಿಯಾಗಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಸಚಿನ್ ಯಾದವ್ ಕುರಿತು ಪೋಸ್ಟ್ ಮಾಡಿರುವ ಅವರು, ‘ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿ ಪದಕ ಗೆಲ್ಲುವ ಹಂತಕ್ಕೆ ಸಚಿನ್ ಬಂದಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಪದಕ ಗೆದ್ದಿರುವ ಕೆಶೋರ್ನ್ ವಾಲ್ಕಾಟ್, ಆಂಡರ್ಸನ್ ಪೀಟರ್ಸ್, ಕರ್ಟಿಸ್ ಥಾಂಪ್ಸನ್ ಅವರಿಗೆ ಅಭಿನಂದನೆಗಳು, ನಿಮ್ಮೆಲ್ಲರ ಶುಭ ಹಾರೈಕೆಗೆ ಧನ್ಯವಾದಗಳು, ನಿಮ್ಮ ಬೆಂಬಲ ನನ್ನನ್ನು ಮತ್ತಷ್ಟು ಬಲಗೊಳ್ಳಲು ಪ್ರೇರೇಪಿಸುತ್ತದೆ‘ ಎಂದು ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.