ನೀರಜ್ ಚೋಪ್ರಾ
(ಪಿಟಿಐ ಚಿತ್ರ)
ಬೆಂಗಳೂರು: ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಚೊಚ್ಚಲ ಎನ್‌ಸಿ ಕ್ಲಾಸಿಕ್ ಜಾವೆಲಿನ್ ಥ್ರೊ ಕೂಟದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ, 'ಈ ಸ್ಪರ್ಧೆಯು ಭಾರತೀಯ ಅಥ್ಲೆಟಿಕ್ಸ್ ಇತಿಹಾಸದಲ್ಲಿ ಹೊಸ ಅಧ್ಯಾಯದ ಆರಂಭವಾಗಿರಲಿದೆ' ಎಂದು ಹೇಳಿದ್ದಾರೆ.
ಎನ್‌ಸಿ ಕ್ಲಾಸಿಕ್ ಕೂಟದ ಮೂಲಕ ಮೊದಲ ಬಾರಿ ಉದ್ಯಾನಗರಿಯಲ್ಲಿ ವಿಶ್ವ ಮಟ್ಟದ ಜಾವೆಲಿನ್ ಥ್ರೊ ಕೂಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತದಲ್ಲೂ ಕ್ರೀಡೆಗೆ ಪ್ರೋತ್ಸಾಹ ನೀಡುವ ಉದ್ದೇಶದೊಂದಿಗೆ ತಮ್ಮದೇ ಹೆಸರಿನ ಜಾವೆಲಿನ್ ಥ್ರೊ ಸ್ಪರ್ಧೆಯನ್ನು ನೀರಜ್ ಆರಂಭಿಸಿದ್ದಾರೆ.
ಶನಿವಾರ ನಡೆಯಲಿರುವ ಈ ಜಾವೆಲಿನ್ ಥ್ರೊ ಸ್ಪರ್ಧೆಯಲ್ಲಿ ಜಗತ್ತಿನ ಪ್ರಮುಖ ತಾರೆಗಳು ಭಾಗವಹಿಸಲಿದ್ದಾರೆ.
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ನೀರಜ್, 'ನಾನು ಕನಸಿನಲ್ಲಿ ಇದ್ದಂತೆ ಭಾಸವಾಗುತ್ತಿದೆ. ಪದಕಗಳು ಗೆಲ್ಲುವುದು ಬೇರೆ ವಿಷಯ, ಆದರೆ ಭಾರತ ಹಾಗೂ ಭಾರತೀಯ ಕ್ರೀಡಾಪಟುಗಳಿಗೆ ಇಂತಹದೊಂದು ವೇದಿಕೆ ಒದಗಿಸಿರುವುದು ಅತ್ಯಂತ ಖುಷಿ ತಂದಿದೆ. ಇದು ಹೊಸ ಅಧ್ಯಾಯದ ಆರಂಭವಾಗಿದೆ' ಎಂದು ಹೇಳಿದ್ದಾರೆ.
'ಎಲ್ಲರಿಂದಲೂ ನನಗೆ ಬೆಂಬಲ ಸಿಗುತ್ತಿದೆ. ಸರ್ಕಾರ, ಕರ್ನಾಟಕ ಒಲಿಂಪಿಕ್ ಸಂಸ್ಥೆ, ವಿಶ್ವ ಅಥ್ಲೆಟಿಕ್ಸ್ ಹಾಗೂ ಪ್ರಾಯೋಜಕರು ನನ್ನನ್ನು ಬೆಂಬಲಿಸಿದ್ದಾರೆ. ಈ ಕ್ರೀಡಾಕೂಟವನ್ನು ಇನ್ನಷ್ಟು ಉತ್ತಮಗೊಳಿಸಬಹುದು ಎಂದು ನಂಬಿದ್ದೇನೆ' ಎಂದು ತಿಳಿಸಿದ್ದಾರೆ.
ಕಂಠೀರವ ಕ್ರೀಡಾಂಗಣದಲ್ಲಿ ನೀರಜ್ ಅಭ್ಯಾಸ
ಅಮೆರಿಕ ಅಥವಾ ಯುರೋಪ್‌ನ ದೇಶಗಳಿಗೆ ಮಾತ್ರ ಸೀಮಿತವಾಗಿರುವ ಈ ಕ್ರೀಡಾಕೂಟವು ಭಾರತದಲ್ಲೂ ಆಯೋಜನೆಯಾಗಬೇಕು ಎಂದು ನೀರಜ್ ಬಯಸಿದ್ದಾರೆ.
'ಇದು ಭಾರತದಲ್ಲಿ ಅಂತರರಾಷ್ಟ್ರೀಯ ಸ್ಪರ್ಧೆಗಳ ಆರಂಭವಾಗಿದೆ. ನಿಮಗೆ ತಿಳಿದಿರುವಂತೆಯೇ ಜರ್ಮನಿ ಹಾಗೂ ಇತರೆ ರಾಷ್ಟ್ರಗಳಲ್ಲಿ ಸ್ಪರ್ಧೆ ನಡೆಯುತ್ತಿರುತ್ತವೆ. ಭಾರತದಲ್ಲೂ ಆಯೋಜನೆಯಾಗುವುದನ್ನು ಬಯಸುತ್ತೇನೆ. ಕ್ರೀಡಾಪಟುಗಳಿಗೆ ಅವಕಾಶ ಸಿಗಬೇಕು ಮತ್ತು ಅಭಿಮಾನಿಗಳು ಅದನ್ನು ನೋಡಬೇಕು. ಇದು ನಮ್ಮ ಕ್ರೀಡೆಯ ಬೆಳವಣಿಗೆಗೆ ಅಗತ್ಯವಾಗಿದೆ' ಎಂದು ಹೇಳಿದ್ದಾರೆ.
ಶನಿವಾರ ನಡೆಯಲಿರುವ ಸ್ಪರ್ಧೆಯಲ್ಲೂ ಉತ್ತಮ ಪ್ರದರ್ಶನ ನೀಡುವ ಆತ್ಮವಿಶ್ವಾಸವನ್ನು ನೀರಜ್ ವ್ಯಕ್ತಪಡಿಸಿದ್ದಾರೆ. 'ನಾನು ಉತ್ತಮವಾಗಿ ಅಭ್ಯಾಸ ನಡೆಸಿದ್ದೇನೆ. ಉತ್ತಮ ಮನೋಬಲವನ್ನು ಹೊಂದಿದ್ದೇನೆ. ಸ್ಪರ್ಧೆ ಗೆಲ್ಲುವ ಗುರಿ ಹೊಂದಿದ್ದೇನೆ' ಎಂದು ಹೇಳಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಟೊಕಿಯೊದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ನತ್ತವೂ ನೀರಜ್ ಚೋಪ್ರಾ ಗಮನ ಕೇಂದ್ರಿಕರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.