ADVERTISEMENT

ಏಪ್ರಿಲ್‌ನಲ್ಲಿ ಕೊಡವ ಕೌಟುಂಬಿಕ ಹಾಕಿ

ಹಾಕಿ ಕೂರ್ಗ್‌ ನೇತೃತ್ವದಲ್ಲಿ ಟೂರ್ನಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 13:58 IST
Last Updated 11 ಫೆಬ್ರುವರಿ 2019, 13:58 IST
ಕಳೆದ ವರ್ಷ ನಾಪೋಕ್ಲುವಿನ ಜನರಲ್‌ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದಿದ್ದ ಕೊಡವ ಕುಟುಂಬಗಳ ಹಾಕಿ ಪಂದ್ಯಾವಳಿ ಉದ್ಘಾಟನಾ ಪಂದ್ಯದ ದೃಶ್ಯ
ಕಳೆದ ವರ್ಷ ನಾಪೋಕ್ಲುವಿನ ಜನರಲ್‌ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದಿದ್ದ ಕೊಡವ ಕುಟುಂಬಗಳ ಹಾಕಿ ಪಂದ್ಯಾವಳಿ ಉದ್ಘಾಟನಾ ಪಂದ್ಯದ ದೃಶ್ಯ   

ಮಡಿಕೇರಿ: ಇದೇ ಏಪ್ರಿಲ್‌ನಲ್ಲಿ ‘ಕೊಡವ ಕೌಟುಂಬಿಕ ಹಾಕಿ ಟೂರ್ನಿ’ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಹಾಕಿ ಕೂರ್ಗ್‌ ಸಂಸ್ಥೆಯ ಅಧ್ಯಕ್ಷ ಪೈಕೇರ ಟಿ. ಕಾಳಯ್ಯ ಮಾಹಿತಿ ನೀಡಿದರು.

‘2008ರಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ್ದ ಪ್ರಕೃತಿ ವಿಕೋಪದಿಂದ ಕಳೆದ 22 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಕೊಡವ ಕೌಟುಂಬಿಕ ಹಾಕಿ ಟೂರ್ನಿಯನ್ನು ಮುಂದೂಡಲು ನಿರ್ಧರಿಸಲಾಗಿತ್ತು. ಆದರೆ, ಕೊಡವ ಕುಟುಂಬದವರು ಟೂರ್ನಿ ಆಯೋಜಿಸುವಂತೆ ಕೋರಿಕೊಂಡ ಮೇರೆಗೆ ಏಪ್ರಿಲ್‌ನಲ್ಲಿ ಟೂರ್ನಿ ಸಂಘಟಿಸಲಾಗುತ್ತಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದರು.

‘ಹಾಕಿ ಕೂರ್ಗ್ ಇಂಟರ್ ಕೊಡವ ಫ್ಯಾಮಿಲಿ ಚಾಂಪಿಯನ್–2019’ ಎಂಬ ಶೀರ್ಷಿಕೆ ಅಡಿಯಲ್ಲಿ ಟೂರ್ನಿ ನಡೆಯಲಿದೆ. ಇದರ ವಿಶೇಷವೆಂದರೆ 22 ವರ್ಷಗಳಿಂದ ಸತತವಾಗಿ ಸೆಮಿಫೈನಲ್ ಮತ್ತು ಫೈನಲ್ ಆಡಿದ ತಂಡಗಳಿಗೆ ಹಾಕಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಉಳಿದಂತೆ ಇತರ ತಂಡಗಳಿಗೆ ಪ್ರತ್ಯೇಕ ಟೂರ್ನಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ADVERTISEMENT

‘ಪಂದ್ಯಗಳನ್ನು ಆಸ್ಟ್ರೋಟರ್ಫ್‌ ಮೈದಾನ ಅಥವಾ ಕಾಕೋಟುಪರಂಬು ಮೈದಾನದಲ್ಲಿ ನಡೆಸುವ ಕುರಿತು ತಂಡಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳಲಾಗುವುದು. ಅಲ್ಲದೇ, ಟೂರ್ನಿಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಭಾಗದ ತಂಡಗಳಿಗೆ ಪ್ರವೇಶ ಉಚಿತವಿದೆ. ಉಳಿದ ತಂಡಗಳು ಮೈದಾನ ಶುಲ್ಕ ₹ 1 ಸಾವಿರ ನೀಡಿ ನೋಂದಣಿ ಮಾಡಿಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

ಪಂದ್ಯಾವಳಿಯಲ್ಲಿ ಉಳಿದ ಶೇ 50 ಹಣವನ್ನು ಕೊಡಗಿನ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ನೀಡಲಾಗುವುದು. ಮಾಹಿತಿಗೆ ಮೊಬೈಲ್‌: 95355 46955, 94833 94515 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆ ಮಾಜಿ ಅಧ್ಯಕ್ಷರಾದ ಎಂ.ಪಿ.ಸುಬ್ಬಯ್ಯ, ಪೆಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಎ.ಚಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.