ADVERTISEMENT

ಜೂನಿಯರ್‌ ಏಷ್ಯಾ ಕ‍ಪ್‌ ಹಾಕಿ ಟೂರ್ನಿ: ಭಾರತದ ವನಿತೆಯರಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2024, 22:10 IST
Last Updated 15 ಡಿಸೆಂಬರ್ 2024, 22:10 IST
ಭಾರತ (ನೀಲಿ) ಮತ್ತು ಚೀನಾ ಆಟಗಾರ್ತಿಯರ ನಡುವೆ ಪೈಪೋಟಿ
ಭಾರತ (ನೀಲಿ) ಮತ್ತು ಚೀನಾ ಆಟಗಾರ್ತಿಯರ ನಡುವೆ ಪೈಪೋಟಿ   

ಮಸ್ಕತ್‌: ಗೋಲ್‌ಕೀಪರ್‌ ನಿಧಿ ಅವರು ಪೆನಾಲ್ಟಿ ಶೂಟೌಟ್‌ನಲ್ಲಿ ತೋರಿದ ಅಮೋಘ ಪ್ರದರ್ಶನದ ಬಲದಿಂದ ಭಾರತ ವನಿತೆಯರ ತಂಡವು ಜೂನಿಯರ್‌ ಏಷ್ಯಾ ಕ‍ಪ್‌ ಹಾಕಿ ಟೂರ್ನಿಯ ಫೈನಲ್‌ನಲ್ಲಿ ಚೀನಾ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಉಳಿಸಿಕೊಂಡಿತು.

ಭಾನುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ನಿಗದಿತ ಅವಧಿಯ ಪಂದ್ಯವು 1–1 ಗೋಲುಗಳಿಂದ ರೋಚಕ ಟೈ ಆಗಿತ್ತು. ನಂತರ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ 3–2ರಿಂದ ಭಾರತ ಜಯಭೇರಿ ಬಾರಿಸಿ ಸತತ ಎರಡನೇ ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಶೂಟೌಟ್‌ ವೇಳೆ ಮೂರು ಬಾರಿಯ ಚಾಂಪಿಯನ್ ಚೀನಾ ತಂಡದ ಫಾರ್ವರ್ಡ್‌ ಆಟಗಾರ್ತಿಯರ ಮೂರು ಪ್ರಯತ್ನಗಳನ್ನು ವಿಫಲಗೊಳಿಸಿ ಪರಾಕ್ರಮ ಮೆರೆದ ನಿಧಿ ಗೆಲುವಿನ ರೂವಾರಿಯಾದರು. ನಿಗದಿತ ಅವಧಿಯ ಪಂದ್ಯದಲ್ಲೂ ನಿಧಿ ಉತ್ತಮ ಆಟ ಪ್ರದರ್ಶಿಸಿದ್ದರು.

ADVERTISEMENT

ಪಂದ್ಯದ 30ನೇ ನಿಮಿಷದಲ್ಲಿ ನಾಯಕಿ ಜಿಂಜುವಾಂಗ್ ತಾನ್ ಅವರು ಚೀನಾ ತಂಡಕ್ಕೆ ಮುನ್ನಡೆ ಒದಗಿಸಿದರು. ಹೀಗಾಗಿ, ಮಧ್ಯಂತರದ ವೇಳೆಗೆ ಚೀನಾ ತಂಡವು 1–0 ಮುನ್ನಡೆ ಪಡೆದಿತ್ತು. ಮೂರನೇ ಕ್ವಾರ್ಟರ್‌ನಲ್ಲಿ ಭಾರತದ ಆಟಗಾರ್ತಿಯರು ಚುರುಕಿನ ಆಟವಾಡಿದರು. 41ನೇ ನಿಮಿಷದಲ್ಲಿ ಭಾರತದ ಸಿವಾಚ್ ಕನಿಕಾ ಚೆಂಡನ್ನು ಗುರಿ ಸೇರಿಸಿದಾಗ ತಂಡಗಳ ಸ್ಕೋರ್‌ 1–1 ಸಮನಾಯಿತು.

ಶೂಟೌಟ್‌ನಲ್ಲಿ ಭಾರತದ ಸಾಕ್ಷಿ ರಾಣಾ, ಇಶಿಕಾಮ, ಸುನೆಲಿಟಾ ಟೊಪ್ಪೊ ಭಾರತದ ಪರ ಚೆಂಡನ್ನು ಗುರಿ ಸೇರಿಸಿದರು. ಮುಮ್ತಾಜ್ ಖಾನ್ ಮತ್ತು ಕನಿಕಾ ಸಿವಾಚ್ ಅವರ ಪ್ರಯತ್ನಗಳನ್ನು ಚೀನಾದ ಗೋಲ್‌ಕೀಪರ್‌ ವಿಫಲಗೊಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.