ADVERTISEMENT

ಮಂಗಳೂರು: ಎನ್‌ಎಂಪಿಎ 10ಕೆ ‘ಚಿನ್ನದ’ ಓಟಕ್ಕೆ ಸಿದ್ಧತೆ ಆರಂಭ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 14:37 IST
Last Updated 4 ಆಗಸ್ಟ್ 2025, 14:37 IST
<div class="paragraphs"><p>ಎನ್‌ಎಂಪಿಎ ಸುವರ್ಣ ಸಂಭ್ರಮದ ಅಂಗವಾಗಿ ನಡೆಯಲಿರುವ 10ಕೆ ಓಟದ ಸ್ಪರ್ಧೆಯ ಟಿ–ಶರ್ಟ್‌ ಸೋಮವಾರ ಬಿಡುಗಡೆ ಮಾಡಲಾಯಿತು.&nbsp;ಪದ್ಮನಾಭಾಚಾರ್‌, ಎ.ವಿ ರಮಣ, ಫಾದರ್‌ ಪ್ರವೀಣ್ ಮಾರ್ಟಿಸ್‌ ಹಾಗೂ ಗಣೇಶ ಶರ್ಮ ಪಾಲ್ಗೊಂಡಿದ್ದರು.</p></div>

ಎನ್‌ಎಂಪಿಎ ಸುವರ್ಣ ಸಂಭ್ರಮದ ಅಂಗವಾಗಿ ನಡೆಯಲಿರುವ 10ಕೆ ಓಟದ ಸ್ಪರ್ಧೆಯ ಟಿ–ಶರ್ಟ್‌ ಸೋಮವಾರ ಬಿಡುಗಡೆ ಮಾಡಲಾಯಿತು. ಪದ್ಮನಾಭಾಚಾರ್‌, ಎ.ವಿ ರಮಣ, ಫಾದರ್‌ ಪ್ರವೀಣ್ ಮಾರ್ಟಿಸ್‌ ಹಾಗೂ ಗಣೇಶ ಶರ್ಮ ಪಾಲ್ಗೊಂಡಿದ್ದರು.

   

ಮಂಗಳೂರು: ನವಮಂಗಳೂರು ಬಂದರು ನಿಗಮದ (ಎನ್‌ಎಂಪಿಎ) ಸುವರ್ಣ ಸಂಭ್ರಮದ ಅಂಗವಾಗಿ ಆಯೋಜಿಸಿರುವ 10ಕೆ ಓಟದ ಸ್ಪರ್ಧೆ ಇದೇ 31ರಂದು ನಡೆಯಲಿದ್ದು ಸ್ಪರ್ಧೆಯ ಟಿ–ಶರ್ಟ್‌, ಲಾಂಛನ ಮತ್ತು ವಿಡಿಯೊವನ್ನು ಸೋಮವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.

ಮಂಗಳೂರು ರನ್ನರ್ಸ್ ಕ್ಲಬ್ ಮತ್ತು ಬಿಎನ್‌ಐ ಸಹಯೋಗದಲ್ಲಿ ನಡೆಯುವ ಓಟ ಬೆಳಿಗ್ಗೆ 6 ಗಂಟೆಗೆ ಆರಂಭವಾಗಲಿದ್ದು ಸ್ಪರ್ಧೆಯಲ್ಲಿ ವಿವಿಧ ವಯೋಮಾನದವರಿಗೆ 5ಕೆ ಮತ್ತು 3ಕೆ ಓಟವೂ ಇದೆ. ಮೂರೂ ಸ್ಪರ್ಧೆಗಳು ಪಣಂಬೂರು ಬೀಚ್‌ನಲ್ಲಿ ಆರಂಭಗೊಂಡು ಅಲ್ಲೇ ಮುಕ್ತಾಯಗೊಳ್ಳಲಿವೆ ಎಂದು ಆಯೋಜನಾ ಸಮಿತಿಯ ಸೌರವ್ ಘೋಷ್ ತಿಳಿಸಿದರು.

ADVERTISEMENT

ಟಿ–ಶರ್ಟ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಎನ್ಎಂಪಿಎ ಅಧ್ಯಕ್ಷ ಎ.ವಿ ರಮಣ ‘ಸುವರ್ಣ ಮಹೋತ್ಸವದ ಪ್ರಮುಖ ಕಾರ್ಯಕ್ರಮ 10ಕೆ ಓಟವಾಗಿದ್ದು ಈ ಮೂಲಕ ಫಿಟ್‌ನೆಸ್‌ ಸಂದೇಶವನ್ನು ಸಾರುವುದರೊಂದಿಗೆ ಎನ್‌ಎಂಪಿಎಗೆ ಸಮಾಜ ನೀಡಿರುವ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುವ ಕಾರ್ಯವನ್ನೂ ಮಾಡಲಿದೆ. ಇಲ್ಲಿಂದ ಸಂಸ್ಥೆ ಅಭಿವೃದ್ಧಿಯ ಮತ್ತೊಂದು ಹೆಜ್ಜೆ ಇರಿಸಲಿದೆ ಎಂದು ಹೇಳಿದರು. 

ಎನ್‌ಎಂಪಿಎಯ ಆರಂಭದ ಕಾಲದಲ್ಲಿ ಒಂದು ಲಕ್ಷ ಟನ್‌ ಸರಕು ಸಾಗಣೆ ಆಗುತ್ತಿತ್ತು. ಅದು ಇಗ 46 ಮಿಲಿಯ ಟನ್‌ಗೆ ಏರಿದ್ದು ಮುಂದಿನ ಆರ್ಥಿಕ ವರ್ಷದಲ್ಲಿ 50 ಮಿಲಿಯ ಟನ್‌ಗೆ ತಲುಪುವ ನಿರೀಕ್ಷೆ ಇದೆ. ಈ ಮೂಲಕ ₹ 550 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಈಗ ಸಂಸ್ಥೆಯ ಆದಾಯ ₹ 450 ಕೋಟಿ ಇದೆ ಎಂದು ಅವರು ತಿಳಿಸಿದರು. 

₹ 6471 ಕೋಟಿ ಮೊತ್ತದ ಕಸ್ಟಮ್ಸ್ ಡ್ಯೂಟಿ ಮತ್ತು ₹ 5 ಸಾವಿರ ಕೋಟಿ ಮೊತ್ತಕ್ಕೂ ಹೆಚ್ಚಿನ ಜಿಎಸ್‌ಟಿ ಪಾವತಿಸುತ್ತಿದೆ. ಸಂಸ್ಥೆಯ ಸಾಮಾಜಿಕ ಬದ್ಧತೆಯ ಭಾಗವಾಗಿ ನಿರ್ಮಿಸಿರುವ ಸುಸಜ್ಜಿತ ಆಸ್ಪತ್ರೆ ಈ ತಿಂಗಳಾಂತ್ಯದಲ್ಲಿ ಆರಂಭವಾಗಲಿದೆ. ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಿರುವ ಈ ಆಸ್ಪತ್ರೆಗೆ ₹ 350 ಕೋಟಿ ವ್ಯಯಿಸಲಾಗಿದೆ ಎಂದು ಅವರು ವಿವರಿಸಿದರು. 

ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಶ್ಯಾಮಪ್ರಸಾದ್ ಕಾಮತ್‌, ಎನ್‌ಎಂಪಿಎ ಉಪಾಧ್ಯಕ್ಷೆ ಎಸ್‌.ಶಾಂತಿ, ಶ್ರೀನಿವಾಸ ವಿಶ್ವವಿದ್ಯಾಲಯದ ಉಪಕುಲಪತಿ ಎ.ಶ್ರೀನಿವಾಸ ರಾವ್‌, ಸೇಂಟ್ ಅಲೋಶಿಯಸ್‌ ವಿಶ್ವವಿದ್ಯಾಲಯದ ಕುಲಪತಿ ಫಾದರ್‌ ಪ್ರವೀಣ್ ಮಾರ್ಟಿಸ್‌, ಬಿಎನ್ಐ ಮಂಗಳೂರು ಘಟಕದ ಕಾರ್ಯನಿರ್ವಾಹಕ ನಿರ್ದೇಶಕ ಗಣೇಶ ಶರ್ಮ, ಎನ್‌ಎಂಪಿಎ ಮುಖ್ಯ ವಿಚಕ್ಷಣಾ ಅಧಿಕಾರಿ ಪದ್ಮನಾಭಾಚಾರ್‌, ಓಟದ ರಾಯಭಾರಿ, ಮ್ಯಾರಥಾನ್ ಓಟಗಾರ ಸತೀಶ್ ಗುಜರನ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.