ಡಿ.ಗುಕೇಶ್
ಸ್ಟಾವೆಂಜರ್ (ನಾರ್ವೆ): ಹಾಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್, ನಾರ್ವೆ ಚೆಸ್ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಅಮೆರಿಕದ ಗ್ರ್ಯಾಂಡ್‌ಮಾಸ್ಟರ್ ಫ್ಯಾಬಿಯಾನೊ ಕರುವಾನ ಅವರನ್ನು ‘ಆರ್ಮ್‌ಗೆಡನ್’ನಲ್ಲಿ (ಟೈಬ್ರೇಕರ್) ಸೋಲಿಸಿದರು. ಆದರೆ ಭಾರತದ ಇನ್ನೊಬ್ಬ ಆಟಗಾರ ಅರ್ಜುನ್ ಇರಿಗೇಶಿ ಅವರು ಆತಿಥೇಯ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರಿಗೆ ಸೋಲುವ ಮೂಲಕ ಭಾರತ ‘ಓಪನ್’ ವಿಭಾಗದಲ್ಲಿ ಶುಕ್ರವಾರ ಮಿಶ್ರಫಲ ಅನುಭವಿಸಿತು.
ವಿಶ್ವದ ಮೂರನೇ ಕ್ರಮಾಂಕದ ಆಟಗಾರ ಕರುವಾನ ಒಂದು ಪಾನ್ (ಕಾಲಾಳು) ಹೆಚ್ಚುವರಿ ಹೊಂದಿದ್ದರು. ಆದರೆ ಅದರ ಲಾಭವನ್ನು ಪಡೆಯಲಾಗಲಿಲ್ಲ. 19 ವರ್ಷ ವಯಸ್ಸಿನ ಗುಕೇಶ್ ಉತ್ತಮ ರಕ್ಷಣಾ ಕೌಶಲ ಪ್ರದರ್ಶಿಸಿದರು. ಹೀಗಾಗಿ ಪಂದ್ಯ ನಾಲ್ಕು ಗಂಟೆಗಳ ದೀರ್ಘ ಆಟದ ನಂತರ ಡ್ರಾ ಆಯಿತು. ಫಲಿತಾಂಶ ನಿರ್ಧರಿಸಲು ನಡೆಯುವ ಕಾಲಮಿತಿಯ ಆರ್ಮ್‌ಗೆಡನ್‌ನಲ್ಲಿ ಗುಕೇಶ್ ಜಯಶಾಲಿಯಾದರು. ಈ ಟೂರ್ನಿಯಲ್ಲಿ ಡ್ರಾಕ್ಕೆ ಮತ್ತು ಆರ್ಮ್‌ಗೆಡನ್‌ನಲ್ಲಿ ಗೆಲುವಿಗೆ ಪ್ರತ್ಯೇಕ ಪಾಯಿಂಟ್ ನೀಡಲಾಗುತ್ತದೆ.
ಗುಕೇಶ್ ಮತ್ತು ಇರಿಗೇಶಿ ಅವರು ನಾಲ್ಕನೇ ಸುತ್ತಿನ ನಂತರ ತಲಾ 4.5 ಪಾಯಿಂಟ್ಸ್ ಕಲೆಹಾಕಿದ್ದು ನಾಲ್ಕನೇ ಸ್ಥಾನದಲ್ಲಿದ್ದಾರೆ. ಹಾಲಿ ಚಾಂಪಿಯನ್ ಹಾಗೂ ವಿಶ್ವದ ಅಗ್ರ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ (8 ಪಾಯಿಂಟ್ಸ್) ಮೊದಲ ಸ್ಥಾನದಲ್ಲಿದ್ದಾರೆ. ಕರುವಾನ (7 ಪಾಯಿಂಟ್ಸ್) ಮತ್ತು ಅಮೆರಿಕದ ಇನ್ನೊಬ್ಬ ಗ್ರ್ಯಾಂಡ್‌ಮಾಸ್ಟರ್ ಹಿಕಾರು ನಕಾಮುರ (5.5) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
‘ಕ್ಲಾಸಿಕಲ್ ಗೇಮ್‌ನಲ್ಲಿ ಹಿನ್ನಡೆಯಲ್ಲಿದ್ದೆ. ಅದೃಷ್ಟವಶಾತ್ ಸೋಲಲಿಲ್ಲ. ಆರ್ಮ್‌ಗೆಡನ್‌ನಲ್ಲಿ ನನ್ನಿಂದ ಉತ್ತಮ ಆಟ ಮೂಡಿಬಂತು’ ಎಂದು ಗುಕೇಶ್ ಪ್ರತಿಕ್ರಿಯಿಸಿದರು.
ಕಾರ್ಲ್‌ಸನ್ ಅವರು ಕ್ಲಾಸಿಕಲ್ ಗೇಮ್‌ನಲ್ಲೇ ಇರಿಗೇಶಿ ಅವರನ್ನು ಸೋಲಿಸುವ ಮೂಲಕ ಪೂರ್ಣ ಮೂರು ಪಾಯಿಂಟ್ ಪಡೆದರು. ಈ ಹಿಂದಿನ ಪಂದ್ಯದಲ್ಲಿ ಇರಿಗೇಶಿ, ಕರುವಾನ ಅವರಿಗೆ ಸೋತಿದ್ದರು.
ನಕಾಮುರ (5.5) ಅವರು ಇನ್ನೊಂದು ಪಂದ್ಯದಲ್ಲಿ ಚೀನಾದ ವೀ ಯಿ (4) ಅವರಿಗೆ ಮಣಿದರು.
ಜಂಟಿ ಮುನ್ನಡೆಯಲ್ಲಿ ಹಂಪಿ:
ಉತ್ತಮ ಪೈಪೋಟಿ ಕಾಣುತ್ತಿರುವ ಮಹಿಳೆಯರ ವಿಭಾಗದಲ್ಲಿ ವಿಶ್ವ ಚಾಂಪಿಯನ್, ಚೀನಾದ ಜು ವೆನ್‌ಜುನ್ (5.5) ಅವರು ಭಾರತದ ಗ್ರ್ಯಾಂಡ್‌ಮಾಸ್ಟರ್ ಕೋನೇರು ಹಂಪಿ ಅವರನ್ನು ಸೋಲಿಸಿದರು.
ಭಾರತದ ಇನ್ನೊಬ್ಬ ಆಟಗಾರ್ತಿ ಆರ್.ವೈಶಾಲಿ ಇನ್ನೊಂದು ಪಂದ್ಯದಲ್ಲಿ ಆರ್ಮ್‌ಗೆಡನ್‌ನಲ್ಲಿ ಉಕ್ರೇನ್‌ನ ಅನ್ನಾ ಮುಝಿಚುಕ್ ಅವರನ್ನು ಸೋಲಿಸಿ ಅರ್ಧ ಪಾಯಿಂಟ್ ಹೆಚ್ಚಿಗೆ ಪಡೆದರು. ಇವರಿಬ್ಬರ ನಡುವಣ ಕ್ಲಾಸಿಕಲ್ ಪಂದ್ಯ ಡ್ರಾ ಆಗಿತ್ತು.
ಶುಕ್ರವಾರದ ಹಿನ್ನಡೆ ಹೊರತಾಗಿಯೂ ನಾಲ್ಕನೇ ಸುತ್ತಿನ ನಂತರ ಹಂಪಿ, ಮುಝಿಜುಕ್ ಜೊತೆ (ತಲಾ 7 ಪಾಯಿಂಟ್ಸ್) ಮುನ್ನಡೆ ಹಂಚಿಕೊಂಡಿದ್ದಾರೆ. ವೈಶಾಲಿ (3.5) ಆರನೇ ಸ್ಥಾನದಲ್ಲಿದ್ದಾರೆ. ಸ್ಪೇನ್‌ನ ಸಾರಾ ಖಾಡೆಮ್ (5), ಇನ್ನೊಂದು ಪಂದ್ಯದಲ್ಲಿ ಚೀನಾದ ಲಿ ಟಿಂಗ್ಜಿ (4) ಅವರನ್ನು ಮಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.