ADVERTISEMENT

ಬೆಂಗಳೂರಿನಲ್ಲಿ ಎಲ್ಲಿ ನೋಡಿದರಲ್ಲಿ ಆಟೋಟ ಸ್ಪರ್ಧೆಗಳೇ !

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 19:30 IST
Last Updated 29 ಸೆಪ್ಟೆಂಬರ್ 2019, 19:30 IST
   

ಬೆಂಗಳೂರಿನ ಅಷ್ಟದಿಕ್ಕುಗಳಲ್ಲಿಯೂ ಕಳೆದೊಂದು ವಾರದಿಂದ ಕ್ರೀಡಾಪಟುಗಳ ಕಾರುಬಾರು ಜೋರಾಗಿದೆ. ಯಾವ ದಿಕ್ಕಿಗೆ ಕಣ್ಣೋಟ ಬೀರಿದರೂ ಒಂದಿಲ್ಲೊಂದು ದೊಡ್ಡ ಕ್ರೀಡಾಕೂಟದ ಸೊಬಗು ಸೆಳೆಯುತ್ತದೆ.

ಕಂಠೀರವ ಕ್ರೀಡಾಂಗಣದ ಒಳಾಂಗಣದಲ್ಲಿ ಏಷ್ಯಾ ಮಹಿಳೆಯರ ಬ್ಯಾಸ್ಕೆಟ್‌ಬಾಲ್, ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ವಿಜಯ್ ಹಜಾರೆ ಟ್ರೋಫಿ ಪಂದ್ಯಗಳು, ಅತ್ತ ನಗರ ಹೊರವಲಯದ ಆಲೂರಿನ ಕ್ರೀಡಾಂಗಣದಲ್ಲಿಯೂ ಕ್ರಿಕೆಟ್ ಕಲರವ, ಇತ್ತ ಯಲಹಂಕ ದಾಟಿ ನಡೆದರೆ ಪ್ರಕಾಶ್ ಪಡುಕೋಣೆ–ರಾಹುಲ್ ದ್ರಾವಿಡ್ ಸ್ಪೋರ್ಟ್ಸ್‌ ಎಕ್ಸ್‌ಲೆನ್ಸ್‌ನಲ್ಲಿ ಏಷ್ಯಾ ಈಜು ಚಾಂಪಿಯನ್‌ಷಿಪ್‌ನ ಅಲೆಗಳು ಚಿಮ್ಮುತ್ತಿವೆ. ಒಂದೇ ವಾರದಲ್ಲಿ ಇಷ್ಟೆಲ್ಲ ಕ್ರೀಡೆಗಳನ್ನು ಸಂಘಟಿಸುತ್ತಿರುವ ಬೆಂಗಳೂರು ಈಗ ಕೇವಲ ಉದ್ಯಾನಗರಿ, ಸಿಲಿಕಾನ್ ಸಿಟಿಯಾಗಷ್ಟೇ ಉಳಿದಿಲ್ಲ. ದಿನದಿನಕ್ಕೆ ಕ್ರೀಡಾ ನಗರಿಯಾಗಿಯೂ ಬೆಳೆಯುತ್ತಿದೆ.

ಆಟೋಟದಲ್ಲಿಯೇ ಭವಿಷ್ಯ ರೂಪಿಸಿಕೊಳ್ಳಲು ರಾಜ್ಯ ಬೇರೆ ಬೇರೆ ಭಾಗಗಳಿಂದ ಮತ್ತು ದೇಶ–ವಿದೇಶಗಳಿಂದಲೂ ಯುವಸಮೂಹವೇ ನಗರಕ್ಕೆ ಹರಿದುಬರುತ್ತಿದೆ. ಬೆಂಗಳೂರಿನ ಹೃದಯಭಾಗದಲ್ಲಿರುವ ಕಂಠೀರವ ಕ್ರೀಡಾಂಗಣವನ್ನೇ ಕೇಂದ್ರವಾಗಿಟ್ಟುಕೊಂಡು ನೋಡಿದರೆ ಸುಮಾರು 25 ಕಿ.ಮೀ ಅಂತರದಲ್ಲಿ ಪ್ರಮುಖ ಕ್ರೀಡಾ ತಾಣಗಳು ಸಿಗುತ್ತವೆ. ಸಾರಿಗೆ ವ್ಯವಸ್ಥೆಗಳಿಂದಾಗಿ ಇದು ಹೆಚ್ಚು ದೂರ ಎನಿಸುವ ಕಾಲ ಈಗಿಲ್ಲ.

ADVERTISEMENT

ನಗರದಲ್ಲಿ ಹೋದ ವಾರ ಏಷ್ಯಾ ಈಜು ಸ್ಪರ್ಧೆಯ ನಾಲ್ಕು ವಿಭಾಗಗಳು ಮೂರು ಕಡೆ ಆದವು. ಪ್ರಕಾಶ ಪಡುಕೋಣೆ ಅಕಾಡೆಮಿ, ಕೆಂಗೇರಿ ಸಾಯ್ ಮತ್ತು ಕೆನ್ಸಿಂಗ್ಟನ್ ಈಜುಕೊಳದಲ್ಲಿ ಸ್ಪರ್ಧೆಗಳು ನಡೆದವು.ಇದೆಲ್ಲಕ್ಕಿಂತ ಕ್ರಿಕೆಟ್‌ ಒಂದು ಹೆಜ್ಜೆ ಮುಂದಿದೆ. ಕಳೆದ ಮೂರು ವರ್ಷಗಳಿಂದ ವಾರ್ಷಿಕ ಒಂದೂವರೆ ಸಾವಿರ ಪಂದ್ಯಗಳನ್ನು ಆಯೋಜಿಸುತ್ತಿದೆ. ಇದರಲ್ಲಿ ಪ್ರಥಮ ದರ್ಜೆ, ಅಂತರರಾಷ್ಟ್ರೀಯ ಟೂರ್ನಿಗಳ ಪಂದ್ಯಗಳೂ ಸೇರಿವೆ.

ಈ ಎಲ್ಲ ಕ್ರೀಡಾ ಸೌಲಭ್ಯಗಳಿಂದಾಗಿ ಕ್ರೀಡಾಕ್ಷೇತ್ರಕ್ಕೆ ಸಂಬಂಧಪಟ್ಟ ಉಪಕಸುಬುಗಳು ಕೂಡ ಬೆಳೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ಬೆಂಗಳೂರಿನ ಈ ಕ್ರೀಡಾ ಜಾಲದ ಮೇಲೆ ಒಂದು ಇಣುಕುನೋಟ ಇಲ್ಲಿದೆ.

ಇದನ್ನೂ ಓದಿ: ಆಟ ಬೊಂಬಾಟು

************

1)ಚಿನ್ನಸ್ವಾಮಿ ಕ್ರೀಡಾಂಗಣ,ಕಬ್ಬನ್ ರಸ್ತೆ ಬೆಂಗಳೂರು,ಕ್ರೀಡೆ: ಕ್ರಿಕೆಟ್ , ರ್ವಹಣೆ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ,ಆಸನ ಸಾಮರ್ಥ್ಯ; 34000,ದರ್ಜೆ: ಅಂತರರಾಷ್ಟ್ರೀಯ,ತರಬೇತಿ: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ, ಜಿಮ್ನಾಷಿಯಂ, ಈಜುಕೊಳ, ಒಳಾಂಗಣ, ಕ್ಲಬ್ ಹೌಸ್ ಇತ್ಯಾದಿ.

2) ಕೆಎಸ್‌ಎಲ್‌ಟಿಎ ಕೋರ್ಟ್‌,ಕ್ರೀಡೆ: ಲಾನ್ ಟೆನಿಸ್,ದೂರ: 1.8 ಕಿ.ಮೀ.,ನಿರ್ವಹಣೆ: ಕರ್ನಾಟಕ ರಾಜ್ಯ ಲಾನ್‌ ಟೆನಿಸ್ ಸಂಸ್ಥೆ.

ಸ್ಥಳ: ಕಬ್ಬನ್‌ ಪಾರ್ಕ್‌, ಸೆಂಟ್ರಲ್ ಲೈಬ್ರರಿಹತ್ತಿರ, ಪ್ರಮುಖ ಕೂಟ: ಎಟಿಪಿ, ಐಟಿಎಫ್, ಡೆವಿಸ್ ಕಪ್,ಸಾರಿಗೆ ಸೌಲಭ್ಯ: ಬಿಎಂಟಿಸಿ ಬಸ್, ಮೆಟ್ರೊ ರೈಲು

3)ಕಂಠೀರವ ಕ್ರೀಡಾಂಗಣ-ಕ್ರೀಡೆ: ಅಥ್ಲೆಟಿಕ್ಸ್‌, ಒಳಾಂಗಣ, ಬ್ಯಾಸ್ಕೆಟ್‌ಬಾಲ್, ಬ್ಯಾಡ್ಮಿಂಟನ್, ಕಬಡ್ಡಿ, ಫೆನ್ಸಿಂಗ್ ಇತ್ಯಾದಿ. ಬಹುತೇಕ ಕ್ರೀಡಾ ಸಂಸ್ಥೆಗಳ ಕಚೇರಿಗಳು. ಜಿಮ್ನಾಷಿಯಂ, ಕ್ರೀಡಾ ವಸತಿ ನಿಲಯ. ನಿರ್ವಹಣೆ: ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ.ದರ್ಜೆ: ಅಂತರರಾಷ್ಟ್ರೀಯ,ದೂರ: 2.8 ಕಿ.ಮೀ.

4) ಒಳಾಂಗಣ ಕ್ರೀಡಾಂಗಣ,ಸ್ಥಳ: ಕೋರಮಂಗಲ,ದೂರ: 9 ಕಿ.ಮೀ,ಕ್ರೀಡೆ: ಒಳಾಂಗಣ ಕ್ರೀಡೆಗಳು,ನಿರ್ವಹಣೆ: ಕರ್ನಾಟಕ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ.

5) ಬ್ಯಾಡ್ಮಿಂಟನ್ ಕೋರ್ಟ್,ಸ್ಥಳ: ವಸಂತನಗರ,ದೂರ: 3.8 ಕಿ.ಮೀ,ನಿರ್ವಹಣೆ: ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಕ್ರೀಡೆ ಸೌಲಭ್ಯ: ಬ್ಯಾಡ್ಮಿಂಟನ್, ಸ್ಕ್ವಾಷ್, ಈಜುಕೊಳ, ಕ್ಲಬ್‌ಹೌಸ್.

6) ಸ್ನೂಕರ್–ಬಿಲಿಯರ್ಡ್ಸ್‌ ಕ್ಲಬ್,ವಸಂತನಗರ (ಕೆಬಿಎ ಪಕ್ಕ),ದೂರ: 3.8 ಕಿ.ಮೀ,ನಿರ್ವಹಣೆ: ಕರ್ನಾಟಕ ಸ್ನೂಕರ್–ಬಿಲಿಯರ್ಡ್ಸ್ ಸಂಸ್ಥೆ,ಕ್ರೀಡೆ ಸೌಲಭ್ಯ: ಸ್ನೂಕರ್, ಬಿಲಿಯರ್ಡ್ಸ್‌, ಈಜುಕೊಳ, ಕ್ಲಬ್‌

7) ಬೆಂಗಳೂರು ಗಾಲ್ಫ್‌ ಕೋರ್ಸ್,ಕ್ರೀಡೆ: ಗಾಲ್ಫ್‌, ಕ್ಲಬ್‌,ನಿರ್ವಹಣೆ: ಬೆಂಗಳೂರು ಗಾಲ್ಫ್‌ ಕ್ಲಬ್,ದೂರ: 2 ಕಿಮೀ

8) ಕರ್ನಾಟಕ ಗಾಲ್ಫ್‌ ಕ್ಲಬ್,ಸ್ಥಳ: ದೊಮ್ಮಲೂರು,ನಿರ್ವಹಣೆ: ಕರ್ನಾಟಕ ಗಾಲ್ಫ್ ಕ್ಲಬ್,ದೂರ: 8 ಕಿ.ಮೀ.

9) ಫುಟ್‌ಬಾಲ್ ಕ್ರೀಡಾಂಗಣ,ಸ್ಥಳ: ಅಶೋಕನಗರ,ನಿರ್ವಹಣೆ: ಬೆಂಗಳೂರು ಫುಟ್‌ಬಾಲ್ ಸಂಸ್ಥೆ (ಬಿಡಿಎಫ್‌ಎ)ದೂರ: 1.8 ಕಿ.ಮೀ

10) ಸಾಯ್ ಕೇಂದ್ರ,ಸ್ಥಳ: ಜ್ಞಾನಭಾರತಿ ಸಮೀಪ,ನಿರ್ವಹಣೆ: ಭಾರತೀಯ ಕ್ರೀಡಾ ಪ್ರಾಧಿಕಾರ,ಕ್ರೀಡೆ: ಅಥ್ಲೆಟಿಕ್ಸ್‌, ಹಾಕಿ, ಒಳಾಂಗಣ ಕ್ರೀಡೆಗಳು, ವಸತಿ ನಿಲಯಗಳು, ಈಜು ಇತ್ಯಾದಿ,ದೂರ: 12 ಕಿ.ಮೀ.

11) ಪ್ರಕಾಶ್ ಪಡುಕೋಣೆ–ರಾಹುಲ್ ದ್ರಾವಿಡ್ ಕ್ರೀಡಾ ಕೇಂದ್ರ,ಸೌಲಭ್ಯಗಳು: 100ಮೀ. ಟ್ರ್ಯಾಕ್‌, ಟೆನಿಸ್‌ ಅಂಕಣ, ಬಾಸ್ಕೆಟ್‌ ಬಾಲ್‌ ಅಂಗಣ, 50ಮೀ. ಉದ್ದದ 10 ಲೈನ್‌ಗಳ ಈಜುಕೊಳ, ಸಾಯ್‌-ಅಭಿನವ್‌ ಬಿಂದ್ರ ಟಾರ್ಗೆಟಿಂಗ್‌ ಪ್ರದರ್ಶನ ಕೇಂದ್ರ, ಸ್ಕ್ವಾಷ್‌ ಕೋರ್ಟ್‌, ಬ್ಯಾಡ್ಮಿಂಟನ್‌ ಕೋರ್ಟ್‌, ಒಳಾಂಗಣ ಕ್ರಿಕೆಟ್‌ ಮೈದಾನ, ಮಕ್ಕಳ ಕ್ರಿಕೆಟ್‌ ಮೈದಾನ.ಸ್ಥಳ: ಯಲಹಂಕ ಸಮೀಪ,ದೂರ: 26 ಕಿ.ಮೀ.

12) ಅಲೂರು ಕ್ರಿಕೆಟ್‌ ಕ್ರೀಡಾಂಗಣ,ಸ್ಥಳ: ಆಲೂರು, ನೆಲಮಂಗಲ ಸಮೀಪ,ಸೌಲಭ್ಯ: ಮೂರು ಕ್ರಿಕೆಟ್ ಮೈದಾನಗಳು, ಒಳಾಂಗಣ ಕ್ರೀಡಾಂಗಣ, ಕ್ಲಬ್‌ ಹೌಸ್,ಕ್ರೀಡೆ: ಕ್ರಿಕೆಟ್,ದೂರ: 22 ಕಿ.ಮೀ,ದರ್ಜೆ: ಪ್ರಥಮದರ್ಜೆ, ಲಿಸ್ಟ್ ಎ ಕ್ರಿಕೆಟ್ ಪಂದ್ಯಗಳು

13) ಜಸ್ಟ್ ಕ್ರಿಕೆಟ್ ಮೈದಾನ,ಸ್ಥಳ: ರಾಜಾನುಕುಂಟೆ,ದೂರ: 22 ಕಿ.ಮೀ.,ಸೌಲಭ್ಯ: ಕ್ರಿಕೆಟ್ ಮೈದಾನ, ಒಳಾಂಗಣ ಕ್ರಿಕೆಟ್ ಮೈದಾನ, ಜಿಮ್ನಾಷಿಯಂ.ನಿರ್ವಹಣೆ: ಜಸ್ಟ್‌ ಕ್ರಿಕೆಟ್ ಕ್ಲಬ್,ದರ್ಜೆ: ಪ್ರಥಮ ದರ್ಜೆ ಕ್ರಿಕೆಟ್

14) ಅಂಜು ಬಾಬಿ ಜಾರ್ಕ್ ಅಕಾಡೆಮಿ,ಸ್ಥಳ: ಕೆಂಗೇರಿ, ಮೈಸೂರು ನೈಸ್ ರಸ್ತೆ,ಸೌಲಭ್ಯ: ಟ್ರ್ಯಾಕ್‌ ಅ್ಯಂಡ್ ಫೀಲ್ಡ್ ಮತ್ತಿತರ, ಕ್ರೀಡೆಗಳು,ದೂರ: 25 ಕಿ.ಮೀ.

ಒಂದೇ ಪ್ರದೇಶದಲ್ಲಿ ಬ್ಯಾಡ್ಮಿಂಟನ್‌ ಸೇರಿದಂತೆ ವಿವಿಧ ಕ್ರೀಡೆಗಳ ಅಕಾಡೆಮಿ ಮತ್ತು ತರಬೇತಿ ಕೇಂದ್ರ ನಿರ್ಮಾಣವಾಗಿರುವುದು ದೇಶದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸಿಕ್ಕ ಅತ್ಯುತ್ತಮ ಅವಕಾಶವಾಗಿದೆ. ನನ್ನ ವೃತ್ತಿ ಜೀವನದಲ್ಲಿ ಕೋರ್ಟ್‌ಗಳ ಕೊರತೆ ಎದುರಿಸಿದ್ದೆ. ಕ್ರಮೇಣ ಕೋಟ್‌ಗರ್ಳ ಸಂಖ್ಯೆ ಹೆಚ್ಚಿತು. ಇದೀಗ ಒಂದೇ ಕೇಂದ್ರದಲ್ಲಿ 16 ಕೋರ್ಟ್‌ಗಳು ನಿರ್ಮಾಣವಾಗಿವೆ. ಇದನ್ನು ಕ್ರೀಡಾಪಟುಗಳು ಬಳಸಿಕೊಳ್ಳಬೇಕು. ಬೇರೆ ಕ್ರೀಡೆಗಳಿಗೂ ಇಲ್ಲಿ ಆದ್ಯತೆ ಸಿಕ್ಕಿದೆ.
ಪ್ರಕಾಶ್‌ ಪಡುಕೋಣೆ
ಹಿರಿಯ ಬ್ಯಾಡ್ಮಿಂಟನ್ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.