ನವದೆಹಲಿ: ಜಾವೆಲಿನ್ ತಾರೆ ನೀರಜ್ ಚೋಪ್ರಾ ಮತ್ತು ಶೂಟರ್ ಮನು ಭಾಕರ್ ಸೇರಿದಂತೆ ಪ್ಯಾರಿಸ್ ಒಲಿಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದ ಭಾರತದ ಕ್ರೀಡಾಪಟುಗಳಿಗೆ ಭಾರತ ಒಲಿಂಪಿಕ್ ಸಂಸ್ಥೆ ಸೋಮವಾರ ನಡೆದ ಸಮಾರಂಭದಲ್ಲಿ ನಗದು ಬಹುಮಾನ ನೀಡಿ ಪುರಸ್ಕರಿಸಿತು.
ಜಾವೆಲಿನ್‌ನಲ್ಲಿ ಬೆಳ್ಳಿ ಗೆದ್ದಿದ್ದ ಚೋಪ್ರಾ ಅವರು ದೇಶದಿಂದ ಹೊರಗಿದ್ದ ಕಾರಣ ಅವರ ಪರವಾಗಿ ಭಾರತ ಅಥ್ಲೆಟಿಕ್ ಫೆಡರೇಷನ್ ಅಧಿಕಾರಿಯೊಬ್ಬರು ₹75 ಲಕ್ಷ ಮೊತ್ತದ ಚೆಕ್ ಅನ್ನು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರಿಂದ ಸ್ವೀಕರಿಸಿದರು. ಚೋಪ್ರಾ ಅವರ ಅಂದಿನ ಕೋಚ್ ಆಗಿದ್ದ ಜರ್ಮನಿಯ ಬಾರ್ತೊನೀಝ್ ಅವರಿಗೆ ₹20 ಲಕ್ಷ ಬಹುಮಾನ ನೀಡಲಾಯಿತು. ಚೋಪ್ರಾ ಅವರು ಪ್ರಸ್ತುತ ಝೆಕ್ ಗಣರಾಜ್ಯದ ಯಾನ್ ಜೆಲೆಜ್ನಿ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
ಮನು ಭಾಕರ್ ಅವರು 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಗೆದ್ದ ವೈಯಕ್ತಿಕ ಕಂಚಿನ ಪದಕಕ್ಕೆ ₹50 ಲಕ್ಷ ಬಹುಮಾನ ಪಡೆದರು. 10 ಮೀ. ಮಿಶ್ರ ಪಿಸ್ತೂಲ್ ವಿಭಾಗದಲ್ಲಿ ಗೆದ್ದ ಕಂಚಿನ ಪದಕಕ್ಕಾಗಿ ಸರಬ್ಜೋತ್ ಸಿಂಗ್ ಜೊತೆ ₹50 ಲಕ್ಷ ಹಂಚಿಕೊಂಡರು. ಮನು ಅವರ ಕೋಚ್ ಜಸ್ಪಾಲ್ ರಾಣಾ ಅವರಿಗೆ ₹10 ಲಕ್ಷ ನೀಡಿ ಗೌರವಿಸಲಾಯಿತು. ಮಿಶ್ರ ತಂಡ ವಿಭಾಗದಲ್ಲಿ ಅವರು ₹15 ಲಕ್ಷ ಮೊತ್ತವನ್ನು ಅಭಿಷೇಕ್ ರಾಣಾ (ಸರಬ್ಜೋತ್ ಅವರ ಕೋಚ್) ಜೊತೆ ಹಂಚಿಕೊಂಡರು.
57 ಕೆ.ಜಿ. ಫ್ರೀಸ್ಟೈಲ್‌ನಲ್ಲಿ ಗೆದ್ದ ಕಂಚಿನ ಪದಕ ಗೆದ್ದ ಕುಸ್ತಿಪಟು ಅಮನ್ ಸೆಹ್ರಾವತ್ ಅವರು ₹50 ಲಕ್ಷ ಬಹುಮಾನ ಪಡೆದರು. ಅವರ ಕೋಚ್ ಅಲಿ ಶಬನೋವ್ ಪರವಾಗಿ ಅಮನ್ ₹15 ಲಕ್ಷ ಮೊತ್ತ ಸ್ವೀಕರಿಸಿದರು.
ಮತ್ತೊಬ್ಬ ಶೂಟರ್, 50 ಮೀ. ರೈಫಲ್ 3 ಪೊಷಿಷನ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸ್ವಪ್ನಿಲ್ ಕುಸಳೆ ಅವರು ₹50 ಲಕ್ಷ ಬಹುಮಾನ ಪಡೆದರು. ಅವರ ಕೋಚ್ ದೀಪಾಲಿ ದೇಶಪಾಂಡೆ ಅವರಿಗೆ ₹15 ಲಕ್ಷ ನೀಡಿ ಪುರಸ್ಕರಿಸಲಾಯಿತು.
ಕಂಚಿನ ಪದಕ ಗೆದ್ದ ಪುರುಷರ ಹಾಕಿ ತಂಡದ ಸದಸ್ಯರಿಗೆ ತಲಾ ₹10 ಲಕ್ಷ ಬಹುಮಾನ ಸ್ವೀಕರಿಸಿದರು. ಕೋಚ್ ಕ್ರೇಗ್ ಫುಲ್ಟನ್ ಅವರಿಗೆ ₹20 ಲಕ್ಷ ನೀಡಲಾಯಿತು.
ಮಾಂಡವೀಯ ಜೊತೆ ಪಿ.ಟಿ.ಉಷಾ ಅವರೂ ಪದಕ ವಿಜೇತರನ್ನು ಗೌರವಿಸಿದರು. ಒಲಿಂಪಿಕ್ ಸಂಸ್ಥೆಯ ಬಹುತೇಕ ಕಾರ್ಯಕಾರಿ ಸಮಿತಿ ಸದಸ್ಯರು ಸಮಾರಂಭದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.