ADVERTISEMENT

ಒಲಿಂಪಿಕ್‌ ಜ್ಯೋತಿ ಹಸ್ತಾಂತರ: ಇಂದು ಜಪಾನ್‌ಗೆ ವಿಶೇಷ ವಿಮಾನದಲ್ಲಿ ಆಗಮನ

ರಾಯಿಟರ್ಸ್
Published 20 ಮಾರ್ಚ್ 2020, 4:49 IST
Last Updated 20 ಮಾರ್ಚ್ 2020, 4:49 IST
ಅಥೆನ್ಸ್‌ನ ಪಾನಥೆನಯಿಕ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸರಳ ಸಮಾರಂಭದಲ್ಲಿ ಗ್ರೀಸ್‌ ಒಲಿಂಪಿಕ್‌ ಸಮಿತಿ ಅಧ್ಯಕ್ಷ ಸ್ಪಿರೋಸ್‌ ಕಾಪ್ರಲೊಸ್‌ (ಎಡಗಡೆ) ಅವರು ಒಲಿಂಪಿಕ್‌ ಜ್ಯೋತಿಯನ್ನು ಜಪಾನ್‌ನ ಒಲಿಂಪಿಯನ್‌ ಈಜುಗಾರ್ತಿ ಇಮೊಟೊ ನವೊಕೊ ಅವರಿಗೆ ಹಸ್ತಾಂತರಿಸಿದರು.
ಅಥೆನ್ಸ್‌ನ ಪಾನಥೆನಯಿಕ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸರಳ ಸಮಾರಂಭದಲ್ಲಿ ಗ್ರೀಸ್‌ ಒಲಿಂಪಿಕ್‌ ಸಮಿತಿ ಅಧ್ಯಕ್ಷ ಸ್ಪಿರೋಸ್‌ ಕಾಪ್ರಲೊಸ್‌ (ಎಡಗಡೆ) ಅವರು ಒಲಿಂಪಿಕ್‌ ಜ್ಯೋತಿಯನ್ನು ಜಪಾನ್‌ನ ಒಲಿಂಪಿಯನ್‌ ಈಜುಗಾರ್ತಿ ಇಮೊಟೊ ನವೊಕೊ ಅವರಿಗೆ ಹಸ್ತಾಂತರಿಸಿದರು.    

ಅಥೆನ್ಸ್‌: ಕೊರೊನಾ ಸೋಂಕು ಎಬ್ಬಿಸಿರುವ ಬಿರುಗಾಳಿಯಿಂದಾಗಿ ಒಲಿಂಪಿಕ್ಸ್‌ ಮೇಲೆ ಅನಿಶ್ಚಿತತೆಯ ಕಾರ್ಮೋಡ ಆವರಿಸಿದೆ. ಇದರನಡುವೆಯೇ ಟೋಕಿಯೊ 2020 ಒಲಿಂಪಿಕ್ಸ್‌ ಸಂಘಟಕರು ಗುರುವಾರ ಇಲ್ಲಿ ನಡೆದ ಸರಳ ಸಮಾರಂಭದಲ್ಲಿ ಒಲಿಂಪಿಕ್ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು.

ಮೊದಲ ಆಧುನಿಕ ಒಲಿಂಪಿಕ್‌ ಕ್ರೀಡೆಗಳು (1896) ನಡೆದಿದ್ದ ಅಥೆನ್ಸ್‌ನ ಪಾನಥೆನಯಿಕ್‌ ಕ್ರೀಡಾಂಗಣದಲ್ಲಿ ಸಂಪ್ರದಾಯದಂತೆ ಹಸ್ತಾಂತರ ಸಮಾರಂಭ ನಡೆಯಿತು. ಪ್ರೇಕ್ಷಕರಿಗೆ ನಿರ್ಬಂಧ ವಿಧಿಸಿದ ಪರಿಣಾಮ 50 ಸಾವಿರ ಆಸನ ಸಾಮರ್ಥ್ಯದ ಕ್ರೀಡಾಂಗಣ ಖಾಲಿಯಾಗಿತ್ತು.

ಟೋಕಿಯೊ ಕ್ರೀಡೆಗಳ ಪ್ರತಿನಿಧಿ ನವೊಕೊ ಇಮೊಟೊ ಅವರು ಗ್ರೀಸ್‌ ಒಲಿಂಪಿಕ್‌ ಸಮಿತಿ ಮುಖ್ಯಸ್ಥ ಸ್ಪಿರೋಸ್‌ ಕ್ಯಾಪ್ರಲೊಸ್‌ ಅವರಿಂದ ಜ್ಯೋತಿ ಯನ್ನು ಸ್ವೀಕರಿಸಿದರು. ಈ ವೇಳೆ ಕೆಲವೇ ಅಧಿಕಾರಿಗಳು ಹಾಜರಿದ್ದರು. ಈಜು ಗಾರ್ತಿ ಇಮೊಟೊ ಈ ಹಿಂದೆ ಒಲಿಂ
ಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು.

ADVERTISEMENT

‘ಟೋಕಿಯೊ 2020 ಗೊ’ ಎಂಬ ಆಕರ್ಷಕ ಬರಹವುಳ್ಳ ವಿಶೇಷ ವಿಮಾನದಲ್ಲಿ ಒಲಿಂಪಿಕ್‌ ಜ್ಯೋತಿ ಶುಕ್ರವಾರ ಜಪಾನ್‌ನ ಮಾಟ್ಸುಶಿಮಾ ವಾಯನೆಲೆಯಲ್ಲಿ ಇಳಿಯಲಿದೆ.

ಜಪಾನ್‌ನಲ್ಲಿ ಜ್ಯೋತಿಯಾತ್ರೆ ಫುಕೊಶಿಮಾದಿಂದ ಆರಂಭವಾಗಲಿದೆ. 121 ದಿನಗಳ ಕಾಲ ಜ್ಯೋತಿಯಾತ್ರೆ ನಡೆಯಲಿದೆ. ಫುಕೊಶಿಮಾ, 2011ರ ಸುನಾಮಿ ಮತ್ತು ಭೂಕಂಪದ ತಾಣ.

ಕೊರೊನಾ ಸೋಂಕು ಭೀತಿಯಿಂದ ಅಥೆನ್ಸ್‌ನಲ್ಲಿ ಆರು ದಿನಗಳ ಜ್ಯೋತಿಯಾತ್ರೆಯನ್ನು ಕಳೆದ ವಾರ ರದ್ದುಗೊಳಿಸಲಾಗಿತ್ತು. ಗ್ರೀಸ್‌ನಲ್ಲಿ ಕೋವಿಡ್‌–19ಕ್ಕೆ ಐವರು ಬಲಿಯಾಗಿದ್ದಾರೆ. 418 ಮಂದಿ ಸೋಂಕುಪೀಡಿತರಾಗಿದ್ದಾರೆ.

ಕೊರೊನಾ ಆತಂಕದ ನಡುವೆಯೂ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಮತ್ತು ಜಪಾನ್‌ ಸರ್ಕಾರ, ಸರಿಯಾದ ಸಮಯದಲ್ಲೇ ಕ್ರೀಡೆಗಳು ನಡೆಯಲಿವೆ ಎಂದು ಹೇಳುತ್ತಾ ಬಂದಿದೆ.

‘ಜ್ಯೋತಿಯ ಆಗಮನವು ಜಪಾನ್‌ ನಲ್ಲಿ ಸ್ಫೂರ್ತಿಯ ಮಟ್ಟವನ್ನು ಹೆಚ್ಚಿಸುವ ವಿಶ್ವಾಸವಿದೆ’ ಎಂದು ಟೋಕಿಯೊ ಕ್ರೀಡೆಗಳ ಮುಖ್ಯಸ್ಥ ಯೊಶಿರೊ ಮೊರಿ ತಿಳಿಸಿದ್ದಾರೆ.

ಒಲಿಂಪಿಕ್ಸ್‌ ಮುಂದೂಡಬಹುದು: ಕೊ
ಲಂಡನ್‌ (ಎಎಫ್‌ಪಿ):
‘ಕೊರೊನಾ ಪಿಡುಗು ವಿಶ್ವದ ಬಹುತೇಕ ಭಾಗಗಳಲ್ಲಿ ವ್ಯಾಪಿಸಿರುವ ಕಾರಣ ಟೋಕಿಯೊ ಕ್ರೀಡೆಗಳನ್ನು ಈ ವರ್ಷದ ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ಗೆ ಮುಂದೂಡಲು ಅವಕಾಶಗಳಿವೆ. ಆದರೆ ಕ್ರೀಡೆಗಳನ್ನು ರದ್ದುಮಾಡುವ ವಿಷಯದಲ್ಲಿ ನಿರ್ಧಾರವನ್ನು ತಕ್ಷಣಕ್ಕೆ ಕೈಗೊಳ್ಳುವುದು ಕಷ್ಟ’ ಎಂದುವಿಶ್ವ ಅಥ್ಲೆಟಿಕ್ಸ್‌ ಮುಖ್ಯಸ್ಥ ಸೆಬಾಸ್ಟಿಯನ್‌ ಕೊ ಹೇಳಿದ್ದಾರೆ.

ಕೋವಿಡ್‌–19 ಪಿಡುಗಿನಿಂದಾಗಿ ವಿಶ್ವದ ಕ್ರೀಡಾ ಕಾರ್ಯಕ್ರಮಗಳೆಲ್ಲವೂ ಏರುಪೇರಾಗಿವೆ. ಯೂರೊ 2020 ಫುಟ್‌ಬಾಲ್‌ ಟೂರ್ನಿ, ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಗಳನ್ನು ಮುಂದೂಡಲಾಗಿದೆ. ವಿವಿಧ ಕ್ರೀಡೆಗಳಲ್ಲಿ ‌‌ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗಳನ್ನೂ ಮುಂದೂಡಲಾಗಿದೆ. ಕೆಲವನ್ನು ರದ್ದು ಮಾಡಲಾಗಿದೆ.

ನಿಗದಿತ ಸಮಯದಲ್ಲೇ ಕ್ರೀಡೆಗಳನ್ನು ನಡೆಸಿದರೆ ಆರೋಗ್ಯವನ್ನು ಪಣಕ್ಕೆ ಒಡ್ಡಬೇಕಾದೀತು ಎಂದು ಕೆಲವು ಅಥ್ಲೀಟುಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಇದರ ಮಧ್ಯೆ ಕ್ರೀಡೆಗಳನ್ನು ನಿಗದಿತ ಸಮಯದಲ್ಲೇ (ಜುಲೈ 24ರಿಂದ ಆಗಸ್ಟ್‌ 9) ನಡೆಸಬೇಕೆನ್ನುವುದು ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ ಗುರಿ ಎಂದು ಐಒಸಿ ಮುಖ್ಯಸ್ಥ ಥಾಮಸ್‌ ಬ್ಯಾಕ್‌ ಈ ವಾರದ ಆರಂಭದಲ್ಲಿ ತಿಳಿಸಿದ್ದರು.

ಆದರೆ, ಟೋಕಿಯೊ ಒಲಿಂಪಿಕ್ಸ್‌ ಸಮನ್ವಯ ಸಮಿತಿಯ ಸದಸ್ಯರೂ ಆಗಿರುವ, ಮಾಜಿ ಒಲಿಂಪಿಯನ್‌ ಕೊ ಅವರು ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿ ಕ್ರೀಡೆಗಳು ವಿಳಂಬವಾಗುವ ಸಾಧ್ಯತೆಯಿದೆ ಎಂದು ಒಪ್ಪಿಕೊಂಡಿದ್ದಾರೆ.2012ರ ಒಲಿಂಪಿಕ್ಸ್‌ ಕ್ರೀಡೆಗಳನ್ನು ಲಂಡನ್‌ನಲ್ಲಿ ನಡೆಯಲು ಕೊ ಪ್ರಮುಖ ಪಾತ್ರ ವಹಿಸಿದ್ದರು.

‘ಕ್ರೀಡೆಗಳನ್ನು ಮುಂದಿನ ವರ್ಷಕ್ಕೆ ಮುಂದೂಡಿದರೆ ಬೇರೆ ಕೆಲವು ಸಮಸ್ಯೆಗಳು ಎದುರಾಗಬಹುದು. ಕೆಲವು ಸದಸ್ಯ ಫೆಡರೇಷನ್‌ಗಳು ಒಲಿಂಪಿಕ್ಸ್ ಇಲ್ಲದ ವರ್ಷಗಳಲ್ಲಿ ವಿಶ್ವ ಚಾಂಪಿಯನ್‌ಷಿಪ್‌ಗಳನ್ನು ನಿಗದಿ ಮಾಡಿರುತ್ತವೆ’ ಎಂದರು.

‘ಒಲಿಂಪಿಕ್ಸ್‌ಗೆ ಸಂಬಂಧಿಸಿ ಈಗಲೇ ನಿರ್ಣಾಯಕ ನಿರ್ಧಾರಕ್ಕೆ ಬರುವುದು ಉತ್ತಮ’ ಎಂದು ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ರೋಯಿಂಗ್‌ ಸ್ವರ್ಣ ಗೆದ್ದಿರುವ ಬ್ರಿಟನ್‌ನ ಹಿರಿಯ ಕ್ರೀಡಾಪಟು ಮ್ಯಾಥ್ಯೂ ಪಿನ್ಸೆಂಟ್‌ ಹೇಳಿದ್ದಾರೆ. ಮುಂದೂಡದೇ ಬೇರೆ ಆಯ್ಕೆಗಳಿರುವಂತೆ ಕಾಣುತ್ತಿಲ್ಲ ಎಂದಿದ್ದಾರೆ.

'ಮುಂದೂಡಬೇಕು': ‘ಕೊರೊನಾ ಸೋಂಕು ಭೀತಿಯಿಂದ ಅಥ್ಲೀಟುಗಳು ಸೂಕ್ತ ತಯಾರಿ ನಡೆಸಲು ಸಾಧ್ಯವಾಗದಿರುವ ಕಾರಣ ಟೋಕಿಯೊ ಒಲಿಂಪಿಕ್‌ ಕ್ರೀಡೆಗಳನ್ನು ಮುಂದೂಡಬೇಕು’ ಎಂದುಜಪಾನ್‌ ಒಲಿಂಪಿಕ್‌ ಸಮಿತಿ (ಜೆಒಸಿ) ಸದಸ್ಯೆ ಕವೊರಿ ಯಮಾಗುಚಿ ಹೇಳಿದ್ದಾರೆ.

‘ನಿಕ್ಕೀ’ ಪತ್ರಿಕೆ ಗುರುವಾರ ಅವರ ಹೇಳಿಕೆ ಪ್ರಕಟಿಸಿದ್ದು,ಐಒಸಿ ಸಕಾಲದಲ್ಲೇ ಕ್ರೀಡೆಗಳನ್ನು ನಡೆಸುವುದಾಗಿ ಪಟ್ಟುಹಿಡಿಯುತ್ತಿರುವ ಕಾರಣ ಅಥ್ಲೀಟುಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆತಂಕವಿದೆ ಎಂದಿದ್ದಾರೆ. ಯಮಾಗುಚಿ ಅವರು ಸೋಲ್‌ ಒಲಿಂಪಿಕ್ಸ್‌ನ(1988) ಜೂಡೊದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು.

ಮಾರ್ಚ್‌ 27ರಂದು ನಿಗದಿಯಾಗಿರುವ ಜೆಒಸಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸುವುದಾಗಿಯೂ ಅವರು ತಿಳಿಸಿದ್ದಾರೆ.

‘ಅಮೆರಿಕ ಮತ್ತು ಯುರೋಪ್‌ನಿಂದ ಬಂದಿರುವ ವರದಿಗಳ ಪ್ರಕಾರ ಅಥ್ಲೀಟುಗಳು ತರಬೇತಿ ಮುಂದುವರಿಸುವ ಸ್ಥಿತಿಯಲ್ಲಿಲ್ಲ’ ಎಂದಿದ್ದಾರೆ.

ಈ ಬಗ್ಗೆ ತಕ್ಷಣದ ಪ್ರತಿಕ್ರಿಯೆಗೆ ಜೆಒಸಿ ಅಧಿಕಾರಿಗಳು ಲಭ್ಯರಿರಲಿಲ್ಲ. ಐಒಸಿಯ ಒಬ್ಬ ಸದಸ್ಯ ಕೂಡ ಒಲಿಂಪಿಕ್ಸ್‌ ಮುಂದೂಡಬೇಕೆಂಬ ನಿಲುವು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.