ADVERTISEMENT

ಆನ್‌ಲೈನ್ ಚೆಸ್ ಟೂರ್ನಿ: ಮೂಡುವುದೇ ‘ಆನಂದ’?

₹ 1.36 ಕೋಟಿ ಬಹುಮಾನ; ಚೀನಾ ಮೇಲೆ ಕಣ್ಣು

ಪಿಟಿಐ
Published 4 ಮೇ 2020, 20:15 IST
Last Updated 4 ಮೇ 2020, 20:15 IST
   

ಚೆನ್ನೈ: ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ನೇತೃತ್ವದ ಭಾರತ ತಂಡ ಮಂಗಳವಾರ ಆರಂಭವಾಗುವ ಆನ್‌ಲೈನ್ ನೇಷನ್ಸ್‌ ಕಪ್‌ ಚೆಸ್ ಟೂರ್ನಿಯಲ್ಲಿ ಪ್ರಶಸ್ತಿಯ ಕನಸಿನೊಂದಿಗೆ ಅಭಿಯಾನ ಆರಂಭಿಸಲಿದೆ.

ವಿಶ್ವದ ಪ್ರಮುಖ ಆಟಗಾರರು ಒಟ್ಟು ಆರು ತಂಡಗಳಲ್ಲಿ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ಒಬ್ಬರೇ ಗೈರಾಗಿರುವ ಪ್ರಮುಖ ಆಟಗಾರ.

ಚೀನಾಕ್ಕೆ ಅಗ್ರ ಶ್ರೇಯಾಂಕ ನೀಡಲಾಗಿದೆ. ಯುರೋಪ್‌ ಎರಡನೇ ಶ್ರೇಯಾಂಕ ಪಡೆದಿದ್ದು ಅಮೆರಿಕ, ಭಾರತ, ರಷ್ಯಾ ಮತ್ತು ವಿಶ್ವ ಇತರೆ ತಂಡ ನಂತರದ ಸ್ಥಾನಗಳಲ್ಲಿವೆ. ಅಂತರರಾಷ್ಟ್ರೀಯ ಚೆಸ್‌ ಸಂಸ್ಥೆ (ಫಿಡೆ) ಮತ್ತು ಚೆಸ್‌ ಡಾಟ್‌ ಕಾಮ್‌ ಈ ಟೂರ್ನಿಯನ್ನು ಆಯೋಜಿಸುತ್ತಿವೆ.

ADVERTISEMENT

ಶ್ರೀಮಂತ ಆನ್‌ಲೈನ್ ಟೂರ್ನಿ ಎಂಬ ಹಿರಿಮೆಯ ಈ ಕೂಟದಲ್ಲಿ ಭಾರತದ ಪರ ವಿದಿತ್ ಎಸ್‌.ಗುಜರಾತಿ, ಪಿ.ಹರಿಕೃಷ್ಣ, ಭಾಸ್ಕರನ್‌ ಅದಿಬನ್‌, ಕೊನೆರು ಹಂಪಿ, ಡಿ.ಹಾರಿಕ ಇದ್ದಾರೆ. ಮಾಜಿ ವಿಶ್ವ ಚಾಂಪಿಯನ್ ವ್ಲಾದಿಮಿರ್ ಕ್ರಾಮ್ನಿಕ್ ಅವರು ಭಾರತ ತಂಡಕ್ಕೆ ಸಲಹೆಗಾರರಾಗಿದ್ದಾರೆ.

ಡಿಂಗ್ ಲಿರೆನ್, ವಾಂಗ್ ಹೋ, ವೀ ಯಿ ಮತ್ತು ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಹೌ ಯಿಫಾನ್ ಅವರನ್ನು ಒಳಗೊಂಡ ಚೀನಾ ತಂಡದ ಮೇಲೆ ಎಲ್ಲರ ನೋಟವಿದ್ದು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದೇ ಹೇಳಲಾಗಿದೆ. ಯೂ ಯಾಂಗ್ಯಿ ಹಾಗೂ ಮಹಿಳಾ ವಿಶ್ವ ಚಾಂಪಿಯನ್ ಜೂ ವೆಂಜುನ್ ಅವರ ಬಲವೂ ತಂಡಕ್ಕೆ ಇದೆ.

₹ 1.36 ಕೋಟಿ ಬಹುಮಾನ ಮೊತ್ತದ ಟೂರ್ನಿಯಲ್ಲಿ ಯುರೋಪ್ ಮತ್ತು ಅಮೆರಿಕ ಕೂಡ ಪ್ರಬಲ ಪೈಪೋಟಿಗೆ ಸಜ್ಜಾಗಿದೆ. ಯುರೋಪ್ ತಂಡದಲ್ಲಿ ಮ್ಯಾಕ್ಸಿಮ್ ವಾಚೆರ್ ಲ್ಯಾಗ್ರೆವ್‌, ಲೆವಾನ್ ಅರೋನಿಯನ್, ಅನೀಶ್ ಗಿರಿ, ಅನಾ ಮುಶಿಚುಕ್ ಮುಂತಾದವರಿದ್ದು ರಷ್ಯಾದ ದಿಗ್ಗಜ ಆಟಗಾರ ಗ್ಯಾರಿ ಕ್ಯಾಸ್ಪರೊವ್ ನಾಯಕರಾಗಿದ್ದಾರೆ.

ಫ್ಯಾಬಿಯಾನೊ ಕರುವಾನ್, ಹಿಕಾರು ನಕಾಮುರ, ವೆಸ್ಲಿ ಸೋ ಮತ್ತು ಐರಿನಾ ಕ್ರುಶ್ ಅವರನ್ನು ಒಳಗೊಂಡ ಅಮೆರಿಕ ತಂಡವೂ ಭಾರಿ ಪೈಪೋಟಿಗೆ ಸಜ್ಜಾಗಿದೆ. ಡಬಲ್ ರೌಂಡ್ ರಾಬಿನ್ ಮಾದರಿಯ ಟೂರ್ನಿಯ ‘ಸೂಪರ್ ಫೈನಲ್‌’ನಲ್ಲಿ ಪ್ರಶಸ್ತಿಗಾಗಿ ಎರಡು ಅಗ್ರ ತಂಡಗಳು ಸೆಣಸಲಿವೆ. ಪ್ರತಿ ಪಂದ್ಯಗಳು ನಾಲ್ಕು ಬೋರ್ಡ್‌ಗಳಲ್ಲಿ ನಡೆಯಲಿದ್ದು ಮೂವರು ಪುರುಷರು ಮತ್ತು ಒಬ್ಬ ಮಹಿಳೆ ಕಣದಲ್ಲಿರುತ್ತಾರೆ.

ವಿಶ್ವ ಇತರೆ ತಂಡದಲ್ಲಿ ಇರಾನ್‌ನ ಉದಯೋನ್ಮುಖ ಆಟಗಾರ ಅಲಿರೇಜಾ ಫಿರೌಜ, ತಿಮೋರ್‌ ರಜಬೋವ್‌ ಮತ್ತಿತರ ಆಟಗಾರರಿದ್ದಾರೆ.

‘ಪ್ರಬಲ ತಂಡಗಳ ಜೊತೆ ಸೆಣಸಲಿದ್ದೇವೆ. ಆನ್‌ಲೈನ್‌ ಮೂಲಕ ನಡೆಯುವ ಮೊದಲ ಟೂರ್ನಿಯಾಗಿದ್ದು ಪಾಲ್ಗೊಳ್ಳಲು ಕಾತರದಿಂದ ಕಾಯು ತ್ತಿದ್ದೇನೆ’ ಎಂದು ಕೊನೆರು ಹಂಪಿ ಹೇಳಿದರು.

**

ಇದು ವಿಶಿಷ್ಟ ಟೂರ್ನಿ. ಒಲಿಂಪಿಯಾಡ್‌ನಲ್ಲಿ ತೋರಿದಂಥ ಸಾಮರ್ಥ್ಯದೊಂದಿಗೆ ಪ್ರಬಲ ಪೈಪೋಟಿ ಒಡ್ಡಲು ನಾವು ಸಜ್ಜಾಗಿದ್ದೇವೆ.
-ವಿದಿತ್ ಗುಜರಾತಿ, ಭಾರತದ ಆಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.