ADVERTISEMENT

ವಾಸದ ಕೋಣೆಯೇ ಶೂಟಿಂಗ್ ರೇಂಜ್‌!

ಮೊದಲ ಬಾರಿಗೆ ನಡೆಯಲಿರುವ ಆನ್‌ಲೈನ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2020, 15:14 IST
Last Updated 11 ಏಪ್ರಿಲ್ 2020, 15:14 IST
ಮನು ಭಾಕರ್‌
ಮನು ಭಾಕರ್‌   

ನವದೆಹಲಿ: ಲಾಕ್‌ಡೌನ್‌ನಿಂದಾಗಿ ಮನೆಯೊಳಗೆ ‘ಬಂಧಿ’ಯಾಗಿರುವ ವಿಶ್ವದ ಎಲೀಟ್‌ ಶೂಟರ್‌ಗಳು ಈಗ ಅಂತರರಾಷ್ಟ್ರೀಯ ಆನ್‌ಲೈನ್‌ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಕಾತರರಾಗಿದ್ದಾರೆ. ಇದಕ್ಕಾಗಿ ತಾವು ವಾಸಿಸುವ ಕೋಣೆಯನ್ನೇ ಶೂಟಿಂಗ್‌ ರೇಂಗ್‌ ಆಗಿ ಮಾರ್ಪಾಡು ಮಾಡಿಕೊಳ್ಳುತ್ತಿದ್ದಾರೆ!

ಇದೇ ತಿಂಗಳ 15ರಂದು ನಡೆಯುವ ಸ್ಪರ್ಧೆಯಲ್ಲಿ ಒಟ್ಟು 50 ಶೂಟರ್‌ಗಳು ಭಾಗವಹಿಸಲಿದ್ದಾರೆ. ಭಾರತದ ಮನು ಭಾಕರ್‌, ಸಂಜೀವ್‌ ರಜಪೂತ್‌ ಮತ್ತು ದಿವ್ಯಾಂಶ್‌ ಸಿಂಗ್‌ ಪನ್ವಾರ್‌ ಅವರು ಎಲ್ಲರ ಆಕರ್ಷಣೆಯಾಗಿದ್ದಾರೆ.

ಭಾರತದ ಹಿರಿಯ ಶೂಟರ್‌ ಶಿಮೊನ್‌ ಶರೀಫ್‌ ಅವರು ಆಯೋಜಿಸುತ್ತಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ಹಂಗರಿಯ ವೆರೋನಿಕಾ ಮೇಜರ್‌, ಸ್ಪೇನ್‌ನ ನಿಕೋಲಸ್‌ ಫ್ರಾಗಾ ಕೊರೆಡೋಯಿರಾ ಹಾಗೂ ಸ್ಕಾಟ್ಲೆಂಡ್‌ನ ಎಮಿಲಾ ಫಾಕ್ನರ್‌, ಇಶಾಬೆಲ್‌ ಮ್ಯಾಕ್‌ಟಾಗರ್ಟ್‌ ಮತ್ತು ಲೂಸಿ ಇವಾನ್ಸ್‌ ಅವರೂ ಪಾಲ್ಗೊಳ್ಳಲಿದ್ದಾರೆ. ವೆರೋನಿಕಾ ಅವರು 2019ರಲ್ಲಿ ದೆಹಲಿಯಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಜಯಿಸಿದ್ದರು.

ADVERTISEMENT

ಈ ಚಾಂಪಿಯನ್‌ಷಿಪ್‌ indianshooting.com ಫೇಸ್‌ಬುಕ್‌ ಪುಟದಲ್ಲಿ ನೇರ ಪ್ರಸಾರವಾಗಲಿದ್ದು ಭಾರತದ ಒಲಿಂಪಿಯನ್‌ ಶೂಟರ್‌ ಜಾಯ್‌ದೀಪ್‌ ಕರ್ಮಾಕರ್‌ ವೀಕ್ಷಕ ವಿವರಣೆ ನೀಡಲಿದ್ದಾರೆ.

ನಿಗದಿತ ದಿನದಂದು ಸಂಜೆ ನಾಲ್ಕು ಗಂಟೆಗೆ ಸ್ಪರ್ಧೆ ನಡೆಯಲಿದ್ದು, ತೀರ್ಪುಗಾರರು ಶೂಟರ್‌ಗಳ ಮೇಲೆ ನಿಗಾ ಇಡಲಿದ್ದಾರೆ.

‘ಶೂಟರ್‌ಗಳು ವಿವಿಧ ಚಾಂಪಿಯನ್‌ಷಿಪ್‌ ಗಳಲ್ಲಿ ಪಾಲ್ಗೊಳ್ಳಲು ಸತತ ಪ್ರಯಾಣ ಮಾಡಬೇಕಾಗುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ಆನ್‌ಲೈನ್‌ ಚಾಂಪಿಯನ್‌ಷಿಪ್‌ ಆಯೋಜಿಸಿದ್ದೇವೆ. ಸ್ಪರ್ಧಿಗಳು ಕೊಠಡಿಯಲ್ಲಿ ಎಲೆಕ್ಟ್ರಾನಿಕ್‌ ಟಾರ್ಗೆಟ್‌ ಅಳವಡಿಸಿಕೊಳ್ಳಬೇಕು. ಜೊತೆಗೆ ಮೊಬೈಲ್‌ ಮತ್ತು ಉತ್ತಮ ನೆಟ್‌ವರ್ಕ್‌ ಸೌಲಭ್ಯ ಹೊಂದಿರಬೇಕು. ಶೂಟರ್‌ಗಳು ಮನೆಯಿಂದ ಏಕಕಾಲದಲ್ಲಿ ಶೂಟ್‌ ಮಾಡಬೇಕು. ಅವರು ದಾಖಲಿಸುವ ಸ್ಕೋರ್‌ ಎಲೆಕ್ಟ್ರಾನಿಕ್‌ ಪರದೆಯ ಮೇಲೆ ನಮೂದಾಗುತ್ತದೆ. ಹೆಚ್ಚು ಸ್ಕೋರ್‌ ಗಳಿಸುವವರು ವಿಜೇತರಾಗಲಿದ್ದಾರೆ’ ಎಂದು ಶರೀಫ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.