ADVERTISEMENT

ಒಸಾಕಾ ವಿಶ್ವದ ಶ್ರೀಮಂತ ಮಹಿಳಾ ಕ್ರೀಡಾಪಟು

ಸೆರೆನಾ ವಿಲಿಯಮ್ಸ್‌ ಅವರನ್ನು ಹಿಂದಿಕ್ಕಿದ ಜಪಾನ್‌ ತಾರೆ: ಫೋರ್ಬ್ಸ್‌

ಏಜೆನ್ಸೀಸ್
Published 23 ಮೇ 2020, 10:56 IST
Last Updated 23 ಮೇ 2020, 10:56 IST
ನವೊಮಿ ಒಸಾಕಾ– ರಾಯಿಟರ್ಸ್ ಚಿತ್ರ
ನವೊಮಿ ಒಸಾಕಾ– ರಾಯಿಟರ್ಸ್ ಚಿತ್ರ   

ನ್ಯೂಯಾರ್ಕ್‌: ಜಪಾನ್‌ನ ಟೆನಿಸ್‌ ತಾರೆ ನವೊಮಿ ಒಸಾಕಾ ಅವರು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಕ್ರೀಡಾಪಟು ಎನಿಸಿಕೊಂಡಿದ್ದಾರೆ. ಹೋದ 12 ತಿಂಗಳುಗಳಲ್ಲಿ ಅವರ ಒಟ್ಟು ಗಳಿಕೆ ₹ 284 ಕೋಟಿಗಿಂತ ಅಧಿಕ ಎಂದು ಶುಕ್ರವಾರ ಫೋರ್ಬ್ಸ್‌ ನಿಯತಕಾಲಿಕೆ ವರದಿ ಮಾಡಿದೆ.

ಎರಡು ಬಾರಿಯ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್‌, 22 ವರ್ಷದ ಒಸಾಕಾ ಅವರು ತಮ್ಮ ಬದ್ಧ ಎದುರಾಳಿ ಅಮೆರಿಕದ ಸೆರೆನಾ ವಿಲಿಯಮ್ಸ್‌ (₹ 273 ಕೋಟಿ) ಅವರನ್ನು ಹಿಂದಿಕ್ಕಿ ಈ ಸ್ಥಾನ ಗಳಿಸಿದ್ದಾರೆ.

ಇವರಿಬ್ಬರೂ 2015ರ ಒಂದೇ ವರ್ಷದಲ್ಲಿ ರಷ್ಯಾದ ಮರಿಯಾ ಶರಪೋವಾ ಅವರು ಗಳಿಸಿದ್ದ ₹ 226 ಕೋಟಿ ದಾಖಲೆಯನ್ನು ಮೀರಿದ್ದಾರೆ.

ADVERTISEMENT

ಒಸಾಕಾ ಅವರ ತಂದೆ ಹೈಟಿ ದೇಶದವರಾದರೆ, ತಾಯಿ ಜಪಾನ್‌ ಮೂಲದವರು. ಅತಿ ಹೆಚ್ಚು ಸಂಭಾವನೆ ಪಡೆಯುವ ವಿಶ್ವದ ಅಗ್ರ 100 ಕ್ರೀಡಾಪಟುಗಳ ಪಟ್ಟಿಯಲ್ಲಿ ಒಸಾಕಾ 29ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಸೆರೆನಾ ಅವರ ಸ್ಥಾನ 33ನೆಯದ್ದು.

ಫೋರ್ಬ್ಸ್‌ ತನ್ನ ಸಂಪೂರ್ಣ ಪಟ್ಟಿಯನ್ನು ಮುಂದಿನ ವಾರ ಬಿಡುಗಡೆ ಮಾಡಲಿದೆ. 2016ರ ಬಳಿಕ ಇಬ್ಬರು ಮಹಿಳಾ ಅಥ್ಲೀಟ್‌ಗಳು ಸ್ಥಾನ ಪಡೆದಿದ್ದು ಇದೇ ಮೊದಲು ಎಂದು ನಿಯತಕಾಲಿಕೆ ಉಲ್ಲೇಖಿಸಿದೆ. ಈ ಹಿಂದಿನ ನಾಲ್ಕು ವರ್ಷಗಳಿಂದ ಸೆರೆನಾ ವಿಲಿಯಮ್ಸ್‌ ಅವರೇ ಪ್ರಾಬಲ್ಯ ಮೆರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.