
ಪಾಕಿಸ್ತಾನ ಹಾಕಿ ತಂಡದ ಆಟಗಾರರು
ಚಿತ್ರ ಕೃಪೆ: X
ಲಾಹೋರ್: ಪಾಕಿಸ್ತಾನ ಹಾಕಿ ತಂಡದ ನಾಯಕ ಅಮ್ಮದ್ ಶಕೀಲ್ ಬಟ್ ಅವರ ಮೇಲೆ ದೇಶದ ಹಾಕಿ ಫೆಡರೇಷನ್ (ಪಿಎಚ್‌ಎಫ್) ವಿಧಿಸಿದ್ದ ಎರಡು ವರ್ಷಗಳ ನಿಷೇಧವನ್ನು ಅಲ್ಲಿನ ಸರ್ಕಾರ ತೆಗೆದುಹಾಕಿದೆ. ಈ ಕ್ರಮ ‘ಅಸಾಂವಿಧಾನಿಕ ಮತ್ತು ಕಾನೂನುಬಾಹಿರ’ ಎಂದು ಹೇಳಿದೆ.
ಫೆಡರೇಷನ್ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡುವ ಮೊದಲು ಪಿಎಚ್‌ಎಫ್ ಅಧ್ಯಕ್ಷ ತಾರಿಖ್ ಬುಗ್ತಿ ಅವರು ಬಟ್ ಅವರ ಮೇಲೆ ಎರಡು ವರ್ಷಗಳ ನಿಷೇಧ ಹೇರಿದ್ದರು.
ಇತ್ತೀಚೆಗೆ ಎಫ್‌ಐಎಚ್ ಪ್ರೊ ಹಾಕಿ ಟೂರ್ನಿಯಲ್ಲಿ ಆಡಲು ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಪಾಕಿಸ್ತಾನ ತಂಡ ಪ್ರಯಾಣದ ವೇಳೆ ಎದುರಿಸಿದ ಸಮಸ್ಯೆಗಳಿಗೆ ಪಿಎಚ್‌ಎಫ್ ದುರಾಡಳಿತ ಕಾರಣ ಎಂದು ಬಟ್ ಅವರು ದೂರಿದ್ದರು.
ಇದರ ಬೆನ್ನಲ್ಲೇ, ಬಟ್ ಅವರ ಟೀಕೆಗಳಿಂದ ಪಾಕಿಸ್ತಾನ ಹಾಕಿ ಆಟದ ವರ್ಷಸ್ಸಿಗೆ ಧಕ್ಕೆಯಾಗಿದೆ ಎಂದು ಬುಗ್ತಿ ಹೇಳಿದ್ದರು.
ಆದರೆ ಪಿಎಚ್‌ಎಫ್ ಮಹಾಪೋಷಕರೂ ಆಗಿರುವ ಪ್ರಧಾನಿ ಶಹಬಾಜ್ ಶರೀಫ್ ಅವರಿಂದ ಪಿಎಚ್‌ಎಫ್ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡ ಮುಹುಯುದ್ದೀನ್ ಅಹ್ಮದ್ ವಾನಿ ಅವರು ತಂಡದ ನಾಯಕನ ಮೇಲೆ ಹೇರಿದ್ದ ನಿಷೇಧವನ್ನು ತೆಗೆದುಹಾಕಿದ್ದಾರೆ.
ಪ್ರೊ ಲೀಗ್‌ನಲ್ಲಿ ಆಡುವ ತಂಡದ ಆಟಗಾರರಿಗೆ ಪಂಚತಾರಾಹೋಟೆಲ್ ವಾಸ್ತವ್ಯಕ್ಕೆ ನೆರವಿನ ರೂಪದಲ್ಲಿ ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ ಕ್ರೀಡಾ ಮಂಡಳಿಯು ಪಿಎಚ್‌ಎಫ್‌ಗೆ 1 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ಹೀಗಿದ್ದರೂ, ಆಟಗಾರರಿಗೆ ಫೆಡರೇಷನ್ ಸರಿಯಾದ ವಸತಿ, ಪ್ರಯಾಣದ ವ್ಯವಸ್ಥೆ ಆಗಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.