
ಪಾಕಿಸ್ತಾನ ಹಾಕಿ ತಂಡದ ಆಟಗಾರರು
ಚಿತ್ರ ಕೃಪೆ: X
ಲಾಹೋರ್: ಪಾಕಿಸ್ತಾನ ಹಾಕಿ ತಂಡವು ಆಸ್ಟ್ರೇಲಿಯಾ ಪ್ರವಾಸ ಮುಗಿಸಿ ತವರಿಗೆ ವಾಪಸ್ ಆಗಿದ್ದು, ನಾಯಕ ಶಕೀಲ್ ಅಮ್ಮದ್ ಬಟ್ ಅವರು ರಾಷ್ಟ್ರೀಯ ಹಾಕಿ ಒಕ್ಕೂಟದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಲಾಹೋರ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ‘ಆಟಗಾರರರಿಗೆ ಸರಿಯಾದ ವಸತಿ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ, ಬೀದಿ ಬದಿಯಲ್ಲೇ ಸಮಯ ಕಳೆಯಬೇಕಾದ ಪ್ರಸಂಗ ಎದುರಾಯಿತು. ಪಂದ್ಯಗಳನ್ನು ಆಡಲು ಕ್ರೀಡಾಂಗಣಗಳಿಗೆ ತೆರಳುವ ಮುನ್ನ, ಪಾತ್ರೆಗಳನ್ನು ತೊಳೆದಿಟ್ಟು ಹೋಗಬೇಕಾದ ಅನಿವಾರ್ಯತೆ ಎದುರಾಗಿತ್ತು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಹಾಕಿ ಫೆಡರೇಷನ್ (ಪಿಎಚ್‌ಎಫ್) ಸಾಕಷ್ಟು ಬಾರಿ ಸುಳ್ಳುಗಳನ್ನು ಹೇಳಿತು. ನಮಗಂತೂ ಸಾಕು ಸಾಕಾಯಿತು ಎಂದೂ ದೂರಿದ್ದಾರೆ.
‘ಒಕ್ಕೂಟದ ಈಗಿನ ಆಡಳಿತ ಮಂಡಳಿಯೊಂದಿಗೆ ಕೆಲಸ ಮಾಡಲು ಸಾಧ್ಯವೇ ಇಲ್ಲ. ಆಟಗಾರರು ಪಂದ್ಯಗಳನ್ನು ಆಡಲು ಹೋಗುವ ಮುನ್ನ, ಅಡುಗೆ ಕೋಣೆ ಶುಚಿಗೊಳಿಸಿ, ಪಾತ್ರೆಗಳನ್ನೆಲ್ಲಾ ತೊಳೆದಿಡಬೇಕು ಎಂದರೆ, ನೀವು ನಮ್ಮಿಂದ ಎಂತಹ ಫಲಿತಾಂಶವನ್ನು ನಿರೀಕ್ಷಿಸುತ್ತೀರಿ’ ಎಂದು ಕೋಪದಿಂದಲೇ ಕೇಳಿದ್ದಾರೆ.
ವ್ಯವಸ್ಥೆ ಇಲ್ಲದೆ ಪರದಾಟ
ಎಫ್‌ಐಎಚ್ ಪ್ರೋ ಲೀಗ್‌ನಲ್ಲಿ ಆಡುವ ಸಲುವಾಗಿ ಆಸ್ಟ್ರೇಲಿಯಾಗೆ ತೆರಳಿದ್ದ ಪಾಕ್ ಪಡೆ, ಕ್ಯಾನ್‌ಬೆರಾಗೆ ಪ್ರಯಾಣ ಆರಂಭಿಸುವ ಮುನ್ನ, ಸಿಡ್ನಿ ವಿಮಾನ ನಿಲ್ದಾಣದಲ್ಲೇ 13-14 ಗಂಟೆಗಳವರೆಗೆ ಉಳಿಯಬೇಕಾದ ಪರಿಸ್ಥಿತಿ ಎದುರಿಸಿತ್ತು. ನಂತರ, ಕ್ಯಾನ್‌ಬೆರಾದಲ್ಲಿ ವಸತಿ ವ್ಯವಸ್ಥೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿತ್ತು. ಆಟಗಾರರು ಉಳಿದುಕೊಳ್ಳಬೇಕಿದ್ದ ಹೋಟೆಲ್‌ಗೆ ಪಿಎಚ್‌ಎಫ್ ಹಣ ಪಾವತಿಸದ ಕಾರಣ ಬುಕ್ಕಿಂಗ್ ರದ್ದಾಗಿತ್ತು. ಪರಿಣಾಮವಾಗಿ, ಆಟಗಾರರು ರಸ್ತೆ ಬದಿಯಲ್ಲೇ ಗಂಟೆಗಟ್ಟಲೆ ಉಳಿದಿದ್ದರು.
‘ಮುಂಗಡ ಹಣ ಪಾವತಿಯಾಗಿಲ್ಲದ ಕಾರಣ, ಬುಕಿಂಗ್ ರದ್ದು ಮಾಡಲಾಗಿದೆ’ ಎಂದು ಹೋಟೆಲ್ ಆಡಳಿತ ಪಾಕ್ ಆಟಗಾರರಿಗೆ ತಿಳಿಸಿತ್ತು. ವಸತಿ ವ್ಯವಸ್ಥೆಯಾಗುವವರೆಗೆ ಆಟಗಾರರು, ಅಲ್ಲಲ್ಲಿ ಅಲೆದಾಡಿದ್ದರು. ಮರುದಿನ (ಫೆ. 10ರಂದು) ಮಧ್ಯಾಹ್ನ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯವನ್ನು 2–3 ಅಂತರದಿಂದ ಸೋತಿದ್ದರು.
ಆದರೆ, ತಂಡಕ್ಕೆ ವಸತಿ ವ್ಯವಸ್ಥೆ ಮಾಡಲು ಪಾಕಿಸ್ತಾನ ಕ್ರೀಡಾ ಮಂಡಳಿಯು (ಪಿಎಸ್‌ಬಿ) 10 ಲಕ್ಷ ರೂಪಾಯಿಗೂ ಹೆಚ್ಚು ಹಣ ನೀಡಿರುವುದಾಗಿ ಖಚಿತಪಡಿಸಿತ್ತು. ಅದರ ಬೆನ್ನಲ್ಲೇ, ಪಿಎಚ್‌ಎಫ್ ಟೀಕೆಗೆ ಗುರಿಯಾಗಿದೆ.
13 ದಿನಗಳ ಪ್ರವಾಸ; 10 ದಿನಕ್ಕಷ್ಟೇ ವ್ಯವಸ್ಥೆ
‘ನಾವು 13 ದಿನಗಳ ಪ್ರವಾಸ ಕೈಗೊಂಡಿದ್ದೆವು. ಆದರೆ, 10 ದಿನಗಳವರೆಗಷ್ಟೇ ವಸತಿ ವ್ಯವಸ್ಥೆ ಮಾಡಲಾಗಿತ್ತು ಎಂಬುದು ಬೇಸರದ ಸಂಗತಿ. 10 ದಿನಗಳ ನಂತರ ನಾವು ಅಗ್ಗವಾಗಿ ವಸತಿ ಸಿಗುವಲ್ಲಿಗೆ ಸ್ಥಳಾಂತರಗೊಳ್ಳಬೇಕಾಯಿತು’ ಎಂದು ಶಕೀಲ್ ಹೇಳಿದ್ದಾರೆ.
ಅವ್ಯವಸ್ಥೆಯ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿಯೂ ಪಿಎಚ್‌ಎಫ್ ಆಟಗಾರರಿಗೆ ಎಚ್ಚರಿಕೆ ನೀಡಿತ್ತು ಎಂದು ಅವರು ಬಹಿರಂಗಪಡಿಸಿದ್ದಾರೆ.
ಪ್ರಕರಣ ಸಂಬಂಧ ಸಮಗ್ರ ತನಿಖೆ ನಡೆಸಿ, ವರದಿ ನೀಡುವಂತೆ ಪ್ರಧಾನಿ ಶೆಹಬಾಜ್ ಷರೀಪ್ ಸೂಚನೆ ನೀಡಿದ್ದು, ಅದರಂತೆ ಕಾರ್ಯವ್ರವೃತ್ತರಾಗಿರುವುದಾಗಿ ಪಿಎಸ್‌ಬಿ ಮಹಾ ನಿರ್ದೇಶಕ ನೂರ್ ಉಸ್ ಸಬಾಹ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.