
ಕರಾಚಿ : ಪಾಕಿಸ್ತಾನ ಹಾಕಿ ಕ್ರೀಡೆಯಲ್ಲಿ ತಲೆದೋರಿರುವ ಬಿಕ್ಕಟ್ಟು ತೀವ್ರಗೊಂಡಿದೆ. ಇತ್ತೀಚೆಗೆ ಐಎಚ್‌ಎಫ್ ಪ್ರೊ ಲೀಗ್ ಆಡಲು ಆಸ್ಟ್ರೇಲಿಯಾಕ್ಕೆ ಹೋಗಿದ್ದ ತಂಡದ ಆಟಗಾರರ ಹೋಟೆಲ್ ವಾಸ್ತವ್ಯಕ್ಕೆ ಸಕಾಲದಲ್ಲಿ ಹಣ ಪಾವತಿಯಾಗದೇ ಕೆಲವು ಗಂಟೆ ಬೀದಿಗೆ ಬೀಳುವಂತಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಹಾಕಿ ಫೆಡರೇಷನ್ ಅಧ್ಯಕ್ಷ ತಾರಿಕ್ ಬುಗ್ತಿ ಗುರುವಾರ ರಾಜೀನಾಮೆ ನೀಡಿದ್ದಾರೆ.
ಇದೇ ವೇಳೆ, ಬುಗ್ತಿ ಅವರು ಫೆಡರೇಷನ್‌ನ ದುರಾಡಳಿತದ ವಿರುದ್ಧ ಧ್ವನಿಯೆತ್ತಿದ್ದ ಪಾಕ್ ಹಾಕಿ ತಂಡದ ನಾಯಕ ಅಮ್ಮದ್ ಶಕೀಲ್ ಬಟ್ ಅವರಿಗೆ ಎರಡು ವರ್ಷಗಳ ನಿಷೇಧ ವಿಧಿಸಿದ್ದಾರೆ.
ತಮ್ಮ ರಾಜೀನಾಮೆ ಪತ್ರವನ್ನು ಫೆಡರೇಷನ್‌ನ ಮಹಾಪೋಷಕರಾದ ಪ್ರಧಾನಿ ಶಹಬಾಜ್ ಶರೀಫ್ ಅವರಿಗೆ ಕಳುಹಿಸಿರುವುದಾಗಿ ಬುಗ್ತಿ ತಿಳಿಸಿದ್ದಾರೆ. ‘ಆಸ್ಟ್ರೇಲಿಯಾದಲ್ಲಿ ನಡೆದ ಇಡೀ ಪ್ರಕರಣಕ್ಕೆ ಸಂಬಂಧಿಸಿ ನಿಷ್ಪಕ್ಷಪಾತ ತನಿಖೆಯನ್ನು ನಡೆಸುವಂತೆ ಪ್ರಧಾನಿ ಮತ್ತು ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಅವರಿಗೆ ಪತ್ರದಲ್ಲಿ ತಿಳಿಸಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.
ಗಾದಿ ತೊರೆಯುವ ಮೊದಲು, ಅಧ್ಯಕ್ಷ ಸ್ಥಾನದ ಅಧಿಕಾರ ಬಳಸಿ ತಂಡದ ನಾಯಕ ಅಮ್ಮದ್ ಶಕೀಲ್ ಬಟ್ ಅವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ‘ಪಾಕಿಸ್ತಾನದ ಹಾಕಿಗೆ ಮಸಿಬಳಿದ ಬಟ್ ಅವರಿಗೆ ದೇಶೀಯ ಮತ್ತು ಅಂತರರಾಷ್ಟ್ರೀಯ ಹಾಕಿ ಆಡದಂತೆ ಎರಡು ವರ್ಷಗಳ ನಿಷೇಧ ವಿಧಿಸಲಾಗಿದೆ’ ಎಂದಿದ್ದಾರೆ.
‘ಪ್ರೊ ಲೀಗ್ ಪಂದ್ಯಗಳಿಗೆ ಹೋಗುವ ಬದಲು ಆಟಗಾರರು ಅಡುಗೆಕೋಣೆ ಶುಚಿಗೊಳಿಸುವ ಜೊತೆಗೆ ಪಾತ್ರೆಗಳನ್ನೂ ತೊಳೆಯಬೇಕಾಗಿತ್ತು’ ಎಂದು ಬಟ್ ಅವರು ಲಾಹೋರ್‌ನಲ್ಲಿ ಗುಡುಗಿದ್ದರು. ಆ ಪ್ರವಾಸದಲ್ಲಿ ತಂಡ ಆತಿಥೇಯ ಆಸ್ಟ್ರೇಲಿಯಾ ಮತ್ತು ಜರ್ಮನಿ ವಿರುದ್ಧ ಆಡಿದ ಎಲ್ಲಾ ನಾಲ್ಕೂ ಪಂದ್ಯಗಳಲ್ಲಿ ಸೋಲನುಭವಿಸಿತ್ತು.
ಇನ್ನೊಂದು ಬೆಳವಣಿಗೆಯಲ್ಲಿ, ತಂಡದ ಮುಖ್ಯ ತರಬೇತುದಾರ ತಾಹಿರ್ ಜಮಾನ್ ಅವರು ತಾವು ಹುದ್ದೆ ತೊರೆಯಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.