ಕರಾಚಿ: ಸುರಕ್ಷತೆಯ ಕಾರಣಗಳಿಗಾಗಿ ಪಾಕಿಸ್ತಾನ ತಂಡವು ಮುಂಬರುವ ಹಾಕಿ ಟೂರ್ನಿಗಳಲ್ಲಿ ಆಡಲು ಭಾರತಕ್ಕೆ ಪಯಣಿಸುವುದಿಲ್ಲ ಎಂದು ಸರ್ಕಾರಿ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.
ಇದರಿಂದಾಗಿ ಮುಂದಿನ ವರ್ಷದ ವಿಶ್ವಕಪ್‌ಗೆ ತಂಡದ ಸ್ಥಾನ ಡೋಲಾಯಮಾನವಾಗಿದೆ. ಆಗಸ್ಟ್ ತಿಂಗಳ ಕೊನೆಯಲ್ಲಿ ಏಷ್ಯಾ ಕಪ್ ಟೂರ್ನಿಯು ಆಗಸ್ಟ್ 29 ರಿಂದ ಸೆಪ್ಟೆಂಬರ್ 7ರವರೆಗೆ ಬಿಹಾರದ ರಾಜಗೀರ್‌ನಲ್ಲಿ ನಡೆಯಲಿದೆ. ಇದರಲ್ಲಿ ಮುಂದಿನ ವರ್ಷದ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸುವ ಅವಕಾಶವಿದೆ.
ನವೆಂಬರ್‌ನಲ್ಲಿ ನಡೆಯಲಿರುವ ಜೂನಿಯರ್ ವಿಶ್ವಕಪ್‌ನಲ್ಲೂ ಭಾರತ ಆತಿಥ್ಯ ವಹಿಸಿದ್ದು, ಇದರಲ್ಲೂ ಪಾಕ್ ತಂಡ ಭಾಗವಹಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.
‘ಇತ್ತೀಚಿನ ಗಡಿ ಸಂಘರ್ಷದ ನಂತರ ನಮ್ಮ ಆಟಗಾರರ ಸುರಕ್ಷತೆ ಅಪಾಯದಲ್ಲಿದೆ’ ಎಂದು ಕ್ರೀಡಾ ಸಚಿವಾಲಯದ ಮೂಲವೊಂದು ತಿಳಿಸಿದೆ.
ಒಂದು ಕಾಲದಲ್ಲಿ ಪ್ರಬಲ ತಂಡವಾಗಿದ್ದ ಪಾಕಿಸ್ತಾನ ಈಗ ರ್‍ಯಾಂಕಿಂಗ್ ಪಟ್ಟಿಯಲ್ಲಿ 15ನೇ ಸ್ಥಾನಕ್ಕೆ ಇಳಿದಿದೆ.
2008ರ ಮುಂಬೈ ದಾಳಿಯ ನಂತರ ಭಾರತವು, ಪಾಕಿಸ್ತಾನದ ಜೊತೆ ದ್ವಿಪಕ್ಷೀಯ ಸರಣಿ ಆಡುವುದನ್ನು ನಿಲ್ಲಿಸಿದೆ.
ಪಾಕಿಸ್ತಾನ 2023ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಆಡಲು ಕೊನೆಯ ಬಾರಿಗೆ ಭಾರತಕ್ಕೆ ಬಂದಿದ್ದು, ಆ ಸಲ ಆರು ತಂಡಗಳಲ್ಲಿ ಐದನೇ ಸ್ಥಾನ ಪಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.