ADVERTISEMENT

ಬಾಕ್ಸಿಂಗ್‌: ಒಲಿಂಪಿಕ್ಸ್‌ ಕ್ವಾಲಿಫೈಯರ್‌ ಟೂರ್ನಿ ಇಂದಿನಿಂದ

ಪಿಟಿಐ
Published 23 ಮೇ 2024, 16:18 IST
Last Updated 23 ಮೇ 2024, 16:18 IST
ಭಾರತದ ಅಮಿತ್‌ ಪಂಗಲ್‌
ಭಾರತದ ಅಮಿತ್‌ ಪಂಗಲ್‌   

ಬ್ಯಾಂಕಾಕ್‌: ಭಾರತದ ಬಾಕ್ಸರ್‌ಗಳು ಇಲ್ಲಿ ಶುಕ್ರವಾರ ಆರಂಭವಾಗುವ ಒಲಿಂಪಿಕ್ಸ್‌ ಎರಡನೇ ಕ್ವಾಲಿಫೈಯರ್‌ ಟೂರ್ನಿಯಲ್ಲಿ ಪ್ಯಾರಿಸ್‌ ಟಿಕೆಟ್‌ ಪಡೆಯುವ ವಿಶ್ವಾಸದಲ್ಲಿ ಕಣಕ್ಕೆ ಇಳಿಯಲಿದ್ದಾರೆ.

ಈವರೆಗೆ ಭಾರತದ ನಾಲ್ಕು ಮಹಿಳಾ ಬಾಕ್ಸರ್‌ಗಳು ಪ್ಯಾರಿಸ್‌ ಟಿಕೆಟ್‌ ಹೊಂದಿದ್ದರು. ಆದರೆ, 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪರ್ವೀನ್‌ ಹೂಡಾ ಅವರು ವಾಸ್ತವ್ಯದ ಮಾಹಿತಿ ನೀಡದ ಕಾರಣ ವಿಶ್ವ ಉದ್ದೀಪನ ಮದ್ದು ತಡೆ ಘಟಕ (ವಾಡಾ) ಅವರನ್ನು 22 ತಿಂಗಳು ಅಮಾನತು ಮಾಡಿದೆ. ಹೀಗಾಗಿ, ಅವರು ಒಲಿಂಪಿಕ್ಸ್‌ ಕೋಟಾ ಕಳೆದುಕೊಂಡಿದ್ದಾರೆ. 

ಮಾರ್ಚ್‌ನಲ್ಲಿ ನಡೆದ ಮೊದಲ ಕ್ವಾಲಿಫೈಯರ್‌ ಟೂರ್ನಿಯಲ್ಲಿ ಭಾರತದ ಸ್ಪರ್ಧಾಳುಗಳ ಪ್ರದರ್ಶನ ನೀರಸವಾಗಿತ್ತು. 2023ರ ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ನಿಶಾಂತ್ ದೇವ್ ಸೇರಿದಂತೆ ಸ್ಪರ್ಧಿಸಿದ್ದ ಭಾರತದ ಎಲ್ಲಾ ಬಾಕ್ಸರ್‌ಗಳು ಬರಿಗೈಯಲ್ಲಿ ವಾಪಸಾಗಿದ್ದರು.

ADVERTISEMENT

‘ಥಾಯ್ಲೆಂಡ್‌ನಲ್ಲಿ ನಡೆಯುವ ಟೂರ್ನಿಯಲ್ಲಿ ನಾವು ಖಂಡಿತವಾಗಿಯೂ 4ರಿಂದ 5 ಕೋಟಾ ಗಳಿಸುವ ವಿಶ್ವಾಸ ಹೊಂದಿದ್ದೇವೆ. ಅಲ್ಲಿ ನಮಗೆ ಉತ್ತಮ ಅವಕಾಶವಿದೆ’ ಎಂದು ಭಾರತ ಬಾಕ್ಸಿಂಗ್ ಕೋಚ್ ಸಿ.ಎ. ಕುಟ್ಟಪ್ಪ ಹೇಳಿದ್ದಾರೆ.

ಬಾಕ್ಸಿಂಗ್ ಫೆಡರೇಷನ್ ಆಫ್ ಇಂಡಿಯಾ (ಬಿಎಫ್‌ಐ) ಭಾರತ ತಂಡದಲ್ಲಿ ಹಲವು ಬದಲಾವಣೆ ಮಾಡಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ಕೋಟಾ ಪಡೆಯಲು ವಿಫಲವಾದ ದೀಪಕ್ ಭೋರಿಯಾ (51 ಕೆಜಿ) ಅವರನ್ನು ಕೈಬಿಡಲಾಗಿದೆ. ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತ ಅಮಿತ್ ಪಂಗಲ್ ತಂಡದಲ್ಲಿದ್ದಾರೆ.

ಮಹಿಳೆಯರ 57 ಕೆಜಿ ವಿಭಾಗದಲ್ಲಿ ಜಾಸ್ಮಿನ್ ಲಂಬೋರಿಯಾ ಸ್ಪರ್ಧಿಸುವರು. ಅವರೂ ಹಿಂದಿನ ಟೂರ್ನಿಯಲ್ಲಿ ಕೋಟಾ ಪಡೆಯಲು ವಿಫಲವಾಗಿದ್ದರು.

ಕಳೆದ ವರ್ಷ ಏಷ್ಯನ್ ಕ್ರೀಡಾಕೂಟದ ಮೂಲಕ ನಿಖತ್ ಝರೀನ್ (50 ಕೆಜಿ), ಪ್ರೀತಿ ಪವಾರ್ (54 ಕೆಜಿ) ಮತ್ತು ಲವ್ಲಿನಾ ಬೋರ್ಗೊಹೈನ್ (75 ಕೆಜಿ) ಪ್ಯಾರಿಸ್‌ ಟಿಕೆಟ್‌ ಕಾಯ್ದಿರಿಸಿದ್ದರು.

ತಂಡ ಹೀಗಿದೆ: ಮಹಿಳೆಯರು: ಜಾಸ್ಮಿನ್ ಲಂಬೋರಿಯಾ (57 ಕೆಜಿ), ಅಂಕುಶಿತಾ ಬೊರೊ (60 ಕೆಜಿ), ಅರುಂಧತಿ ಚೌಧರಿ (66 ಕೆಜಿ).

ಪುರುಷರು: ಅಮಿತ್ ಪಂಗಲ್ (51 ಕೆಜಿ), ಸಚಿನ್ ಸಿವಾಚ್ (57 ಕೆಜಿ), ಅಭಿನಾಶ್ ಜಮ್ವಾಲ್ (63.5 ಕೆಜಿ), ನಿಶಾಂತ್ ದೇವ್ (71 ಕೆಜಿ), ಅಭಿಮನ್ಯು ಲೂರಾ (80 ಕೆಜಿ), ಸಂಜೀತ್ (92 ಕೆಜಿ), ನರೇಂದರ್ ಬರ್ವಾಲ್ (92+ ಕೆಜಿ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.