ADVERTISEMENT

ಪಂಕಜ್ ಅಡ್ವಾಣಿಗೆ ಚಾಂಪಿಯನ್‌ ಪಟ್ಟ

ಏಷ್ಯನ್ ಸ್ನೂಕರ್‌ ಟೆನ್ ರೆಡ್ಸ್‌ ಟೂರ್‌: ಇರಾನ್‌ನ ಎಹ್ಸಾನ್‌ ಹೈದರಿ ರನ್ನರ್ ಅಪ್‌

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 20:15 IST
Last Updated 25 ಏಪ್ರಿಲ್ 2019, 20:15 IST

ಬೆಂಗಳೂರು: ನಿರೀಕ್ಷೆ ಹುಸಿಯಾಗಲಿಲ್ಲ. ಭಾರತದ ಪಂಕಜ್ ಅಡ್ವಾಣಿ ಮತ್ತೊಮ್ಮೆ ‘ಚಾಂಪಿಯನ್‌’ ಆಟ ಆಡಿದರು. ವಸಂತ ನಗರದ ರಾಜ್ಯ ಬಿಲಿಯರ್ಡ್ಸ್‌ ಸಂಸ್ಥೆ ಆವರಣದಲ್ಲಿ ನಡೆದ ಎಸಿಬಿಎಸ್‌ ಏಷ್ಯನ್ ಸ್ನೂಕರ್ ಟೂರ್‌ 10 ರೆಡ್ಸ್ ಚಾಂಪಿಯನ್‌ಷಿಪ್‌ನ ಮೂರನೇ ಲೆಗ್‌ನ ಪ್ರಶಸ್ತಿ ಮುಡಿಗೇರಿಸಿಕೊಂಡರು.

ಗುರುವಾರ ನಡೆದ ಫೈನಲ್‌ ಪಂದ್ಯದಲ್ಲಿ ಬೆಂಗಳೂರಿನ ಆಟಗಾರ, ಇರಾನ್‌ನ ಎಹ್ಸಾನ್‌ ಹೈದರಿ ನೆಶದ್‌ ಅವರ ಪ್ರಬಲ ಪೈಪೋಟಿಯನ್ನು ಮೀರಿ ನಿಂತರು.

ಚೀನಾದ ಜಿನಾನ್‌ನಲ್ಲಿ ನಡೆದಿದ್ದ ಟೂರ್‌ನ ಎರಡನೇ ಲೆಗ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಅಡ್ವಾಣಿ ತವರಿನಲ್ಲಿ ನಡೆದ ಅಂತಿಮ ಲೆಗ್‌ನ ಮೊದಲ ಎರಡು ದಿನ ಸಂಪೂರ್ಣವಾಗಿ ಲಯ ಕಂಡುಕೊಳ್ಳಲಾಗದೆ ನಿರಾಸೆ ಅನುಭವಿಸಿದ್ದರು. ಗುಂಪು ಹಂತದ ಪಂದ್ಯಗಳಲ್ಲಿ ತಲಾ ಎರಡನ್ನು ಗೆದ್ದು ಎರಡರಲ್ಲಿ ಸೋತಿದ್ದರು. ಆದರೆ ಬುಧವಾರ ಪ್ರೀಕ್ವಾರ್ಟರ್‌ ಮತ್ತು ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ನೈಜ ಸಾಮರ್ಥ್ಯ ತೋರಿದ್ದರು.

ADVERTISEMENT

ಗುರುವಾರ ಬೆಳಿಗ್ಗೆ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಮ್ಯಾನ್ಮಾರ್‌ನ ಆಂಗ್ ಫಿಯೊ ಅವರನ್ನು ಮಣಿಸಿದ ಅಡ್ವಾಣಿ ಅವರನ್ನು ಫೈನಲ್‌ನಲ್ಲಿ ಇರಾನ್ ಆಟಗಾರ ಕ್ಷಣ ಕ್ಷಣವೂ ಕಾಡಿದರು. ಏಳು–ಬೀಳುಗಳ ಕೊನೆಯಲ್ಲಿ ಅಡ್ವಾಣಿ ಜಯ ತಮ್ಮದಾಗಿಸಿಕೊಂಡರು.

ಫಲಿತಾಂಶಗಳು: ಸೆಮಿಫೈನಲ್: ಭಾರತದ ಪಂಕಜ್‌ ಅಡ್ವಾಣಿಗೆ ಮ್ಯಾನ್ಮಾರ್‌ನ ಆಂಗ್ ಫಿಯೊ ಎದುರು 5–2ರಿಂದ ಜಯ (50-27, 92 (92)-00, 86 (86)-15, 12-62, 54-30, 24-70, 79-05); ಇರಾನ್‌ನ ಎಹ್ಸಾನ್‌ ಹೈದರಿ ನೆಶದ್‌ಗೆ ಥಾಯ್ಲೆಂಡ್‌ನ ಥನಾವತ್‌ ತಿರಪೊಂಗ್‌ಪೈಬೂನ್‌ ಎದುರು 5–3ರಿಂದ ಜಯ (56 (46)-01, 46-05, 05-85 (80), 01-57, 00-98 (98), 92 (92)-00, 53 (53)-07, 67-36).

ಫೈನಲ್‌: ಪಂಕಜ್‌ ಅಡ್ವಾಣಿಗೆ ಎಹ್ಸಾನ್‌ ಹೈದರಿ ನೆಶದ್‌ ವಿರುದ್ಧ 6–4ರಿಂದ ಗೆಲುವು (52-40, 66 (58)-00, 01-63 (62), 78-04, 35-47, 00-51, 47-35, 38-39, 53 (49)-35, 51 (50)-20).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.