ನವದೆಹಲಿ: ಇತ್ತಿಚೆಗೆ ದೆಹಲಿಯಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪದಕಗಳನ್ನು ಗೆದ್ದ ಅಥ್ಲೀಟುಗಳನ್ನು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಶನಿವಾರ ಇಲ್ಲಿ ನಡೆದ ಸಮಾರಂಭದಲ್ಲಿ ಗೌರವಿಸಿದರು. ಪದಕ ವಿಜೇತರಿಗೆ ಸುಮಾರು ₹1.09 ಕೋಟಿ ಮೊತ್ತದ ನಗದು ಬಹುಮಾನ ನೀಡಲಾಯಿತು.
‘ದಣಿವರಿಯದ ಉತ್ಸಾಹ ಮತ್ತು ತೋರಿದ ಸ್ಫೂರ್ತಿಗಾಗಿ’ ಅಥ್ಲೀಟುಗಳನ್ನು ಸಚಿವರು ಶ್ಲಾಘಿಸಿದರು. ಒಂಬತ್ತು ದಿನಗಳ ಆ ಕೂಟದಲ್ಲಿ ಭಾರತ ದಾಖಲೆಯ 22 ಪದಕಗಳನ್ನು ಗೆದ್ದುಕೊಂಡಿತ್ತು. ಆರು ಚಿನ್ನ, ಒಂಬತ್ತು ಬೆಳ್ಳಿ ಮತ್ತು ಏಳು ಕಂಚಿನ ಪದಕಗಳು ಒಳಗೊಂಡಿದ್ದವು. ಪದಕಪಟ್ಟಿಯಲ್ಲಿ ಭಾರತ ಹತ್ತನೇ ಸ್ಥಾನ ಪಡೆದಿತ್ತು.
ಕ್ರೀಡಾ ಇಲಾಖೆ, ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಪ್ಯಾರಾ ಅಥ್ಲೀಟುಗಳಿಗೆ ಸುಮಾರು ₹1.09 ಕೋಟಿ ನಗದು ಬಹುಮಾನ ನೀಡಿತು ಎಂದು ಭಾರತ ಕ್ರೀಡಾ ಪ್ರಾಧಿಕಾರದ ಹೇಳಿಕೆ ತಿಳಿಸಿದೆ.
ಕ್ರೀಡಾ ಸಚಿವಾಲಯದ ನೀತಿಯಂತೆ ವಿಶ್ವ ಪ್ಯಾರಾ ಕ್ರೀಡೆಗಳಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಅಥ್ಲೀಟುಗಳು ₹10 ಲಕ್ಷ, ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದವರು ಕ್ರಮವಾಗಿ ₹7 ಲಕ್ಷ ಮತ್ತು ₹4 ಲಕ್ಷ ಪಡೆಯುತ್ತಾರೆ.
ಭಾರತ ಪ್ಯಾರಾಲಿಂಪಿಕ್ಸ್ ಸಮಿತಿ ಅಧ್ಯಕ್ಷ ದೇವೇಂದ್ರ ಝಜಾರಿಯಾ ಅವರೂ ಹಾಜರಿದ್ದರು.
ದೃಷ್ಟಿದೋಷವಿರುವ ಅಥ್ಲೀಟುಗಳಿಗೆ ಇರುವ ಟಿ12 ವಿಭಾಗದಲ್ಲಿ 100 ಮೀ. ಓಟದಲ್ಲಿ ಚಿನ್ನ, 200 ಮೀ. ಓಟದಲ್ಲಿ ಬೆಳ್ಳಿ ಗೆದ್ದುಕೊಂಡ ಸಿಮ್ರಾನ್ ಶರ್ಮಾ ಭಾಗವಹಿಸಿರಲಿಲ್ಲ. ಅವರ ಗೈಡ್ ಉಮರ್ ಸೈಫಿ ಅವರ ಮೇಲೆ ರಾಷ್ಟ್ರೀಯ ಉದ್ದೀಪನ ಮದ್ದುಸೇವನೆ ನಿಗ್ರಹ ಘಟಕ ತಾತ್ಕಾಲಿಕ ಅಮಾನತು ಹೇರಿದೆ.
ದೆಹಲಿಯ ಸಿಮ್ರನ್ ಶರ್ಮಾ ಅವರ ಕೋಚ್ ಉಮರ್ ಸೈಫಿ ಅವರು ನಿರ್ಬಂಧಿತ ಅನಾಬಾಲಿಕ್ ಸ್ಟಿರಾಯಿಡ್ ‘ಡ್ರೊಸ್ಟಾನಲೋನ್’ ಸೇವನೆ ಮಾಡಿದ್ದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಅವರು ತಮ್ಮ ಅಮಾಯಕತ್ವ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ಈಗ ನಾಡಾ ಫಲಿತಾಂಶ ವಿರುದ್ಧ ಮೇಲ್ಮನವಿ ಸಲ್ಲಿಸುವ ಆಯ್ಕೆ ಮಾತ್ರ ಅವರ ಮುಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.