ADVERTISEMENT

ಅಂದು ಅಂತರರಾಷ್ಟ್ರೀಯ ಶೂಟರ್, ಇಂದು ಬೀದಿ ಬದಿ ಸ್ನ್ಯಾಕ್ಸ್‌ ವ್ಯಾಪಾರ!

ಉತ್ತರಾಖಂಡದ ದಿಲ್‌ರಾಜ್‌ ಕೌರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜೂನ್ 2021, 7:14 IST
Last Updated 24 ಜೂನ್ 2021, 7:14 IST
ದಿಲ್‌ರಾಜ್ ಕೌರ್
ದಿಲ್‌ರಾಜ್ ಕೌರ್   

ಡೆಹರಾಡೂನ್: ಭಾರತದ ಪರವಾಗಿ 15 ವರ್ಷಗಳ ಕಾಲ ಪ್ಯಾರಾ ಶೂಟಿಂಗ್‌ನಲ್ಲಿ ಸಾಧನೆ ಮಾಡಿದ್ದ ಉತ್ತರಾಖಂಡದ ದಿಲ್‌ರಾಜ್ ಕೌರ್ (38) ಅವರು ಇಂದು ಬೀದಿ ಬದಿ ಕುರುಕಲು ತಿಂಡಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.

‘ತಮ್ಮ ಸಾಧನೆಗಳನ್ನು ಗುರುತಿಸಿ ಕೇಂದ್ರ ಅಥವಾ ರಾಜ್ಯ ಸರ್ಕಾರ ಯಾವುದಾದರೂ ಒಂದು ಸರ್ಕಾರಿ ಉದ್ಯೋಗ ನೀಡುತ್ತಾ ಎಂದು ಸಾಕಷ್ಟು ಪ್ರಯತ್ನ ಮಾಡಿದರೂ ಕಡೆಗೆ ಯಾವುದೂ ಉದ್ಯೋಗ ಸಿಗದಿದ್ದಕ್ಕೆ ಅನಿವಾರ್ಯವಾಗಿ ಡೆಹರಾಡೂನ್‌ನ ಗಾಂಧಿ ಪಾರ್ಕ್‌ ಬಳಿ ಬಿಸ್ಕತ್ತು ಮತ್ತು ಸ್ನ್ಯಾಕ್ಸ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೇನೆ‘ ಎಂದು ದಿಲ್‌ರಾಜ್‌ ಅವರು ಹೇಳಿರುವುದಾಗಿ ‘ಇಂಡಿಯಾ ಟುಡೇ‘ ಹಾಗೂ ‘ಎಎನ್‌ಐ‘ ವರದಿ ಮಾಡಿದೆ.

ಕೌರ್ ಅವರು ಭಾರತದ ಅಂತರರಾಷ್ಟ್ರೀಯ ಮಟ್ಟದ ಪ್ಯಾರಾ ಶೂಟರ್ ಆಗಿದ್ದರು. ಅವರು ಭಾರತದ ವಿವಿಧೆಡೆ ನಡೆದಿದ್ದ ಶೂಟಿಂಗ್ ಕ್ರೀಡೆಯಲ್ಲಿ 28 ಚಿನ್ನದ ಪದಕ, 8 ಬೆಳ್ಳಿ, 3 ಕಂಚಿನ ಪದಕಗಳನ್ನು ಗೆದ್ದಿದ್ದರು. ಅನೇಕ ಅಂತರರಾಷ್ಟ್ರೀಯ ಪ್ಯಾರಾ ಶೂಟಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ADVERTISEMENT

ಕ್ರೀಡಾ ಕೋಟಾದಡಿ ಅವರು ಅನೇಕ ಬಾರಿ ಉತ್ತರಾಖಂಡ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದರೂ ಯಾರೂ ಪರಿಗಣಿಸಲಿಲ್ಲ ಎಂದು ಕೌರ್ ನೋವು ತೋಡಿಕೊಂಡಿದ್ದಾರೆ.

ಕೌರ್ ಅವರು ಸದ್ಯ ಡೆಹರಾಡೂನ್‌ನ ಬಾಡಿಗೆ ಮನೆಯೊಂದರಲ್ಲಿ ತಮ್ಮ ತಾಯಿ ಜೊತೆ ನೆಲೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.