ADVERTISEMENT

Olympics: ಪಂದ್ಯ ಗೆದ್ದರೂ 'ನಮಗಿದು ಎಚ್ಚರಿಕೆ ಗಂಟೆ' ಎಂದ ಭಾರತದ ಗೋಲ್‌ಕೀಪರ್

ಪಿಟಿಐ
Published 28 ಜುಲೈ 2024, 4:54 IST
Last Updated 28 ಜುಲೈ 2024, 4:54 IST
<div class="paragraphs"><p>ಭಾರತ ಹಾಕಿ ತಂಡದ ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಷ್‌</p></div>

ಭಾರತ ಹಾಕಿ ತಂಡದ ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಷ್‌

   

ಪಿಟಿಐ ಚಿತ್ರ

ಪ್ಯಾರಿಸ್: ಭಾರತ ಹಾಕಿ ತಂಡವು ಒಲಿಂಪಿಕ್‌ ಕ್ರೀಡಾಕೂಟದ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್ ಎದುರು 3–2 ಅಂತರದ ಗೆಲುವು ಸಾಧಿಸಿದೆ. ಆದಾಗ್ಯೂ, 'ಈ ಪಂದ್ಯವು ನಮಗೆ ಎಚ್ಚರಿಕೆ ಗಂಟೆ ಇದ್ದಂತೆ' ಎಂದು ಅನುಭವಿ ಗೋಲ್‌ಕೀಪರ್‌ ಪಿ.ಆರ್‌. ಶ್ರೀಜೇಷ್‌ ಹೇಳಿದ್ದಾರೆ.

ADVERTISEMENT

ಕಠಿಣ ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ ನಾಯಕ ಹರ್ಮನ್‌ಪ್ರೀತ್‌ ಸಿಂಗ್ ಅವರು ಕೊನೇ ಕ್ಷಣದಲ್ಲಿ ನಿರ್ಣಾಯಕ ಬಾರಿಸಿ ಭಾರತಕ್ಕೆ ಗೆಲುವು ತಂದುಕೊಟ್ಟರು.

ಪಂದ್ಯದ ಬಳಿಕ ಮಾತನಾಡಿರುವ ಶ್ರೀಜೇಷ್‌, 'ಮೊದಲ ಪಂದ್ಯವು ಸುಲಭದ್ದಾಗಿರಲಿಲ್ಲ. ನ್ಯೂಜಿಲೆಂಡ್‌ ತಂಡ ಸಾಧಾರಣ ತಂಡವಲ್ಲ. ನಾವು ಕೆಲವು ತಪ್ಪುಗಳನ್ನು ಮಾಡಿದೆವು. ಅದೇರೀತಿ ಉತ್ತಮ ಆಟವನ್ನೂ ಆಡಿದೆವು. ನಮ್ಮ ತಂಡಕ್ಕೆ ಈ ಪಂದ್ಯವು ಎಚ್ಚರಿಕೆ ಗಂಟೆ ಇದ್ದಂತೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

'ನಾವು ಮೂರು ಪಾಯಿಂಟ್‌ ಗಳಿಸಿದೆವು ಎಂಬುದು ಪ್ರಮುಖ ಸಂಗತಿ. ಎದುರಾಳಿ ತಂಡಕ್ಕೂ ಅವಕಾಶಗಳನ್ನು ನೀಡಿದೆವು. ಅವರೂ ಗೋಲು ಬಾರಿಸಿದರು. ಕೊನೆಯ ಕೆಲವು ನಿಮಿಷದ ಆಟ ಸುಲಭದ್ದಾಗಿರಲಿಲ್ಲ. ಆದರೆ, ಹಾಕಿ ಇರುವುದೇ ಹಾಗೆ. ಮೊದಲಿಂದ ಕೊನೆವರೆಗೂ ಒತ್ತಡ ಇದ್ದೇ ಇರುತ್ತದೆ' ಎಂದು ಹೇಳಿದ್ದಾರೆ.

ಭಾರತ ತಂಡದ ಕೋಚ್‌ ಕ್ರೇಗ್‌ ಫುಲ್ಟನ್‌, ಗುಂಪು ಹಂತದಲ್ಲಿ ಇನ್ನಷ್ಟು ಕಠಿಣ ಪೈಪೋಟಿಗಳು ಎದುರಾಗುತ್ತದೆ ಎಂದಿದ್ದಾರೆ.

'ಆಸ್ಟ್ರೇಲಿಯಾ ಹಾಗೂ ಅರ್ಜೆಂಟೀನಾ ಪಂದ್ಯವನ್ನು ನೋಡಬಹುದು. ಅದು 1–0 ಅಂತರದಲ್ಲಿ ಮುಕ್ತಾಯವಾಯಿತು. ಆ ಪಂದ್ಯದಲ್ಲಿ ಅತ್ಯಂತ ನಿಕಟ ಪೈಪೋಟಿ ಇತ್ತು. ಹೀಗಾಗಿ, ನ್ಯೂಜಿಲೆಂಡ್‌ ಎದುರಿನ ಪಂದ್ಯವು ನಮ್ಮ ಪಾಲಿಗೆ ತುಂಬಾ ಮುಖ್ಯ. ನಮ್ಮ ತಂಡ ಪರಿಪೂರ್ಣ ಪ್ರದರ್ಶನ ನೀಡಲಿಲ್ಲ. ಆದರೆ, ನಮ್ಮ ಬಳಿ ಯೋಜನೆಗಳಂತೂ ಇವೆ. ಅದಕ್ಕೆ ತಕ್ಕಂತೆ ಆಡುತ್ತೇವೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತಕ್ಕೆ ಜಯ
ಪಂದ್ಯದ 8ನೇ ನಿಮಿಷದಲ್ಲಿ ನ್ಯೂಜಿಲೆಂಡ್‌ನ ಸ್ಯಾಮ್ ಲೇನ್ ಮೊದಲ ಗೋಲು ಬಾರಿಸಿದರು. ಇದಕ್ಕೆದುರಾಗಿ ಭಾರತದ ಮನದೀಪ್‌ ಸಿಂಗ್‌ 24ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ರಿಬೌಂಡ್‌ ಮಾಡಿ ಗೋಲು ಗಳಿಸಿದರು. ಇದರಿಂದ ಪಂದ್ಯವು 1–1 ಅಂತರದ ಸಮಬಲವಾಯಿತು. ವಿವೇಕ್ ಸಾಗರ್ 34ನೇ ನಿಮಿಷದಲ್ಲಿ ಇನ್ನೊಂದು ಗೋಲು ಬಾರಿಸಿ 2–1 ಅಂತರದ ಮುನ್ನಡೆ ತಂದುಕೊಟ್ಟರು. ಪ್ರತಿಯಾಗಿ ಎದುರಾಳಿ ತಂಡದ ಸೈಮನ್ ಚೈಲ್ಡ್ ಅವರು 53ನೇ ನಿಮಿಷದಲ್ಲಿ ಗೋಲು ಗಳಿಸಿ ಸಮಬಲಕ್ಕೆ ಕಾರಣರಾದರು.

ಇದು ಎರಡೂ ತಂಡಗಳಲ್ಲಿ ಒತ್ತಡ ಸೃಷ್ಟಿಸಿತು.

ಪಂದ್ಯದ ಮುಕ್ತಾಯಕ್ಕೆ ಒಂದು ನಿಮಿಷ ಬಾಕಿಯಿದ್ದಾಗ (59ನೇ ನಿಮಿಷದಲ್ಲಿ) ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಗೋಲು ಗಳಿಸಿ ಭಾರತದ ಗೆಲುವನ್ನು ಖಾತ್ರಿಪಡಿಸಿದರು.

ಭಾರತ ತಂಡ ತನ್ನ ಮುಂದಿನ ಪಂದ್ಯದಲ್ಲಿ (ಸೋಮವಾರ) ಅರ್ಜೆಂಟೀನಾದ ಸವಾಲನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.