ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್‌: ಜ್ಯೋತಿ ಹಿಡಿದು ಓಡಲಿದ್ದಾರೆ 10 ಸಾವಿರ ಓಟಗಾರರು

ಎಎಫ್‌ಪಿ
Published 30 ಮೇ 2023, 22:07 IST
Last Updated 30 ಮೇ 2023, 22:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸೇಂಟ್‌ ಡೆನಿಸ್‌ (ಫ್ರಾನ್ಸ್‌): 2024ರ ಒಲಿಂಪಿಕ್‌ ಕ್ರೀಡಾ ಜ್ಯೋತಿ 60ಕ್ಕೂ ಹೆಚ್ಚು ಪ್ರಾಂತ್ಯಗಳನ್ನು ಹಾದುಹೋಗುವ ಕಾರಣ 10,000ಕ್ಕೂ ಹೆಚ್ಚು ಮಂದಿ ಒಲಿಂಪಿಕ್‌ ಜ್ಯೋತಿ ರಿಲೇಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ಯಾರಿಸ್‌ ಒಲಿಂಪಿಕ್ಸ್‌ ಸಂಘಟಕರು ಮಂಗಳವಾರ ತಿಳಿಸಿಗ್ದಾರೆ.

ಗ್ರೀಸ್‌ನ ಒಲಿಂಪಿಯಾದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಜ್ಯೋತಿಯನ್ನು ಬೆಳಗಿದ ನಂತರ ಅದು ಸಮುದ್ರ ಮಾರ್ಗ ಮೂಲಕ ‘ಬೆಲೆಮ್‌’  ಹಡಗಿನಲ್ಲಿ ಜೂನ್‌ 8ರಂದು ಮಾರ್ಸಿಯಿ ಬಂದರು ತಲುಪಲಿದೆ. ನಂತರ ದೇಶದಾದ್ಯಂತ ಜ್ಯೋತಿ ಯಾತ್ರೆ ನಡೆಯಲಿದ್ದು, ಜುಲೈ 26ರಂದು ರಾಜಧಾನಿ ಪ್ಯಾರಿಸ್‌ಗೆ ತಲುಪಲಿದೆ.

ಜ್ಯೋತಿಯನ್ನು ಐಫೆಲ್‌ ಟವರ್‌ನಲ್ಲಿ ಪ್ರಜ್ವಲಿಸುವ ವ್ಯವಸ್ಥೆ ಮಾಡಲಾಗುವುದು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಅಂತಿಮ ತಾಣವನ್ನು ಇನ್ನೂ ನಿರ್ಧರಿಸಿಲ್ಲ ಎಂದು ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಟೋನಿ ಎಸ್ಟಾನ್‌ಕ್ವೆ ಅವರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ADVERTISEMENT

ಈ ಬಾರಿ ಸಾಮೂಹಿಕ ರಿಲೇಗಳು ನಡೆಯಲಿದೆ. ಪ್ರತಿ ಗುಂಪಿನಲ್ಲಿ 24 ಮಂದಿ ಇರಲಿದ್ದು, ಒಬ್ಬರು ಜ್ಯೋತಿ ಹಿಡಿದುಕೊಂಡು ಓಡುವುದು ಈ ಬಾರಿಯ ವಿಶೇಷ. ಈ ರೀತಿಯ ಮೂರು ಸಾವಿರ ಗುಂಪುಗಳು ಭಾಗವಹಿಸಲಿವೆ. ಜೊತೆಗೆ 7,000 ಮಂದಿ ವೈಯಕ್ತಿಕವಾಗಿ ಜ್ಯೋತಿ ಹಿಡಿದು ಓಡಲಿದ್ದಾರೆ. 15 ವರ್ಷ ಮೇಲ್ಪಟ್ಟ ಪುರುಷರು ಮತ್ತು ಅಷ್ಟೇ ಸಂಖ್ಯೆಯ ಮಹಿಳೆಯರು ಇದರಲ್ಲಿ ಭಾಗವಹಿಸಲಿದ್ದಾರೆ. ಜ್ಯೋತಿ ಹಿಡಿಯುವ ವ್ಯಕ್ತಿ ನಾಲ್ಕು ನಿಮಿಷ ಓಡಲಿದ್ದು 200 ಮೀ. ಕ್ರಮಿಸಲಿದ್ದಾರೆ. ಶೇ 10ರಷ್ಟು ಜ್ಯೋತಿಧಾರಿಗಳನ್ನು ವ್ಯವಸ್ಥಾಪಕ ಸಮಿತಿ ಮತ್ತು ಕ್ರೀಡಾ ಸಂಸ್ಥೆಗಳು ನಿರ್ಧರಿಸಲಿವೆ. ಮತ್ತೆ ಶೇ 10ರಷ್ಟು ಮಂದಿಯನ್ನು ಪ್ರಾಯೋಜಕರಾದ ಕೋಕಾ ಕೋಲಾ ಮತ್ತು ಫ್ರೆಂಚ್‌ ಬ್ಯಾಂಕ್‌  ಬಿಪಿಸಿಇ ನಿರ್ಧರಿಸಲಿವೆ. ಮತ್ತು ಉಳಿದ ಶೇ 10ರಷ್ಟು ಜ್ಯೋತಿಧಾರಿಗಳನ್ನು ರಿಲೇ ಓಟದ ಆತಿಥ್ಯ ವಹಿಸುವ ಸ್ಥಳೀಯ ಪ್ರಾಂತ್ಯಗಳು ನಿರ್ಧರಿಸಲಿವೆ.

ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಧಾರ್ಮಿಕ ಮುಖಂಡರಿಗೆ ಜ್ಯೋತಿ ಹಿಡಿದು ಓಡುವ ಅವಕಾಶ ಇಲ್ಲ. ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಇದನ್ನು ನಿರ್ಬಂಧಿಸಿದೆ. ಕೆಲವು ಪ್ರಾಂತ್ಯಗಳು, ಇದರ ಖರ್ಚು ವಿಪರೀತ (₹1.59 ಕೋಟಿ) ಎಂದು ಆತಿಥ್ಯ ವಹಿಸಿಕೊಳ್ಳಲು ಹಿಂದೇಟುಹಾಕಿವೆ.

ಕಳೆದ ಬಾರಿಯ ಟೋಕಿಯೊ ಒಲಿಂಪಿಕ್ಸ್‌ ವೇಳೆ ಒಲಿಂಪಿಕ್‌ ಜ್ಯೋತಿ ಯಾತ್ರೆಯಲ್ಲಿ ಜನರ ಭಾಗವಹಿಸುವಿಕೆಯನ್ನು ಕೋವಿಡ್‌ ಕಾರಣ ನಿರ್ಬಂಧಿಸಲಾಗಿತ್ತು. ಲಂಡನ್‌ ಒಲಿಂಪಿಕ್ಸ್‌ ವೇಳೆ (2012) 8,000 ಮಂದಿ ಒಲಿಂಪಿಕ್‌ ಜ್ಯೋತಿಹಿಡಿದು ಓಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.