ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್‌: ಪದಕಕ್ಕೆ ಪಂಚ್‌’..?

ಕೆ.ಓಂಕಾರ ಮೂರ್ತಿ
Published 26 ಜುಲೈ 2024, 3:36 IST
Last Updated 26 ಜುಲೈ 2024, 3:36 IST
   

2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಹರಿಯಾಣದ ಬಾಕ್ಸರ್‌ ವಿಜೇಂದ್ರ ಸಿಂಗ್‌ ಕಂಚಿನ ಪದಕ ಗೆದ್ದಿದ್ದು ಭಾರತದಲ್ಲಿ ಬಾಕ್ಸಿಂಗ್‌ ಕ್ರೀಡೆಗೆ ಸಿಕ್ಕ ಮಹತ್ವದ ತಿರುವು. ಅದೆಷ್ಟೊ ಮಕ್ಕಳಲ್ಲಿ ಬಾಕ್ಸರ್‌ ಆಗುವ ಆಸೆ ಮೊಳಕೆ ಒಡೆಯಿತು, ಪದಕದ ಭರವಸೆಯನ್ನೂ ಹೆಚ್ಚಿಸಿತು. ದೇಶದಲ್ಲಿ ಬಾಕ್ಸಿಂಗ್‌ ಅಭಿರುಚಿ ಬೆಳೆಯುವಲ್ಲಿ ಅಖಿಲ್‌ ಕುಮಾರ್‌, ಜಿತೇಂದ್ರ ಕುಮಾರ್‌, ಡಿಂಕೋ ಸಿಂಗ್ ಪಾತ್ರವೂ ಇದೆ.

ಅದರಲ್ಲೂ 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಮಣಿಪುರದ ಮೇರಿ ಕೋಮ್‌ ಕಂಚಿನ ಪದಕ ಗೆದ್ದ ಮೇಲೆ ಯುವತಿಯರಲ್ಲೂ  ಭರವಸೆ ಹುಟ್ಟಿಕೊಂಡಿತು. ಅಂದು ಎರಡು ಮಕ್ಕಳ ತಾಯಿ ನಿರ್ಮಿಸಿದ ಸಾಧನೆ ಅದೆಷ್ಟೋ ಮಂದಿಗೆ ಸ್ಫೂರ್ತಿಯಾಯಿತು.

2016ರಲ್ಲಿ ರಿಯೋ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್‌ ನಲ್ಲಿ ಭಾರತದ ಬಾಕ್ಸರ್‌ಗಳು ಬರಿಗೈ ಬಂದರಾದರೂ 2020ರ ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಲವ್ಲಿನಾ ಬೊರ್ಗೊಹೇನ್‌ ಕಂಚು ಗೆದ್ದರು.

ADVERTISEMENT

ಈ ಬಾರಿ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲೂ ಭಾರತದ ಬಾಕ್ಸರ್‌ಗಳಿಂದ ಪದಕದ ಭರವಸೆ ಮೂಡಿದೆ. ಅದರಲ್ಲೂ ಮಹಿಳೆಯರ ವಿಭಾಗದಲ್ಲಿ ವಿಶ್ವ ಚಾಂಪಿಯನ್ ನಿಖತ್‌ ಜರೀನ್‌ (50 ಕೆ.ಜಿ) ಹಾಗೂ ಲವ್ಲಿನಾ (75 ಕೆ.ಜಿ) ಮೇಲೆ ನಿರೀಕ್ಷೆ ಭಾರವಿದೆ. ಅಸ್ಸಾಂ ಮೂಲದ 26 ವರ್ಷದ ಲವ್ಲಿನಾ ಹಿಂದಿನ ಒಲಿಂಪಿಕ್ಸ್‌ನಲ್ಲಿ 69 ಕೆ.ಜಿ ವಿಭಾಗದಲ್ಲಿ ಕಣಕ್ಕಿಳಿದಿದ್ದರು.

ಒಟ್ಟು ಆರು ಬಾಕ್ಸರ್‌ಗಳು ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಹಿಂದಿನ ಒಲಿಂಪಿಕ್ಸ್‌ಗೆ ಹೋಲಿಸಿದರೆ ಸಂಖ್ಯೆ ಕಡಿಮೆ.

ಜಾಸ್ಮಿನ್‌ ಲಂಬೋರಿಯಾ (57 ಕೆ.ಜಿ), ಪ್ರೀತಿ ಪವಾರ್‌ (54 ಕೆ.ಜಿ), ಪುರುಷರ ವಿಭಾಗದಲ್ಲಿ ನಿಶಾಂತ್‌ ದೇವ್‌ (71 ಕೆ.ಜಿ), ಅಮಿತ್‌ ಪಂಗ್ಹಲ್‌ (51 ಕೆ.ಜಿ) ಅಚ್ಚರಿ ಪ್ರದರ್ಶನಕ್ಕೆ ಸಿದ್ಧವಾಗಿದ್ದಾರೆ.

ಇತ್ತ ಮೇರಿ ಕೋಮ್‌ ತೆರೆಮರೆಗೆ ಸರಿಯುತ್ತಿದ್ದಂತೆ ಭರವಸೆಯ ಕಿರಣವಾಗಿ ಉದಯಿಸಿದವರು 27 ವರ್ಷದ ನಿಖತ್‌. ಒಲಿಂಪಿಕ್ಸ್‌ನಲ್ಲಿ ದೇಶ ಪ್ರತಿನಿಧಿಸಲು 2019ರಲ್ಲಿ ತೆಲಂಗಾಣದ ಅವರು ಮೇರಿ ಕೋಮ್‌ಗೆ ನೀಡಿದ್ದ ಪಂಥಾಹ್ವಾನ, ನಂತರ ನಡೆದ ಹೋರಾಟ ಎಲ್ಲರಿಗೂ ಗೊತ್ತೇ ಇದೆ. ಅಂದು ಅವರು ಸೋಲು ಕಂಡಿದ್ದರೂ ಹೋರಾಟ ಮಾತ್ರ ನಿಲ್ಲಿಸಲಿಲ್ಲ. ಇನ್ನು ಪ್ರೀತಿ ಪವಾರ್‌ ಅವರಿಗೆ ಕೇವಲ 19 ವರ್ಷ ವಯಸ್ಸು.

ಭುಜದ ಗಾಯದ ಸಮಸ್ಯೆಯಿಂದ ಹೊರಬಂದಿರುವ ನಿಶಾಂತ್‌ ದೇವ್‌ ಹರಿಯಾಣದವರು. ಈಚೆಗೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಕರ್ನಾಟಕ ಪ್ರತಿನಿಧಿಸುತ್ತಿದ್ದಾರೆ. ಅವರಿಗೆ ಮುಖ್ಯಮಂತ್ರಿ ₹ 5 ಲಕ್ಷ ಪ್ರೋತ್ಸಾಹಧನ ಕೂಡ ಪ್ರಕಟಿಸಿದ್ದಾರೆ. ಅಮಿತ್‌ ಪಂಗ್ಹಲ್‌ ಕಳೆದ ಒಲಿಂಪಿಕ್ಸ್‌ನಲ್ಲೂ ಇದ್ದರು. ಭಾರತದ ಪದಕಗಳ ಟ್ಯಾಲಿಗೆ ಬಾಕ್ಸರ್‌ಗಳು ಎಷ್ಟು ಪದಕ ಸೇರಿಸುತ್ತಾರೆ ಎಂಬುದೇ ಕುತೂಹಲ. ಬಾಕ್ಸಿಂಗ್‌ ಸ್ಪರ್ಧೆಗಳು ಜುಲೈ 27ರಿಂದ ಆ.10ರವರೆಗೆ ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.