ADVERTISEMENT

ಕಬಡ್ಡಿ: ಸುಲಭ ಗೆಲುವಿನೊಡನೆ ನಾಲ್ಕನೇ ಸ್ಥಾನಕ್ಕೆ ಜಿಗಿದ ಪಟ್ನಾ

ಪಿಟಿಐ
Published 10 ಫೆಬ್ರುವರಿ 2024, 17:04 IST
Last Updated 10 ಫೆಬ್ರುವರಿ 2024, 17:04 IST
   

ಕೋಲ್ಕತ್ತ: ಸಂಘಟಿತ ಪ್ರದರ್ಶನ ನೀಡಿದ ಪಟ್ನಾ ಪೈರೇಟ್ಸ್ ತಂಡ, ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಶನಿವಾರ 44–23 ರಲ್ಲಿ 21 ಪಾಯಿಂಟ್‌ಗಳ ದೊಡ್ಡ ಅಂತರದಿಂದ ಯು ಮುಂಬಾ ತಂಡವನ್ನು ಸೋಲಿಸಿತು. ಹತ್ತನೇ ಆವೃತ್ತಿಯಲ್ಲಿ ಹತ್ತನೇ ಗೆಲುವಿನಿಂದ ಪಟ್ನಾ ಪಾಯಿಂಟ್ಸ್ ಪಟ್ಟಿಯಲ್ಲಿ ಆರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಜಿಗಿಯಿತು

ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂದ್ಯದಲ್ಲಿ ಪಟ್ನಾ ತಂಡ ಪಂದ್ಯದುದ್ದಕ್ಕೂ ಮೇಲುಗೈ ಸಾಧಿಸಿತು. ವಿರಾಮದ ವೇಳೆ 19–10 ಪಾಯಿಂಟ್‌ಗಳಿಂದ ಮುನ್ನಡೆಯಲ್ಲಿದ್ದ ಪಟ್ನಾ ನಂತರ ಮುನ್ನಡೆಯನ್ನು ಹೆಚ್ಚಿಸುತ್ತಾ ಹೋಯಿತು. ವಿರಾಮಕ್ಕೆ ಮೊದಲು ಒಂದು ಬಾರಿ ಮತ್ತು ನಂತರ ಎರಡು ಬಾರಿ ಮುಂಬೈ ಆಲೌಟ್‌ ಆಯಿತು.

ಸಚಿನ್ 9 ಟಚ್‌ ಪಾಯಿಂಟ್, ಒಂದು ಟ್ಯಾಕಲ್ ಪಾಯಿಂಟ್ ಸೇರಿ 10 ಪಾಯಿಂಟ್ಸ್ ಗಳಿಸಿದರೆ, ಬೆಂಬಲ ನೀಡಿದ ಎಂ.ಸುಧಾಕರ್ ಏಳು ಪಾಯಿಂಟ್ಸ್ ಕಲೆಹಾಕಿದರು. ಟ್ಯಾಕಲ್‌ನಲ್ಲಿ ಕೃಷನ್ ಎಂಟು ಪಾಯಿಂಟ್ಸ್ ಸಂಗ್ರಹಿಸಿ ಮಿಂಚಿದರು. ಈ ಆವೃತ್ತಿಯಲ್ಲಿ ಅವರು ರಕ್ಷಣೆ ವಿಭಾಗದಲ್ಲಿ 66 ಪಾಯಿಂಟ್ಸ್ ಗಳಿಸಿದಂತಾಗಿದೆ. ಪಟ್ನಾ ತಂಡ 20 ಪಂದ್ಯಗಳಿಂದ (10 ಗೆಲುವು, 7 ಸೋಲು, 3 ಟೈ) ಒಟ್ಟು 63 ಪಾಯಿಂಟ್ಸ್ ಗಳಿಸಿದೆ.

ADVERTISEMENT

ಇನ್ನೊಂದೆಡೆ, ಮುಂಬಾ ಪರ ಇರಾನ್‌ನ ಅಮಿರ್‌ಮೊಹಮ್ಮದ್ ಝಫರ್‌ದಾನೇಶ್ (12 ಪಾಯಿಂಟ್ಸ್‌) ಉತ್ತಮ ಪ್ರದರ್ಶನ ನೀಡಿದರು. ಆದರೆ ಉಳಿದವರಿಗೆ ಉತ್ತಮ ಬೆಂಬಲ ದೊರೆಯಲಿಲ್ಲ. ಇದು ಮುಂಬೈಗೆ ಸತತ ಐದನೇ ಸೋಲು. ಒಟ್ಟು 19 ಪಂದ್ಯಗಳನ್ನು ಆಡಿರುವ ಮುಂಬಾ ತಂಡ ಆರು ಗೆದ್ದು, 12 ಸೋತು, ಎರಡನ್ನು ‘ಟೈ’ ಮಾಡಿಕೊಂಡಿದೆ.

ಇನ್ನೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡ 55–35 ಪಾಯಿಂಟ್‌ಗಳಿಂದ ತಳದಲ್ಲಿರುವ ತೆಲುಗು ಟೈಟನ್ಸ್ ತಂಡವನ್ನು ಸೋಲಿಸಿತು. ರೈಡರ್ ನಿತಿನ್ ಕುಮಾರ್ 13 ಪಾಯಿಂಟ್‌ ಗಳಿಸಿದರೆ, ನಾಯಕ ಮಣಿಂದರ್ ಸಿಂಗ್ ಎಂಟು ಪಾಯಿಂಟ್ಸ್ ಕಲೆಹಾಕಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ವೈಭವ್ ಗರ್ಜೆ ಮತ್ತು ಹರ್ಷ ಲಾಡ್‌ ರಕ್ಷಣೆಯಲ್ಲಿ ಕ್ರಮವಾಗಿ 5 ಮತ್ತು 4 ಪಾಯಿಂಟ್ಸ್ ಗಳಿಸಿದರು.

ಟೈಟನ್ಸ್ ಪರ ಟ್ಯಾಕಲ್‌ನಲ್ಲಿ ಮಿಲಾದ್ ಜಬ್ಬಾರಿ (9 ಪಾಯಿಂಟ್ಸ್) ಮಿಂಚಿದರೆ, ರೈಡಿಂಗ್‌ನಲ್ಲಿ ಪ್ರಫುಲ್ ಝವಾರೆ (8) ಮತ್ತು ನಾಯಕ ಪವನ್ ಸೆಹ್ರಾವತ್ (6) ಒಂದಿಷ್ಟು ಪ್ರತಿರೋಧ ತೋರಿದರು. ವಾರಿಯರ್ಸ್‌ಗೆ ಇದು ಎಂಟನೇ ಗೆಲುವು. ಈ ತಂಡ 19 ಪಂದ್ಯಗಳಿಂದ 49 ಪಾಯಿಂಟ್ಸ್ ಗಳಿಸಿ ಏಳನೇ ಸ್ಥಾನದಲ್ಲಿದೆ. ಟೈಟನ್ಸ್‌ಗೆ ಇದು 19 ಪಂದ್ಯಗಳಲ್ಲಿ 17ನೇ ಸೋಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.