ADVERTISEMENT

ಸಿಂಧು, ತೈ ಜು ಯಿಂಗ್‌ಗೆ ಗರಿಷ್ಠ ಬೆಲೆ

ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ ಹರಾಜು: ಶಕ್ತಿ ಹೆಚ್ಚಿಸಿಕೊಂಡ ಚೆನ್ನೈ, ಪುಣೆ ತಂಡಗಳು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2019, 19:38 IST
Last Updated 26 ನವೆಂಬರ್ 2019, 19:38 IST

ನವದೆಹಲಿ: ಹಾಲಿ ವಿಶ್ವ ಚಾಂಪಿಯನ್‌ ಪಿ.ವಿ.ಸಿಂಧು ಮತ್ತು ಮಹಿಳೆಯರ ಸಿಂಗಲ್ಸ್‌ ವಿಭಾಗದ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತೈ ಜು ಯಿಂಗ್‌ ಅವರು ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌) ಐದನೇ ಆವೃತ್ತಿಯ ಹರಾಜಿನಲ್ಲಿ ಗರಿಷ್ಠ ಮೊತ್ತ ಪಡೆದಿದ್ದಾರೆ.

ಮಂಗಳವಾರ ನಡೆದ ಹರಾಜಿನಲ್ಲಿ ಹೈದರಾಬಾದ್‌ ಹಂಟರ್ಸ್‌ ತಂಡವು ₹ 77 ಲಕ್ಷ ನೀಡಿ ಸಿಂಧು ಅವರನ್ನು ತನ್ನಲ್ಲೇ ಉಳಿಸಿಕೊಂಡಿತು.

ಚೀನಾ ತೈಪೆಯ ಯಿಂಗ್‌ ಅವರನ್ನು ₹ 77 ಲಕ್ಷ ನೀಡಿ ಬೆಂಗಳೂರು ರ‍್ಯಾಪ್ಟರ್ಸ್‌ ತಂಡ ತನ್ನತ್ತ ಸೆಳೆದುಕೊಂಡಿತು.

ADVERTISEMENT

ಯಿಂಗ್‌ ಅವರನ್ನು ಖರೀದಿಸಲು ಹಾಲಿ ಚಾಂಪಿಯನ್‌ ಬೆಂಗಳೂರು ಮತ್ತು ಪುಣೆ 7 ಏಸಸ್‌ ತಂಡಗಳ ನಡುವೆ ಜಿದ್ದಾಜಿದ್ದಿ ಕಂಡುಬಂತು. ಈ ಪೈಪೋಟಿಯಲ್ಲಿ ಅಂತಿಮವಾಗಿ ರ‍್ಯಾಪ್ಟರ್ಸ್‌ ಮೇಲುಗೈ ಸಾಧಿಸಿತು.

ಬೆಂಗಳೂರಿನ ತಂಡವು ಬಿ.ಸಾಯಿ ಪ್ರಣೀತ್‌ ಅವರನ್ನು ತನ್ನಲ್ಲೇ ಉಳಿಸಿಕೊಂಡಿತು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದ ಹಿರಿಮೆ ಹೊಂದಿರುವ ಪ್ರಣೀತ್ ₹ 32 ಲಕ್ಷ ಜೇಬಿಗಿಳಿಸಿದರು.

ಪುರುಷರ ಡಬಲ್ಸ್‌ ಮತ್ತು ಮಿಶ್ರ ಡಬಲ್ಸ್‌ ವಿಭಾಗಗಳಲ್ಲಿ ಆಡುವ ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಅವರಿಗೂ ಭಾರೀ ಬೇಡಿಕೆ ಕುದುರಿತ್ತು. ಅವರು ₹ 62 ಲಕ್ಷಕ್ಕೆ ಚೆನ್ನೈ ಸೂಪರ್‌ ಸ್ಟಾರ್ಸ್‌ ತಂಡ ಸೇರಿದರು.

ದಕ್ಷಿಣ ಕೊರಿಯಾದ ಡಬಲ್ಸ್‌ ವಿಭಾಗದ ಆಟಗಾರ ಕೊ ಸಂಗ್‌ ಹ್ಯೂನ್‌ ಮತ್ತು ಹಾಂಕ್‌ಕಾಂಗ್‌ನ ಸಿಂಗಲ್ಸ್‌ ವಿಭಾಗದ ಆಟಗಾರ ಲೀ ಚೆವುಕ್‌ ಯಿವು ಅವರನ್ನು ಖರೀದಿಸಲೂ ಪ್ರಾಂಚೈಸ್‌ಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಹೀಗಾಗಿ ಅವರ ಬೆಲೆಯೂ ದ್ವಿಗುಣವಾಯಿತು. ಸಂಗ್‌ ಹ್ಯೂನ್‌ ಅವರನ್ನು ₹ 55 ಲಕ್ಷಕ್ಕೆ ಅವಧ್‌ ವಾರಿಯರ್ಸ್‌ ಮತ್ತು ಲೀ ಚೆವುಕ್‌ ಅವರನ್ನು ₹ 50 ಲಕ್ಷಕ್ಕೆ ನಾರ್ತ್‌ ಈಸ್ಟರ್ನ್‌ ವಾರಿಯರ್ಸ್‌ ತಂಡಗಳು ಸೆಳೆದುಕೊಂಡವು.

ಭಾರತದ ಪ್ರಮುಖ ಸಿಂಗಲ್ಸ್‌ ಆಟಗಾರ ಪರುಪಳ್ಳಿ ಕಶ್ಯಪ್‌ ₹43 ಲಕ್ಷಕ್ಕೆ ಮುಂಬೈ ರಾಕೆಟ್ಸ್‌ ತಂಡ ಸೇರಿದರು.

ಹಿಂದಿನ ಎರಡು ತಿಂಗಳಲ್ಲಿ ನಾಲ್ಕು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದು ಗಮನ ಸೆಳೆದಿದ್ದ ಲಕ್ಷ್ಯ ಸೇನ್‌ ಅವರನ್ನು ಚೆನ್ನೈ ಸೂಪರ್‌ಸ್ಟಾರ್ಸ್‌ ತಂಡ ₹ 36 ಲಕ್ಷ ನೀಡಿ ಖರೀದಿಸಿತು.

ಗೋಪಿಚಂದ್‌ ಮಗಳು ಚೆನ್ನೈ ತಂಡದ ಪಾಲು

ಭಾರತ ಬ್ಯಾಡ್ಮಿಂಟನ್‌ ತಂಡದ ಮುಖ್ಯ ಕೋಚ್‌ ಪುಲ್ಲೇಲಾ ಗೋಪಿಚಂದ್‌ ಅವರ ಮಗಳು ಗಾಯತ್ರಿ ಗೋಪಿಚಂದ್‌ ಕೂಡ ಈ ಬಾರಿಯ ಹರಾಜು ಕಣದಲ್ಲಿದ್ದರು.ಗಾಯತ್ರಿ ಅವರನ್ನು ಚೆನ್ನೈ ಸೂಪರ್‌ ಸ್ಟಾರ್ಸ್‌ ತಂಡವು ₹ 2 ಲಕ್ಷ ನೀಡಿ ತನ್ನತ್ತ ಸೆಳೆದುಕೊಂಡಿತು.

ಅಸ್ಸಾಂ ರಾಜ್ಯದ ಯುವ ಆಟಗಾರ್ತಿ ಅಸ್ಮಿತಾ ಚಾಲಿಹಾ ಅವರು ನಾರ್ತ್‌ ಈಸ್ಟರ್ನ್‌ ವಾರಿಯರ್ಸ್‌ ತಂಡದ ಪಾಲಾದರು. ಅವರಿಗೆ ₹ 3 ಲಕ್ಷ ಲಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.