ADVERTISEMENT

PKL: ಮೇ 31ರಿಂದ ಆಟಗಾರರ ಹರಾಜು ಪ್ರಕ್ರಿಯೆ

​ಪ್ರಜಾವಾಣಿ ವಾರ್ತೆ
Published 16 ಮೇ 2025, 16:20 IST
Last Updated 16 ಮೇ 2025, 16:20 IST
.
.   

ಮುಂಬೈ: ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) 12ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಮೇ 31 ಮತ್ತು ಜೂನ್ 1ರಂದು ಮುಂಬೈನಲ್ಲಿ ನಡೆಯಲಿದೆ.

2014ರಲ್ಲಿ ಪಿಕೆಎಲ್‌ ಆರಂಭವಾಗಿದ್ದು, ಕಳೆದ 11 ವರ್ಷಗಳಲ್ಲಿ ಎಂಟು ಬೇರೆ ಬೇರೆ ತಂಡಗಳು ಪ್ರಶಸ್ತಿಯನ್ನು ಗೆದ್ದುಕೊಂಡಿವೆ. ಪಟ್ನಾ ಪೈರೇಟ್ಸ್‌ ತಂಡವು ಮೂರು ಬಾರಿ ಚಾಂಪಿಯನ್‌ ಆಗಿದ್ದರೆ, ಜೈಪುರ ಪಿಂಕ್‌ ಪ್ಯಾಂಥರ್ಸ್‌ ಎರಡು ಬಾರಿ ಕಿರೀಟ ಮುಡಿಗೇರಿಸಿಕೊಂಡಿದೆ. ಬೆಂಗಳೂರು ಬುಲ್ಸ್‌ ಸೇರಿದಂತೆ ಇತರ ಆರು ತಂಡಗಳು ತಲಾ ಒಂದು ಬಾರಿ ಪ್ರಶಸ್ತಿ ಗೆದ್ದಿವೆ.

ಕಳೆದ ಡಿಸೆಂಬರ್‌ನಲ್ಲಿ ನಡೆದ 11ನೇ ಆವೃತ್ತಿಯ ಫೈನಲ್‌ನಲ್ಲಿ ಪಟ್ನಾ ಪೈರೇಟ್ಸ್ ತಂಡವನ್ನು ಮಣಿಸಿ ಹರಿಯಾಣ ಸ್ಟೀಲರ್ಸ್ ತಂಡವು ಮೊದಲ ಬಾರಿ ಕಿರೀಟವನ್ನು ಮುಡಿಗೇರಿಸಿಕೊಂಡಿತ್ತು.

ADVERTISEMENT

ಇದೀಗ ಮತ್ತೊಂದು ಆವೃತ್ತಿಗೆ ಸಿದ್ಧತೆ ನಡೆದಿದ್ದು, ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ತಮ್ಮತ್ತ ಸೆಳೆಯಲು ಲೀಗ್‌ನಲ್ಲಿರುವ 12 ಫ್ರ್ಯಾಂಚೈಸಿಗಳು ಪೈಪೋಟಿ ನಡೆಸಲಿವೆ.

‘ಆಟಗಾರರ ಹರಾಜು ಪ್ರಕ್ರಿಯೆಯು ಮುಂಬರುವ ಋತುವಿಗೆ ಬಲಿಷ್ಠ ತಂಡವನ್ನು ಕಟ್ಟಲು ಫ್ರ್ಯಾಂಚೈಸಿಗಳಿಗೆ ಉತ್ತಮ ವೇದಿಕೆಯಾಗಿದೆ. ತಮ್ಮ ಕಾರ್ಯತಂತ್ರ ಮತ್ತು ಮಹತ್ವಾಕಾಂಕ್ಷೆಯನ್ನು ಪ್ರದರ್ಶಿಸಲು ತಂಡಗಳಿಗೆ ಅವಕಾಶ ಸಿಗಲಿದೆ’ ಎಂದು ಪಿಕೆಎಲ್‌ ಆಯೋಜಕರಾದ ಮಶಾಲ್‌ ಸ್ಪೋರ್ಟ್ಸ್ ಬಿಸಿನೆಸ್‌ ಹೆಡ್‌ ಅನುಪಮ್ ಗೋಸ್ವಾಮಿ ಹೇಳಿದ್ದಾರೆ.

ಹರಾಜು ಪ್ರಕ್ರಿಯೆಯ ನೇರಪ್ರಸಾರಕ್ಕಾಗಿ ವೆಬ್‌ಸೈಟ್‌:www.prokabaddi.com ಸಂಪರ್ಕಿಸಬಹುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.