ಕೊಚ್ಚಿ: ಮಧ್ಯಪ್ರದೇಶದ ದೇವ್ ಕುಮಾರ್ ಮೀನಾ ಅವರು ಈ ವರ್ಷ ಪೋಲ್‌ವಾಲ್ಟ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದರು. ಫೆಡರೇಷನ್ ಕಪ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಚಿನ್ನ ಗೆಲ್ಲುವ ಹಾದಿಯಲ್ಲಿ ಅವರು ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಸುಧಾರಿಸಿದರು. ಆದರೆ ಏಷ್ಯನ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯಲು ಈ ಸಾಧನೆ ಸಾಲಲಿಲ್ಲ.
19 ವರ್ಷ ವಯಸ್ಸಿನ ಮೀನಾ 5.35 ಮೀಟರ್ ಜಿಗಿದು ಸುಲಭವಾಗಿ ಮೊದಲಿಗರಾದರು. ಈ ವರ್ಷದ ಫೆಬ್ರುವರಿಯಲ್ಲಿ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಗಳಲ್ಲಿ ಅವರು ಈ ಹಿಂದಿನ ರಾಷ್ಟ್ರೀಯ ದಾಖಲೆ (5.32 ಮೀ.) ಸ್ಥಾಪಿಸಿದ್ದರು.
ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ 5.51 ಮೀ.ಗಳ ಅರ್ಹತಾ ಮಟ್ಟ ನಿಗದಿಪಡಿಸಲಾಗಿತ್ತು. ಈ ಚಾಂಪಿಯನ್‌ಷಿಪ್ ದಕ್ಷಿಣ ಕೊರಿಯಾದ ಗುಮಿಯಲ್ಲಿ ಮೇ 27 ರಿಂದ 31ರವರೆಗೆ ನಡೆಯಲಿದೆ.
ಪೋಲ್‌ವಾಲ್ಟ್‌ನಲ್ಲಿ ಅಂತರರಾಷ್ಟ್ರೀಯ ಅಥ್ಲೀಟುಗಳ ಮತ್ತು ಭಾರತದ ಅಥ್ಲೀಟುಗಳ ಪ್ರದರ್ಶನ ಮಟ್ಟದ ನಡುವೆ ದೊಡ್ಡ ಅಂತರವಿದೆ. ಫಿಲಿಪೀನ್ಸ್‌ನ ಅರ್ನೆಸ್ಟ್ ಜಾನ್ ಒಬೀನಾ 2023ರಲ್ಲಿ 6 ಮೀ. ಜಿಗಿದು ಏಷ್ಯನ್ ದಾಖಲೆ ಬರೆದಿದ್ದಾರೆ. ವಿಶ್ವ ದಾಖಲೆ ಹೊಂದಿರುವ ಸ್ವೀಡನ್‌ನ ಸೂಪರ್‌ಸ್ಟಾರ್ ಅರ್ಮಾಂಡ್ ಡುಪ್ಲಾಂಡಿಸ್ 6.27 ಮೀ. ಎತ್ತರಕ್ಕೆ ಜಿಗಿದಿದ್ದಾರೆ.
ಬೆಳ್ಳಿ ಗೆದ್ದ ತಮಿಳುನಾಡಿನ ಎಂ.ಗೌತಮ್ (5.15 ಮೀ.) ಮತ್ತು ಕಂಚಿನ ಪದಕ ಗೆದ್ದ ಜಿ. ರೀಗನ್ (5.10 ಮೀ.) ಅವರಿಂದ ದೇವ್ ಅವರಿಗೆ ಪೈಪೋಟಿ ಎದುರಿಸಲಿಲ್ಲ. ಮಾಜಿ ರಾಷ್ಟ್ರೀಯ ದಾಖಲೆ ವೀರ, ತಮಿಳುನಾಡಿನ ಎಸ್.ಶಿವ 5.05 ಮೀ. ಎತ್ತರಕ್ಕೆ ಜಿಗಿದು ನಾಲ್ಕನೇ ಸ್ಥಾನ ಪಡೆದರು.
ಮಹಿಳೆಯರ 400 ಮೀ. ಸ್ಪರ್ಧೆಯಲ್ಲಿ ತೀವ್ರ ಪೈಪೋಟಿ ಕಂಡುಬಂತು. ಉತ್ತರ ಪ್ರದೇಶದ ರೂಪಲ್ ಚೌಧರಿ ಪೂರ್ಣ ಸಾಮರ್ಥ್ಯ ಬಳಸಿ 52.55 ಸೆ.ಗಳೊಡನೆ ಮೊದಲಿಗರಾದರು. ಏಷ್ಯನ್ ಗೇಮ್ಸ್ ಪದಕ ವಿಜೇತೆ, ತಮಿಳುನಾಡಿನ ವಿದ್ಯಾ ರಾಮರಾಜ್ (52.81 ಸೆ.) ಮೊದಲ 300 ಮೀ.ವರೆಗೆ ಮುನ್ನಡೆಯಲ್ಲಿದ್ದರೂ ಕೊನೆಯ ಹಂತದಲ್ಲಿ ಹಿಂದೆ ಬಿದ್ದರು.
‘ಮೊದಲ 300 ಮೀ. ಓಟದಲ್ಲಿ ಅತಿವೇಗದಲ್ಲಿದ್ದುದು ನನಗೆ ದುಬಾರಿಯಾಯಿತು’ ಎಂದು ವಿದ್ಯಾ ಪ್ರತಿಕ್ರಿಯಿಸಿದರು.
ಏಷ್ಯನ್ ಅರ್ಹತಾ ಮಟ್ಟ 53.80 ಮೀ. ಇದ್ದು ಆರು ಮಂದಿ ಓಟಗಾರ್ತಿಯರು ಈ ಅವಧಿಯೊಳಗೆ ಓಟ ಕ್ರಮಿಸಿದ್ದು ವಿಶೇಷ. ಕೇರಳದ ಸ್ನೇಹಾ ಕೆ. (53 ಸೆ.) ಮೂರನೇ ಸ್ಥಾನ ಗಳಿಸಿದರು.
ಏಷ್ಯನ್ ಗೇಮ್ಸ್ ಪದಕ ವಿಜೇತೆ ಜ್ಯೋತಿ ಯರ್ರಾಜಿ ಮಹಿಳೆಯರ 100 ಮೀ. ಹರ್ಡಲ್ಸ್ ಓಟವನ್ನು 13.23 ಸೆ.ಗಳಲ್ಲಿ ಕ್ರಮಿಸಿ ನಿರೀಕ್ಷೆಯಂತೆ ಚಿನ್ನ ಗೆದ್ದರು ಮತ್ತು ಆ ಹಾದಿಯಲ್ಲಿ ಏಷ್ಯನ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆದರು. ಏಷ್ಯನ್ ಕೂಟಕ್ಕೆ 13.26 ಸೆ.ಗಳ ಅರ್ಹತಾ ಮಟ್ಟ ನಿಗದಿಪಡಿಸಲಾಗಿತ್ತು.
‘ಮೂರು ವಾರಗಳ ಹಿಂದೆ ಮೊಣಕಾಲಿನ ಸ್ನಾಯುರಜ್ಜು ನೋವು ಅನುಭವಿಸಿದ್ದೆ. ಹೀಗಾಗಿ 13 ಸೆ.ಗಳ ಒಳಗೆ ಓಡುವ ಕನಸು ಈಡೇರಲಿಲ್ಲ. ಆದರೆ ಏಷ್ಯನ್ ಕೂಟಕ್ಕೆ ಅರ್ಹತೆ ಪಡೆಯಲು ಇದೊಂದೇ ನನಗೆ ಕೊನೆಯ ಅವಕಾಶವಾಗಿತ್ತು’ ಎಂದು ಜ್ಯೋತಿ ಪ್ರತಿಕ್ರಿಯಿಸಿದರು. ರಾಷ್ಟ್ರೀಯ ದಾಖಲೆ (12.78 ಸೆ., 2023ರಲ್ಲಿ) ಅವರ ಹೆಸರಿನಲ್ಲೇ ಇದೆ.
ಪುರುಷರ 110 ಮೀ ಹರ್ಡಲ್ಸ್‌ನಲ್ಲಿ ಮಹಾರಾಷ್ಟ್ರದ ತೇಜಸ್ ಶಿರ್ಸೆ (13.65 ಸೆ.) ಅವರು ಚಿನ್ನ ಗೆದ್ದರು. ರಾಷ್ಟ್ರೀಯ (13.42 ಸೆ.) ಅವರ ಹೆಸರಿನಲ್ಲೇ ಇದೆ.
ಲಾಂಗ್‌ಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಜೆಸ್ವಿನ್ ಆಲ್ಡ್ರಿನ್ ಅವರಿಗೆ ಏಷ್ಯನ್ ಕೂಟ ಕೈತಪ್ಪುವ ಸಾಧ್ಯತೆ ಬಲವಾಗಿದೆ. ತಮಿಳುನಾಡಿನ ಪಿ. ಡೇವಿಡ್ 7.94 ಮೀ. ದೂರ ಜಿಗಿದು, ಜೆಸ್ವಿನ್ (ರಿಲಯನ್ಸ್) ಅವರನ್ನು (7.83) ಎರಡನೇ ಸ್ಥಾನಕ್ಕೆ ತಳ್ಳಿದರು. ಏಷ್ಯನ್ ಕೂಟದ ಅರ್ಹತಾ ಮಟ್ಟ 8.07 ಮೀ. ಆಗಿದೆ.
ಹೈಜಂಪ್‌ನಲ್ಲಿ ಮಹಾರಾಷ್ಟ್ರದ ಸರ್ವೇಶರ್್ ಅನಿಲ್ ಕುಶಾಗ್ರೆ (2.26 ಮೀ.) ಚಿನ್ನ ಗೆದ್ದು ಏಷ್ಯನ್ ಚಾಂಪಿಯನ್‌ಷಿಪ್ಸ್‌ಗೆ ಅರ್ಹತೆ ಪಡೆದರು. ಅರ್ಹತಾಮಟ್ಟವನ್ನು 2.23 ಮೀ.ಗೆ ನಿಗದಿಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.