ADVERTISEMENT

‘ಅಮ್ಮ’ ಎಂದರೆ ಬಲಾಢ್ಯ ಮಹಿಳೆ..

ಬುದ್ಧಿಮಾಂದ್ಯ ಮಕ್ಕಳಿಗಾಗಿ ‘ಪವರ್‌ಲಿಫ್ಟರ್’ ಆದ ದೀಪಾ ಯಶೋಗಾಥೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 15:42 IST
Last Updated 21 ಅಕ್ಟೋಬರ್ 2025, 15:42 IST
ಅಂತರರಾಷ್ಟ್ರೀಯ ಮಾಸ್ಟರ್ ಪವರ್ ಲಿಫ್ಟರ್ ದೀಪಾ‌ ಅವರು ತಮ್ಮ ಮಕ್ಕಳು ಹಾಗೂ ಪತಿ ಅಜಯ್ ಅವರೊಂದಿಗೆ   –ಪ್ರಜಾವಾಣಿ ಚಿತ್ರ
ಅಂತರರಾಷ್ಟ್ರೀಯ ಮಾಸ್ಟರ್ ಪವರ್ ಲಿಫ್ಟರ್ ದೀಪಾ‌ ಅವರು ತಮ್ಮ ಮಕ್ಕಳು ಹಾಗೂ ಪತಿ ಅಜಯ್ ಅವರೊಂದಿಗೆ   –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಜೀವನವೇ ಭಾರ...’ ಎಂದು ಕೊರಗುವವರನ್ನು ಬಡಿದೆಬ್ಬಿಸುವ ಪ್ರೇರಣಾದಾಯಿ ತಾಯಿಯೊಬ್ಬರ ಕತೆ ಇದು. ತಮ್ಮ ಮುಂದಿದ್ದ ಕಡುಕಠಿಣ ಸಮಸ್ಯೆಗಳನ್ನೇ ಸಾಧನೆಯ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿಕೊಂಡು ಅಂತರರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟರ್‌ ಆಗಿ ಬೆಳೆದ ದೀಪಾ ಅಜಯ್ ಅವರೇ ಆ ತಾಯಿ. 

ದೀಪಾ ಅವರು ಜೀವನದಲ್ಲಿ ಕ್ರೀಡಾಪಟುವಾಗುವ ಬಗ್ಗೆ ಎಂದಿಗೂ ಯೋಚಿಸಿರಲಿಲ್ಲ. ಆದರೆ ತಮ್ಮ ಇಬ್ಬರು ಬುದ್ಧಿಮಾಂದ್ಯ ಗಂಡುಮಕ್ಕಳ ಪೋಷಣೆಗಾಗಿ ಆರಂಭಿಸಿದ ಕಸರತ್ತು ಅವರನ್ನು ಪವರ್‌ಲಿಫ್ಟರ್‌ ಆಗಿ ರೂಪಿಸಿದೆ. ಒಂದು ವಾರದ ಹಿಂದಷ್ಟೇ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ 69 ಕೆ.ಜಿಯೊಳಗಿನವರ ವಿಭಾಗದಲ್ಲಿ  ದೀಪಾ ನಾಲ್ಕನೇ ಸ್ಥಾನ ಗಳಿಸಿ ಬಂದಿದ್ದಾರೆ. ಅದರಲ್ಲಿ ಸ್ಕ್ವಾಟ್ಸ್‌ ವಿಭಾಗದಲ್ಲಿ 162.5 ಕೆ.ಜಿ. ಭಾರ ಎತ್ತಿದ ಅವರು ಏಷ್ಯನ್ ದಾಖಲೆ ಬರೆದರು. ಬೆಳ್ಳಿ ಪದಕ ಜಯಿಸಿದರು. ಬೆಂಚ್‌ಪ್ರೆಸ್‌ (87.5 ಕೆ.ಜಿ) ಮತ್ತು ಡೆಡ್‌ಲಿಫ್ಟ್‌ (182.5 ಕೆ.ಜಿ) ವಿಭಾಗಗಳಲ್ಲಿಯೂ ತಮ್ಮ ಭುಜಬಲ ಪರಾಕ್ರಮ ಮೆರೆದರು. ಒಟ್ಟು 432.5 ಕೆ.ಜಿ ತೂಕ ಎತ್ತಿ ಗಮನ ಸೆಳೆದರು. 

ದೀಪಾ ಅವರಿಗೆ ಈಗ 45 ವರ್ಷ. ಅವರ ಇಬ್ಬರೂ ಮಕ್ಕಳಾದ ಆದಿತ್ಯ (21 ವರ್ಷ) ಮತ್ತು ಆಶಿಶ್ (14 ವರ್ಷ) ಬುದ್ಧಿಮಾಂದ್ಯರು. ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದ ದೀಪಾ ಅವರು ನೌಕರಿ ಬಿಟ್ಟು ಮಕ್ಕಳ ಆರೈಕೆಗೆ ಪೂರ್ಣವಾಗಿ ಸಮರ್ಪಿಸಿಕೊಂಡರು. ಮಕ್ಕಳು ಬೆಳೆಯುತ್ತ ಹೋದಂತೆ ದೇಹತೂಕ ಹೆಚ್ಚಾಗುವುದು ಸಹಜ. ಇಬ್ಬರನ್ನೂ ವಿಶೇಷ ಮಕ್ಕಳ ಶಾಲೆಗೆ ಕರೆದೊಯ್ಯಲು, ವಿವಿಧ ಆಟ, ಚಟುವಟಿಕೆಗಳಲ್ಲಿ ತೊಡಗಿಸಲು ಎತ್ತಿಕೊಂಡೇ ಓಡಾಡಬೇಕಾದ ಪರಿಸ್ಥಿತಿ ದೀಪಾ ಅವರಿಗೆ ಇತ್ತು. 

ADVERTISEMENT

‘ಮಕ್ಕಳು ಬೆಳೆದಂತೆ ತೂಕ ಏರುವುದು ಸಹಜ. ಆದರೆ ವಿಶೇಷ ಮಕ್ಕಳಿಗೆ ದೈನಂದಿನ ಅಭ್ಯಾಸಗಳನ್ನು ಹೇಳಿಕೊಡಲು ಎತ್ತುಕೊಂಡು ಓಡಾಡುವುದು ಅನಿವಾರ್ಯ. ಆದರೆ ನಮಗೆ ವಯಸ್ಸಾದಂತೆ ದೈಹಿಕ ಶಕ್ತಿ ಕ್ಷೀಣಿಸುತ್ತದೆ. ಆದ್ದರಿಂದ ಮಕ್ಕಳನ್ನು ಹೇಗೆ ನಿಭಾಯಿಸುವುದು ಎಂಬ ಯೋಚನೆ ಬಂತು. ನಮ್ಮ ಅಪಾರ್ಟ್‌ಮೆಂಟ್‌ನಲ್ಲಿದ್ದ ಜಿಮ್ನಾಷಿಯಂನಲ್ಲಿ ಭಾರ ಎತ್ತುವ ಕಸರತ್ತು ಆರಂಭಿಸಿದೆ. ಆ ಹವ್ಯಾಸವೇ ಬೆಳೆಯುತ್ತ ಪವರ್‌ಲಿಫ್ಟಿಂಗ್‌ನತ್ತ ವಾಲಿದೆ. ಕಳೆದ ಎರಡು ವರ್ಷಗಳಲ್ಲಿ ಪವರ್‌ಲಿಫ್ಟಿಂಗ್ ಅಭ್ಯಾಸವನ್ನೂ ಮಾಡಿದೆ. ಕೆಲವು ಸ್ಪರ್ಧೆಗಳಲ್ಲಿ ಪ್ರಶಸ್ತಿ ಜಯಿಸಿದೆ’ ಎಂದು ದೀಪಾ ಹೆಮ್ಮೆಯಿಂದ ಹೇಳುತ್ತಾರೆ. 

2023ರಲ್ಲಿ ಮೊದಲ ಸಲ ಅವರು ಸ್ಪರ್ಧಾ ಕಣಕ್ಕಿಳಿದರು. ಬೆಂಗಳೂರು ಜಿಲ್ಲಾಮಟ್ಟದಲ್ಲಿ ಅವರು ಸ್ಪರ್ಧಿಸಿದರು. ಅಲ್ಲಿಂದ ಇದುವರೆಗೆ  ರಾಷ್ಟ್ರಮಟ್ಟದಲ್ಲಿ 14 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ರಾಷ್ಟ್ರಮಟ್ಟದಲ್ಲಿ 16 ಮತ್ತು ಮೂರು ಏಷ್ಯನ್‌ ದಾಖಲೆಗಳನ್ನು ನಿರ್ಮಿಸಿದ್ದಾರೆ. ಸುಮಾರು ಎರಡು ತಿಂಗಳುಗಳ ಹಿಂದೆ ಜಪಾನಿನ ಹಿಮೆಜಿಯಲ್ಲಿ ನಡೆದಿದ್ದ ಏಷ್ಯಾ ಆಫ್ರಿಕಾ ಪೆಸಿಫಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ಸಾಮರ್ಥ್ಯ ಮೆರೆದಿದ್ದರು. ಅಲ್ಲಿ 22 ದೇಶಗಳ ಸ್ಪರ್ಧಾಳುಗಳ ಪೈಪೋಟಿಯ ನಡುವೆ ಒಂದು ಚಿನ್ನ, ಮೂರು ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ತಮ್ಮ ಕೊರಳಿಗೇರಿಸಿಕೊಂಡಿದ್ದರು. ಅಲ್ಲಿ ರನ್ನರ್ಸ್ ಅಪ್ ಆಗಿದ್ದ ಅವರು ‘ಬಲಾಢ್ಯ ಮಹಿಳೆ’ ಎಂಬ ಗೌರವ ಗಳಿಸಿದ್ದರು. ಆಗಸ್ಟ್‌ನಲ್ಲಿ ನಡೆದಿದ್ದ  ಮಾಸ್ಟರ್ ನ್ಯಾಷನಲ್ಸ್‌ನಲ್ಲಿ ಅವರು ‘ಸ್ಟ್ರಾಂಗ್ ವುಮನ್‘ ಪ್ರಶಸ್ತಿ ಗೆದ್ದರು.  

ಅಲ್ಪ ಅವಧಿಯಲ್ಲಿಯೇ ಬಹಳಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿರುವ ದೀಪಾ ಅವರು ಮುಂಬರುವ ಕೆಲವು ತಿಂಗಳು ಅಭ್ಯಾಸಕ್ಕಷ್ಟೇ ಒತ್ತು ನೀಡಲಿದ್ದಾರಂತೆ. ಬಹುಶಃ ಆಗಸ್ಟ್‌ನಲ್ಲಿ ಸ್ಪರ್ಧೆಗೆ ತೆರಳುವ ಸಾಧ್ಯತೆ ಇದೆ. ಆದರೆ ಮಕ್ಕಳಿಗಾಗಿ ತಮ್ಮ ದೇಹವನ್ನು ಹುರಿಗೊಳಿಸಿಕೊಳ್ಳುವ ಅವರ ಕಾಯಕ ನಿತ್ಯ ನಿರಂತರವಾಗಿರಲಿದೆ. 

ಒಂದೇ ಒಂದು ದಿನವೂ ಅಭ್ಯಾಸವನ್ನು ತಪ್ಪಿಸಲು ಯಾವುದೇ ನೆಪವನ್ನು ದೀಪಾ ಹೇಳಿಲ್ಲ. ಮಕ್ಕಳಿಗಾಗಿ ತಾವು ಶಕ್ತಿಶಾಲಿಯಾಗಬೇಕು. ದೈಹಿಕವಾಗಿ ಬಲಾಢ್ಯರಾಗಬೇಕು ಎಂಬ ಏಕೈಕ ಗುರಿಯೇ ಅವರನ್ನು ಈ ಮಟ್ಟಕ್ಕೆ ಬೆಳೆಸಿದೆ. ನಾನು ಕೌಶಲಗಳನ್ನು ಹೇಳಿಕೊಟ್ಟಿರುವೆ. ಆದರೆ ಛಲ ಬಲ ಎಲ್ಲವೂ ಅವರದ್ದೇ. ಅವರಿಗೆ ತಾಲೀಮು ನೀಡುವ ಅವಕಾಶ ನನಗೆ ಸಿಕ್ಕಿದ್ದು ಭಾಗ್ಯವೇ ಸರಿ.
–ಕೌಶಿಕ್ ತರಬೇತುದಾರ

ದೇಹತೂಕ ಹೆಚ್ಚಳ ತಂದ ಆತಂಕ

ದೀಪಾ ಅಜಯ್ ಅವರು ಕೇಪ್‌ಟೌನ್‌ನಲ್ಲಿ ತಮ್ಮ ದೇಹ ತೂಕ ಹೆಚ್ಚಳದಿಂದಾಗಿ ಸ್ಪರ್ಧೆಯಿಂದ ಅನರ್ಹಗೊಳ್ಳುವ ಆತಂಕ ಎದುರಿಸಿದ್ದರು. ‘ಅಲ್ಲಿ ನಾನು ದೇಹತೂಕ ಹೆಚ್ಚಳದ ಸವಾಲನ್ನೂ ಎದುರಿಸಬೇಕಾಯಿತು. ಸ್ಪರ್ಧೆಗೂ ಕೆಲವು ಗಂಟೆಗಳ ಮುಂಚಿನ ಪರೀಕ್ಷೆಯಲ್ಲಿ ನಿಗದಿತ ತೂಕಕ್ಕಿಂತ (69 ಕೆಜಿ) 100 ಗ್ರಾಮ್ ಹೆಚ್ಚು ತೂಗಿದ್ದೆ. ವ್ಯಕ್ತಿಗಳಿಂದ ಪ್ರಾಯೋಜಕತ್ವ ಪಡೆದುಕೊಂಡು ಹೋಗಿದ್ದೆ. ಅನರ್ಹಗೊಂಡರೆ ಏನು ಗತಿ ಎಂಬ ಆತಂಕ ಕಾಡಿತ್ತು. ಮತ್ತೆ ಹೋಟೆಲ್‌ಗೆ ಮರಳಿ ಸೌನಾ ಬಾತ್ ಮಾಡಿ ಕೆಲವು ಕಸರತ್ತು ಮಾಡಿ ತೂಕವನ್ನು ಇಳಿಕೆ ಮಾಡಿಕೊಂಡು ಮರಳಿದ್ದೆ. ಸ್ಪರ್ಧೆಗೆ ಅರ್ಹಳಾಗಿದ್ದೆ’ ಎಂದು ದೀಪಾ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಮ್ಮ ಸಾಹಸಗಾಥೆಯನ್ನು ವಿವರಿಸಿದರು.  ‘ನನ್ನ ಪತ್ನಿ ಮಕ್ಕಳ ಲಾಲನೆ ಪಾಲನೆಯ ನಡುವೆಯೂ ಸಿಕ್ಕ ಅಲ್ಪ ಸಮಯಾವಕಾಶದಲ್ಲಿ ಈ ಸಾಧನೆ ಮಾಡಿದ್ದಾರೆ. ಇದು ನನಗೂ ಬೆರಗು ಮೂಡಿಸುತ್ತದೆ. ಇದೊಂದು ಅಸಾಧಾರಣ ಸಾಧನೆ. ದಶಕಗಳಿಂದ ಅಭ್ಯಾಸ ಮಾಡಿದ ವೃತ್ತಿಪರರೊಂದಿಗೆ ಸ್ಪರ್ಧಿಸಿ ಸ್ಥಾನ ಪಡೆದು ಬಂದಿದ್ದಾರೆ’ ಎಂದು ದೀಪಾ ಅವರ ಪತಿ ವಿಪ್ರೊ ಉದ್ಯೋಗಿಯಾಗಿರುವ ಅಜಯ್ ಹೆಮ್ಮೆ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.