ADVERTISEMENT

ಸ್ವಿಸ್‌ ಗ್ರ್ಯಾಂಡ್‌ ಚೆಸ್‌: ಪ್ರಜ್ಞಾನಂದ ಜೊತೆ ‘ಡ್ರಾ’ ಮಾಡಿದ ಆರ್ಯನ್

ಅರ್ಜುನ್‌ಗೆ ಜಯ, ವಿದಿತ್‌ಗೆ ಹಿನ್ನಡೆ,

ಪಿಟಿಐ
Published 26 ಅಕ್ಟೋಬರ್ 2023, 15:25 IST
Last Updated 26 ಅಕ್ಟೋಬರ್ 2023, 15:25 IST
ಪ್ರಜ್ಞಾನಂದ
ಪ್ರಜ್ಞಾನಂದ   

ಐಲ್‌ ಆಫ್‌ ಮ್ಯಾನ್: ವಿಶ್ವಕಪ್ ಬೆಳ್ಳಿ ವಿಜೇತ ಆರ್‌.ಪ್ರಜ್ಞಾನಂದ ಅವರು ಗುರುವಾರ ಆರಂಭವಾದ ಫಿಡೆ ಗ್ರ್ಯಾಂಡ್‌ ಸ್ವಿಸ್‌ ಟೂರ್ನಿಯ ಮೊದಲ ಸುತ್ತಿನಲ್ಲಿ ಸ್ವದೇಶದ ಗ್ರ್ಯಾಂಡ್‌ಮಾಸ್ಟರ್‌ ಆರ್ಯನ್ ಚೋಪ್ರಾ ಅವರ ಜೊತೆ ‘ಡ್ರಾ’ಕ್ಕೆ ಒಪ್ಪಿಕೊಳ್ಳಬೇಕಾಯಿತು. ಪ್ರತಿಭಾನ್ವಿತ ಆಟಗಾರ ರೌನಕ್ ಸಾಧ್ವಾನಿ, ನಾಲ್ಕನೇ ಶ್ರೇಯಾಂಕದ ಅನೀಶ್ ಗಿರಿ ಅವರ ಜೊತೆ ಪಾಯಿಂಟ್‌ ಹಂಚಿಕೊಂಡಿದ್ದು ಕೂಡ ದಿನದ ಅನಿರೀಕ್ಷಿತಗಳಲ್ಲಿ ಒಂದೆನಿಸಿತು.

ಡಿ.ಗುಕೇಶ್ ಕೂಡ ಮೊದಲ ಪಂದ್ಯದಲ್ಲಿ ಅಜರ್‌ಬೈಜಾನ್‌ನ ರವೂಫ್ ಮೆಮೆಡೊವ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದರು. ಅರ್ಜುನ್ ಇರಿಗೇಶಿ, ಅರವಿಂದ ಚಿದಂಬರಮ್ ಮತ್ತು ಎಸ್‌.ಎಲ್‌.ನಾರಾಯಣನ್ ಗೆಲುವಿನೊಡನೆ ಅಭಿಯಾನ ಆರಂಭಿಸಿದರು. ಅವರು ಕ್ರಮವಾಗಿ ಫ್ರೆಡೆರಿಕ್ ಸ್ವೇನ್ (ಜರ್ಮನಿ), ವು ಲಿ (ಐಲ್‌ ಆಫ್‌ ಮ್ಯಾನ್‌) ಮತ್ತು ಶಾನ್ ರೊಡ್ರಿಕ್ ಲಿಮಿಕ್ಸ್‌ (ಕೆನಡಾ) ವಿರುದ್ದ ಜಯಪಡೆದರು.

ಆದರೆ ಭಾರತದ ಇನ್ನೊಬ್ಬ ಪ್ರಮುಖ ಆಟಗಾರ ವಿದಿತ್‌ ಗುಜರಾತಿ, ನೆದರ್ಲೆಂಡ್ಸ್‌ನ ಇರ್ವಿನ್ ಲಾಮಿ ಅವರಿಗೆ ಮಣಿದರು. ಈ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದ ಗುಜರಾತಿ ಕೊನೆಗಳಿಗೆಯಲ್ಲಿ ತಪ್ಪೆಸಗಿ ಹಿಡಿತ ಕಳೆದುಕೊಂಡರು. ‘ರೂಕ್‌’, ‘ನೈಟ್‌’ ಕಳೆದುಕೊಂಡು 65 ನಡೆಗಳಲ್ಲಿ ಸೋಲಬೇಕಾಯಿತು.

ADVERTISEMENT

ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಜ್ಜೆಗುರುತು ಮೂಡಿಸಲು ಯತ್ನಿಸುತ್ತಿರುವ ದೆಹಲಿಯ ಆರ್ಯನ್ ಚೋಪ್ರಾ, ಸ್ಲಾವ್‌ ಡಿಫೆನ್ಸ್‌ ಅನುಸರಿಸಿ ಪ್ರಬಲ ಎದುರಾಳಿ ಪ್ರಜ್ಞಾನಂದ ಅವರಿಂದ ಅರ್ಧಪಾಯಿಂಟ್‌ ಕಸಿದುಕೊಂಡರು. ಪ್ರಜ್ಞಾನಂದ ತಂತ್ರಗಾರಿಕೆಯಿಂದ ಇಬ್ಬರ ಕ್ವೀನ್‌ಗಳು ಬೋರ್ಡ್‌ನಿಂದ ಬೇಗ ಕೆಳಗಿಳಿದವು. ಆರ್ಯನ್ ಅವರ ಕಾಲಾಳು ಸಂರಚನೆ ಕೂಡ ಕೆಲಮಟ್ಟಿಗೆ ಹಾನಿಗೊಂಡಿತು. ಆದರೆ ಅವರು ವೀರೋಚಿತ ಹೋರಾಟ ನೀಡಿದರು. ಕೆಲವು ಪಡೆಗಳನ್ನು ಇಬ್ಬರೂ ಕಳೆದುಕೊಂಡರು. ಅಂತಿಮವಾಗಿ ರಾಜ ಮತ್ತು ವಿರುದ್ಧ ಬಣ್ಣದ ಬಿಷಪ್‌ಗಳು ಉಳಿದ ಕಾರಣ 33ನೇ ನಡೆಯಲ್ಲಿ ಇಬ್ಬರೂ ‘ಕದನ ವಿರಾಮ’ಕ್ಕೆ ಸಹಿಹಾಕಿದರು.

ಗುಕೇಶ್ 23 ನಡೆಗಳ ನಂತರ ಮೆಮೆಡೊವ್ ಜೊತೆ ಡ್ರಾಕ್ಕೆ ಒಪ್ಪಿಕೊಂಡರು. ಅಗ್ರ ಶ್ರೇಯಾಂಕದ ಫ್ಯಾಬಿಯಾನೊ ಕರುವಾನಾ, ಇವಾನ್ ಸರಿಕ್ (ಕ್ರೊವೇಷ್ಯಾ) ಮೇಲೆ ಜಯಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.