ADVERTISEMENT

ಸೂಪರ್‌ಬೆಟ್‌ ಕ್ಲಾಸಿಕ್‌: ಪ್ರಜ್ಞಾನಂದ ಚಾಂಪಿಯನ್

ಬ್ಲಿಟ್ಝ್ ಪ್ಲೇಆಫ್‌ನಲ್ಲಿ ಗೆದ್ದ ಭಾರತದ ಜಿಎಂ

​ಪ್ರಜಾವಾಣಿ ವಾರ್ತೆ
Published 17 ಮೇ 2025, 15:55 IST
Last Updated 17 ಮೇ 2025, 15:55 IST
ಪ್ರಶಸ್ತಿ ಗೆದ್ದ ಪ್ರಜ್ಞಾನಂದ
ಪ್ರಶಸ್ತಿ ಗೆದ್ದ ಪ್ರಜ್ಞಾನಂದ   

ಬುಕಾರೆಸ್ಟ್‌ (ರುಮೇನಿಯಾ): ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್‌.ಪ್ರಜ್ಞಾನಂದ ಅವರು ಗ್ರ್ಯಾಂಡ್‌ ಚೆಸ್‌ ಟೂರ್‌ನ (ಜಿಸಿಟಿ) ಭಾಗವಾಗಿರುವ ಸೂಪರ್‌ಬೆಟ್‌ ಕ್ಲಾಸಿಕ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಶುಕ್ರವಾರ ಅಂತಿಮ ಸುತ್ತಿನ ಪಂದ್ಯಗಳ ನಂತರ ಮೂವರು ಆಟಗಾರರ ನಡುವೆ ಟೈ ಆಗಿದ್ದು, ಬ್ಲಿಟ್ಝ್‌ ಪ್ಲೇ ಆಫ್‌ನಲ್ಲಿ ಭಾರತದ ಆಟಗಾರ ವಿಜೇತನಾದರು.

ಇದು ಪ್ರಜ್ಞಾನಂದ ಅವರು ಜಿಸಿಟಿ ಟೂರ್ನಿಯಲ್ಲಿ ಗೆಲ್ಲು‌ತ್ತಿರುವ ಮೊದಲ ಪ್ರಶಸ್ತಿ. ಪ್ರಶಸ್ತಿಯ ಜೊತೆಗೆ ಬಹುಮಾನ ಮೊತ್ತವಾಗಿ ₹66 ಲಕ್ಷ ಜೇಬಿಗಿಳಿಸಿದರು.

9 ಸುತ್ತುಗಳ ನಂತರ ಪ್ರಜ್ಞಾನಂದ, ಫ್ರಾನ್ಸ್‌ನ ಅಲಿರೇಝಾ ಫಿರೋಝ್‌ಜಾ ಮತ್ತು ಮ್ಯಾಕ್ಸಿಂ ವೇಷಿಯರ್ ಲಗ್ರಾವ್‌ ಅವರು ತಲಾ 5.5 ಪಾಯಿಂಟ್ಸ್ ಕಲೆಹಾಕಿದ್ದರು.

ADVERTISEMENT

ಪ್ರಜ್ಞಾನಂದ ಅವರು ಅಂತಿಮ ಸುತ್ತಿನಲ್ಲಿ ಅಮೆರಿಕದ ಲೆವೊನ್‌ ಅರೋನಿಯನ್ ಜೊತೆ ಡ್ರಾ ಮಾಡಿಕೊಂಡ ಬಳಿಕ ಅಗ್ರಸ್ಥಾನ ಖಚಿತವಾಯಿತು. ಆದರೆ ಲಗ್ರಾವ್ ಮತ್ತು ಅಲಿರೇಝಾ ಕೊನೆಯ ಸುತ್ತಿನಲ್ಲಿ ಕ್ರಮವಾಗಿ ಪೋಲೆಂಡ್‌ನ ಯಾನ್ ಕ್ರಿಸ್ಟೋಫ್ ಡೂಡ (3) ಮತ್ತು ರುಮೇನಿಯಾದ ಡೇಕ್‌ ಡೇನಿಯಲ್ ಬೊಗ್ಡಾನ್ (4) ಅವರನ್ನು ಸೋಲಿಸಿದ್ದರಿಂದ ಅವರೂ ಅಗ್ರಸ್ಥಾನ ಹಂಚಿಕೊಂಡರು.

ನಿಯಮದಂತೆ ಪ್ಲೇಆಫ್‌ ಮೂಲಕ ವಿಜೇತರನ್ನು ನಿರ್ಧರಿಸಲಾಯಿತು. ಅಗ್ರಸ್ಥಾನ ಹಂಚಿಕೊಂಡ ಮೂವರು ಆಟಗಾರರು ನಡುವೆ ಐದು ನಿಮಿಷಗಳ ಬ್ಲಿಟ್ಝ್ ಪಂದ್ಯಗಳನ್ನು ಆಡಿಲಾಯಿತು. ಮೊದಲ ಗೇಮ್‌ನಲ್ಲಿ ಪ್ರಜ್ಞಾನಂದ ಕಪ್ಪು ಕಾಯಿಗಳಲ್ಲಿ ಆಡಿ ಫಿರೋಝ್‌ಜಾ ಜೊತೆ ಡ್ರಾ ಮಾಡಿಕೊಂಡರು. ಫಿರೋಝ್‌ಜಾ ಎರಡನೇ ಪಂದ್ಯದಲ್ಲಿ ವೇಷಿಯರ್‌ ಲಗ್ರಾವ್ ಜೊತೆ ಪಾಯಿಂಟ್‌ ಹಂಚಿಕೊಂಡರು. ಕೊನೆಯ ಪಂದ್ಯದಲ್ಲಿ ಪ್ರಜ್ಞಾನಂದ, ವೇಷಿಯರ್ ಲಗ್ರಾವ್ ಅವರನ್ನು ಸೋಲಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಕಳೆದ ವರ್ಷ ಪ್ರಜ್ಞಾನಂದ ಅವರು ಪ್ಲೇಆಫ್‌ಗಳಲ್ಲಿ ಸೋತು ಕೆಲವು ಪ್ರಶಸ್ತಿಗಳನ್ನು ಕಳೆದುಕೊಂಡಿದ್ದರು. ಕೊನೆಯ ಸುತ್ತಿನಲ್ಲಿ ಬೇಗನೇ ಡ್ರಾ ಮಾಡಿಕೊಂಡಿದ್ದರಿಂದ ಪ್ರಜ್ಞಾನಂದ ಅವರಿಗೆ ಸಾಕಷ್ಟು ವಿಶ್ರಾಂತಿ ದೊರೆಯಿತು. ಲಗ್ರಾವ್ ಮತ್ತು ಅಲಿರೇಝಾ ಪಂದ್ಯಗಳನ್ನು ಗೆಲ್ಲಲು ದೀರ್ಘ ಅವಧಿ ತೆಗೆದುಕೊಂಡಿದ್ದರು.

‘ಕಳೆದ ಬಾರಿ ನಾನು ಉತ್ತಮವಾಗಿ ಆಡಿರಲಿಲ್ಲ. ಇಲ್ಲಿ ಟೈಬ್ರೇಕ್‌ಗೆ ಮೊದಲು ದೊರೆತ ಕೆಲವು ಗಂಟೆಗಳ ವಿಶ್ರಾಂತಿ ನನಗೆ ಸಾಕಷ್ಟು ನೆರವಾಯಿತು’ ಎಂದು ಪ್ರಜ್ಞಾನಂದ ಪ್ರಶಸ್ತಿ ಪ್ರದಾನದ ವೇಳೆ ಪ್ರತಿಕ್ರಿಯಿಸಿದರು.

ವಿಶ್ವ ಚಾಂಪಿಯನ್ ಹಾಗೂ ಭಾರತದ ಇನ್ನೊಬ್ಬ ಆಟಗಾರ ಗುಕೇಶ್‌ (4 ಅಂಕ) ಅವರು ಹತ್ತು ಆಟಗಾರರ ಈ ಟೂರ್ನಿಯಲ್ಲಿ ಎಂಟನೇ ಸ್ಥಾನ ಪಡೆದರು. ಕರುವಾನ (5) ನಾಲ್ಕನೇ ಮತ್ತು ಉಜ್ಬೇಕಿಸ್ತಾನದ ನದಿರ್ಬೆಕ್‌ ಅಬ್ದುಸತ್ತಾರೋವ್ (4.5) ಐದನೇ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.