
ಗುಕೇಶ್
(ಪಿಟಿಐ ಚಿತ್ರ)
ಪ್ರಾಗ್ (ಝೆಕ್ ರಿಪಬ್ಲಿಕ್): ವಿಶ್ವ ಚಾಂಪಿಯನ್ ಡಿ.ಗುಕೇಶ್, ಪ್ರಾಗ್ ಇಂಟರ್‌ನ್ಯಾಷನಲ್ ಚೆಸ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಉಜ್ಬೇಕಿಸ್ತಾನದ ನಾದಿರ್ಬೆಕ್ ಯಾಕುಬೊಯೆವ್ ಜೊತೆ ಡ್ರಾ ಮಾಡಿಕೊಂಡರು. ಅರವಿಂದ ಚಿದಂಬರಮ್ ಹಿನ್ನಡೆಯಿಂದ ಚೇತರಿಸಿ, ಅಮೆರಿಕದ ಹ್ಯಾನ್ಸ್ ಮೋಕ್ ನೀಮನ್ ಅವರನ್ನು ಸೋಲಿಸಿದರು.
ಗುಕೇಶ್ ಅವರಿಗೆ ಇದು ಎರಡನೇ ಡ್ರಾ. ಆದರೆ ಅರವಿಂದ್ ಇನ್ನೊಂದು ಪಂದ್ಯದಲ್ಲಿ ಕಪ್ಪುಕಾಯಿಗಳಲ್ಲಿ ಆಡಿ ಜಯಗಳಿಸಿದರು. ಇಬ್ಬರ ಬಳಿಯೂ ಒಂದೊಂದು ಅಂಕಗಳಿವೆ. ಚೆನ್ನೈನ ಅರವಿಂದ್ ಮೊದಲ ಸುತ್ತಿನಲ್ಲಿ ಉಜ್ಬೇಕ್ ಆಟಗಾರ ನಾದಿರ್ಬೆಕ್ ಅಬ್ದುಸತ್ತಾರೋವ್ ಎದುರು ಸೋಲನುವಿಸಿದ್ದರು.
ದಿನದ ಇನ್ನೊಂದು ನಿರ್ಣಾಯಕ ಫಲಿತಾಂಶ ಕಂಡ ಪಂದ್ಯದಲ್ಲಿ ಸ್ಪೇನ್‌ನ ಡೇವಿಡ್ ಆ್ಯಂಟನ್ ಗಿಜಾರೊ ಅವರು ನೆದರ್ಲೆಂಡ್ಸ್‌ನ ಜೋರ್ಡನ್ ವಾನ್ ಫೊರೀಸ್ಟ್ ಅವರನ್ನು ಸೋಲಿಸಿದರು. ಇರಾನ್‌ನ ಪರ್ಹಾಮ್ ಮಘಸೂಡ್ಲು ಮತ್ತು ಅಬ್ದುಸತ್ತಾರೋವ್ ನಡುವಣ ಪಂದ್ಯ ಡ್ರಾ ಆಯಿತು.
10 ಮಂದಿ ಆಟಗಾರರು ಎಲೀಟ್ ವಿಭಾಗದಲ್ಲಿ, 10 ಮಂದಿ ಆಟಗಾರರು ಚಾಲೆಂಜರ್ ವಿಭಾಗದಲ್ಲಿ ಆಡುತ್ತಿದ್ದಾರೆ. ಚಾಲೆಂಜರ್ ವಿಭಾಗದಲ್ಲಿ ದಿವ್ಯಾ ದೇಶಮುಖ್, ಸ್ಪೇನ್‌ನ ಡೇನಿಯಲ್ ಯುಫಾ ಜೊತೆ ಡ್ರಾ ಮಾಡಿಕೊಂಡರು. ವಿಶ್ವಕಪ್ ವಿಜೇತೆಗೆ ಇದು ಸತತ ಎರಡನೇ ಡ್ರಾ. ಅನುಭವಿ ಸೂರ್ಯಶೇಖರ ಗಂಗೂಲಿ, ಡೆನ್ಮಾರ್ಕ್‌ನ ಯೊನಾಸ್ ಬುಹ್ಲ್ ಬೆಯರೆ ಅವರ ಜೊತೆ ಡ್ರಾ ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.