ADVERTISEMENT

ಪ್ರಜಾವಾಣಿ ಸಾಧಕರು 2023 | ಅನುಷಾ - ಬೆನ್ನುಹುರಿಯ ನೋವು ಮೀರಿದ ಸಾಧನೆ

ಪ್ರಜಾವಾಣಿ ವಿಶೇಷ
Published 1 ಜನವರಿ 2023, 4:13 IST
Last Updated 1 ಜನವರಿ 2023, 4:13 IST
ಒ.ಸಿ. ಅನುಷಾ
ಒ.ಸಿ. ಅನುಷಾ   

'ಪ್ರಜಾವಾಣಿ' ಪಾಲಿಗಿದು ಅಮೃತ ಮಹೋತ್ಸವದ ವರ್ಷ. 75 ವರ್ಷಗಳ ಹಾದಿಯಲ್ಲಿ ಜನಮುಖಿಯಾಗಿರುವ ಪತ್ರಿಕೆ, ನಮ್ಮ ನಡುವಿನ ಪ್ರತಿಭಾವಂತರನ್ನು ಗುರುತಿಸುವ ಕೆಲಸವನ್ನೂ ಲಾಗಾಯ್ತಿನಿಂದ ಮಾಡುತ್ತಾ ಬಂದಿದೆ. 2020ರಿಂದ ಪ್ರತಿವರ್ಷ ಆಯಾ ಇಸವಿಯ ಕೊನೆಯ ಎರಡು ಅಂಕಿಗಳಿಗೆ ಹೊಂದುವಷ್ಟು ಸಂಖ್ಯೆಯ ಸಾಧಕರನ್ನು ಆಯ್ಕೆ ಮಾಡಿ, ಸನ್ಮಾನಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಶಿಕ್ಷಣ, ಸಮಾಜಸೇವೆ, ವಿಜ್ಞಾನ, ಕ್ರೀಡೆ, ಸಾಹಿತ್ಯ–ಕಲೆ–ಮನರಂಜನೆ, ಪರಿಸರ, ಉದ್ಯಮ, ಸಂಶೋಧನೆ, ಆಡಳಿತ, ಕನ್ನಡ ಕೈಂಕರ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮಷ್ಟಕ್ಕೆ ತಾವು ಮುಗುಮ್ಮಾಗಿ ಸೇವೆ ಸಲ್ಲಿಸುತ್ತಿರುವವರನ್ನು 23 ಸಾಧಕರನ್ನು 2023ರ ಹೊಸವರ್ಷಕ್ಕೆ ಸಾಂಕೇತಿಕವಾಗಿ ಮಾಡಲಾಗಿದೆ. ಸಾಧಕರ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದ್ದು, ಅವರ ಹೆಜ್ಜೆಗುರುತುಗಳು ಈ ಅಕ್ಷರಚೌಕಟ್ಟನ್ನೂ ಮೀರಿದ್ದು. ಹೊಸ ವರ್ಷವನ್ನು ಈ ಸಾಧಕರೊಟ್ಟಿಗೆ ಬರಮಾಡಿಕೊಳ್ಳುವುದಕ್ಕೆ ಪತ್ರಿಕಾ ಬಳಗ ಹರ್ಷಿಸುತ್ತದೆ.

****

ಹೆಸರು: ಒ.ಸಿ. ಅನುಷಾ

ADVERTISEMENT

ವೃತ್ತಿ: ದಿ ಅಸೋಸಿಯೇಷನ್‌ ಆಫ್‌ ಪೀಪಲ್‌ ವಿತ್‌ ಡಿಸೆಬಿಲಿಟಿ (ಎಪಿಡಿ) ಸಂಸ್ಥೆಯಲ್ಲಿ ಶಿಕ್ಷಕಿ

ಸಾಧನೆ: ಬೆನ್ನುಹುರಿ ಸಮಸ್ಯೆ ಮೀರಿಯೂ ಶಿಕ್ಷಣ, ಕ್ರೀಡಾಕ್ಷೇತ್ರದಲ್ಲಿ ಛಾಪು

ಆಕೆ ಎಲ್ಲ ಮಕ್ಕಳಂತೆಯೇ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಾ ಪೋಷಕರ ಮುದ್ದಿನ ಮಗಳು.ಆಕೆಗೆ ಎರಡು ವರ್ಷವಿದ್ದಾಗ (1996) ಎದುರಾದ ಘಟನೆಯೊಂದು ಬದುಕಿಗೇ ಆಘಾತ ನೀಡಿತು. ಆದರೆ, ಸ್ಥೈರ್ಯ ಕಳೆದುಕೊಳ್ಳದೆ ಬದುಕು ರೂಪಿಸಿಕೊಂಡಿದ್ದಾರೆ ಒ.ಸಿ.ಅನುಷಾ. ಪ್ಯಾರಾ ಬ್ಯಾಡ್ಮಿಂಟನ್‌, ಬ್ಯಾಸ್ಕೆಟ್‌ಬಾಲ್‌ ಆಟಗಾರ್ತಿಯಾಗಿ ರಾಷ್ಟ್ರೀಯ ಹಾಗೂ ರಾಜ್ಯಮಟ್ಟದಲ್ಲಿ ಮಿಂಚುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯ ಇವರು ಒ.ಎಸ್‌.ಚಿದಾನಂದ– ಆಶಾ ದಂಪತಿ ಪುತ್ರಿ. ಈಗ ಬೆಂಗಳೂರಿನಲ್ಲೇ ಕೆಲಸ.

ಕಟ್ಟಡದ ಮೊದಲ ಅಂತಸ್ತಿನಿಂದ ಬಿದ್ದ ಪರಿಣಾಮ ಅನುಷಾಗೆ ಬೆನ್ನುಹುರಿ ಸಮಸ್ಯೆ ಕಾಣಿಸಿಕೊಂಡಿತ್ತು. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಚೇತರಿಕೆ ಸಾಧ್ಯವಾಗಲಿಲ್ಲ. ಅನುಷಾ ಅವರು ಅದೇ ನೋವಿನ ನಡುವೆಯೂ ಶಿಕ್ಷಣ ಪಡೆದು, ಈಗ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ತೋರುತ್ತಿದ್ದಾರೆ. ಭುವನೇಶ್ವರದಲ್ಲಿ ನಡೆದಿದ್ದ ರಾಷ್ಟ್ರೀಯ ಬ್ಯಾಡ್ಮಿಂಟನ್‌ನಲ್ಲಿ ಕಂಚು ಹಾಗೂ ರಾಜ್ಯಮಟ್ಟದ ಬ್ಯಾಸ್ಕೆಟ್‌ಬಾಲ್‌ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಪಡೆದಿದ್ದಾರೆ. ಮುಂದಿನ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಅನುಷಾ ಸಿದ್ಧತೆಯಲ್ಲಿದ್ದಾರೆ.

‘ಡಿ.ಇಡಿ ಶಿಕ್ಷಣ ಪಡೆಯಲು ಮುಂದಾದ ವೇಳೆ, ಪ್ರಾಯೋಗಿಕ ಕಾರ್ಯ ನಡೆಸಲು ನಿಮ್ಮಿಂದ ಆಗದು. ಶಿಕ್ಷಕರಾಗುವವರು ಸಾಕಷ್ಟು ಓಡಾಟ ನಡೆಸಬೇಕೆಂದು ಡಿ.ಇಡಿ ಪ್ರವೇಶಕ್ಕೆ ಶಿಕ್ಷಣ ಸಂಸ್ಥೆಗಳು ನಿರಾಕರಿಸಿದ್ದವು. ಹೋರಾಟದ ಬಳಿಕ ಸಂಸ್ಥೆಯೊಂದರಲ್ಲಿ ಡಿ.ಇಡಿಗೆ ಪ್ರವೇಶವೂ ಸಿಕ್ಕಿತು. ಈಗ ಬಿಎ, ಬಿ.ಇಡಿ ಶಿಕ್ಷಣ ಸಹ ಪೂರೈಸಿದ್ದೇನೆ. ಪ್ರಸ್ತುತ ಬೆಂಗಳೂರಿನ ದಿ ಅಸೋಸಿಯೇಷನ್‌ ಆಫ್‌ ಪೀಪಲ್‌ ವಿತ್‌ ಡಿಸೆಬಿಲಿಟಿ (ಎಪಿಡಿ) ಸಂಸ್ಥೆಯಲ್ಲಿ ಶಿಕ್ಷಕಿ ಆಗಿ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳುತ್ತಾರೆ ಅನುಷಾ.

‘2017ರಲ್ಲಿ ಎಪಿಡಿ ಸಂಸ್ಥೆಯ ಬಗ್ಗೆ ತಿಳಿಯಿತು. ಅಲ್ಲಿಗೆ ಬಂದ ಮೇಲೆ ನನ್ನ ಬದುಕಿನ ಚಿತ್ರಣ ಬದಲಾಯಿತು’ ಎಂದು ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.