ಪ್ರೊ ಕಬಡ್ಡಿ ಲೀಗ್
ಚೆನ್ನೈ: ಬೆಂಗಾಲ್ ವಾರಿಯರ್ಸ್ ತಂಡ ರೋಮಾಂಚಕ ಪಂದ್ಯದಲ್ಲಿ ಪ್ರಬಲ ದಬಂಗ್ ಡೆಲ್ಲಿ ಕೆಸಿ ತಂಡವನ್ನು 37–36 ರಿಂದ ಸೋಲಿಸಿ ವೀರೋಚಿತ ರೀತಿಯಲ್ಲಿ ಗೆಲುವಿನ ಹಳಿಗೆ ಮರಳಿತು. ಪ್ರೊ ಕಬಡ್ಡಿ ಲೀಗ್‌ನ ಈ ಪಂದ್ಯದಲ್ಲಿ ನಾಯಕ ದೇವಾಂಕ್ ದಲಾಲ್ (12 ಅಂಕ) ಅವರ ‘ಸೂಪರ್ ಟೆನ್’ ಮತ್ತು ಆಶಿಶ್ ಮಲಿಕ್ ಅವರ ಹೈಫೈ ಸಾಧನೆ ಬೆಂಗಾಲ್ ಕೈಹಿಡಿಯಿತು.
ಇದು ಬೆಂಗಾಲ್‌ಗೆ ನಾಲ್ಕನೇ ಗೆಲುವು. ಆಶು ಮಲಿಕ್ ಅವರ ಗೈರು ಡೆಲ್ಲಿ ತಂಡವನ್ನು ಕಾಡಿತು. ಡೆಲ್ಲಿ ತಂಡಕ್ಕೆ 13 ಪಂದ್ಯಗಳಲ್ಲಿ ಇದು ಎರಡನೇ ಸೋಲು. 22 ಅಂಕ ಗಳಿಸಿರುವ ಡೆಲ್ಲಿ ತಂಡ ಅಗ್ರಸ್ಥಾನದಲ್ಲೇ ಇದೆ.
ಪಂದ್ಯ ಹೆಚ್ಚು ಕಮ್ಮಿ ಸಮಸಮನಾಗಿಯೇ ಸಾಗಿತು. ಅನುರಾಗ್ ಕುಮಾರ್ ಅವರ ಸೂಪರ್ ಟ್ಯಾಕಲ್ ಮತ್ತು ಮತ್ತು ಪ್ರತೀಕ್ ಅವರ ಟ್ಯಾಕಲ್‌ನಿಂದ ಎದುರಾಳಿಯನ್ನು ಆಲೌಟ್ ಮಾಡಿದ್ದರಿಂದ ವಿರಾಮದ ವೇಳೆ ಬೆಂಗಾಲ್ ತಂಡ 19–18ರಲ್ಲಿ ಒಂದು ಪಾಯಿಂಟ್ ಮುನ್ನಡೆ ಸಾಧಿಸಿತ್ತು. ನಂತರವೂ ಈ ಅಲ್ಪ ಮುನ್ನಡೆಯನ್ನು ಬೆಂಗಾಲ್ ಕಾಪಾಡಿಕೊಂಡಿತು.
ಜೈಂಟ್ಸ್‌ಗೆ ಜಯ
ತೀವ್ರ ಹೋರಾಟದ ಇನ್ನೊಂದು ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ 41–39 ರಿಂದ ಯುಪಿ ಯೋಧಾಸ್ ತಂಡವನ್ನು ಮಣಿಸಿತು. ಜೈಂಟ್ಸ್ ಪರ ನಾಯಕ ರಾಕೇಶ್ (20 ಅಂಕ) ಮತ್ತು ಯೋಧಾಸ್ ಪರ ಗುಮನ್ ಸಿಂಗ್ (14) ಉತ್ತಮವಾಗಿ ಆಡಿದರು.
ಶುಕ್ರವಾರದ ಪಂದ್ಯಗಳು ಗುಜರಾತ್ ಜೈಂಟ್ಸ್– ದಬಂಗ್ ಡೆಲ್ಲಿ (ರಾತ್ರಿ 8); ಬೆಂಗಾಲ್ ವಾರಿಯರ್ಸ್– ಯು ಮುಂಬಾ (ರಾತ್ರಿ 9)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.