
ಬೆಂಗಳೂರು: ‘ಯುವಕರನ್ನು ಒಳಗೊಂಡ ಬೆಂಗಳೂರು ಬುಲ್ಸ್ ತಂಡವು ಸಮತೋಲನದಿಂದ ಕೂಡಿದೆ. ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶಿಸಿದರೆ ಈ ಬಾರಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರುವುದು ಕಷ್ಟವಲ್ಲ. ಅವರಿಂದ ನೈಜ ಆಟ ಹೊರ ತೆಗೆಯುವುದೇ ನನ್ನ ಮುಂದಿರುವ ಸವಾಲು...’
ಇದು ಬುಲ್ಸ್ ತಂಡದ ಮುಖ್ಯ ಕೋಚ್, ಕನ್ನಡಿಗ ಬಿ.ಸಿ. ರಮೇಶ್ ಅವರು ವಿಶ್ವಾಸದ ಮಾತು. ತಮ್ಮ ಗರಡಿಯಲ್ಲಿ ಪಳಗುತ್ತಿರುವ ಆಟಗಾರರು ಈ ಆವೃತ್ತಿಯಲ್ಲಿ ಸುಧಾರಿತ ಪ್ರದರ್ಶನ ನೀಡುತ್ತಿರುವುದು ‘ಚಾಂಪಿಯನ್’ ಕೋಚ್ ಎಂದೇ ಹೆಸರಾಗಿರುವ ರಮೇಶ್ ಅವರ ಆತ್ಮವಿಶ್ವಾಸ ಇಮ್ಮಡಿಗೊಳಿಸಿದೆ.
ಬುಲ್ಸ್ ತಂಡವು ಲೀಗ್ ಹಂತದಲ್ಲಿ ಈತನಕ ಒಟ್ಟು 8 ಪಂದ್ಯಗಳನ್ನು ಆಡಿದೆ. ಮೊದಲ ಮೂರು ಪಂದ್ಯಗಳನ್ನು ಸೋತ ಬಳಿಕ ಸತತ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿದೆ. ತಲಾ ನಾಲ್ಕು ಗೆಲುವು ಮತ್ತು ಸೋಲಿನೊಂದಿಗೆ ಎಂಟು ಅಂಕ ಗಳಿಸಿ ಲೀಗ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಜೈಪುರದಲ್ಲಿ ನಡೆಯುತ್ತಿರುವ ‘ಸಾಂಪ್ರದಾಯಿಕ ಎದುರಾಳಿಗಳ ಸಪ್ತಾಹ’ದ (ರೈವಲರಿ ವೀಕ್) ಹಣಾಹಣಿಯ ಮಧ್ಯೆ ‘ಪ್ರಜಾವಾಣಿ’ ಜೊತೆ ರಮೇಶ್ ಮಾತನಾಡಿದರು.
‘ಮೊದಲ ಮೂರು ಪಂದ್ಯಗಳ ಸೋಲು ಅನಿರೀಕ್ಷಿತ. ಅದನ್ನು ನನಗೆ ಇನ್ನೂ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ತಂಡದ ಕೆಲವು ಆಟಗಾರರ ಮೇಲೆ ಅತಿಯಾದ ವಿಶ್ವಾಸ ಇಟ್ಟಿದ್ದರಿಂದ ಈ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಬೇಕಾಯಿತು. ಅದರ ಬೆನ್ನಲ್ಲೇ ಪ್ರಧಾನ ರೇಡರ್ ಆಶು ಮಲಿಕ್ ಗಾಯಾಳಾದರು. ಇದರಿಂದ ಒತ್ತಡಕ್ಕೆ ಒಳಗಾದೆ. ಆದರೆ, ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಆ ಸೋಲುಗಳ ಹಿಂದೆ ‘ಕಾಣದ ಕೈಗಳು’ ಕೆಲಸ ಮಾಡಿರುವ ಅನುಮಾನವಿದೆ’ ಎಂದು ಹೇಳಿದರು.
‘ನಮ್ಮದು ಹೊಸ ಆಟಗಾರರ ತಂಡ. ಅನುಭವಿಗಳು ಯಾರೂ ತಂಡದಲ್ಲಿಲ್ಲ. ಸೋಲುಗಳ ಬಳಿಕ ತಂಡದ ಸಂಯೋಜನೆ ಬದಲಾಯಿಸಿದ್ದು ಫಲ ನೀಡಿತು. ಯುವ ಆಟಗಾರರು ಅಗತ್ಯಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತಿದ್ದಾರೆ. ತಂಡವು ಪಂದ್ಯಗಳನ್ನು ಗೆಲ್ಲುವ ಜೊತೆಗೆ ನಮ್ಮ ಆಟಗಾರರು ದೇಶದ ಜನರ ಹೃದಯ ಗೆಲ್ಲುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು.
‘ಕನ್ನಡಿಗನಾಗಿ ಬುಲ್ಸ್ ತಂಡಕ್ಕೆ ಮಾರ್ಗದರ್ಶನ ನೀಡುತ್ತಿರುವುದು ನಿಜಕ್ಕೂ ಖುಷಿ ತಂದಿದೆ. ಕೆಲ ವರ್ಷಗಳ ಬಳಿಕ ಮತ್ತೆ ಅವಕಾಶ ಸಿಕ್ಕಿದ್ದರಿಂದ ತಂಡವನ್ನು ಮತ್ತೆ ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯುವ ದೊಡ್ಡ ಹೊಣೆ ನನ್ನ ಮೇಲಿದೆ. ‘ಈ ಬಾರಿ ಕಪ್ ನಮ್ದೆ’ ಎಂಬ ಕೂಗು ಅಭಿಮಾನಿಗಳಿಂದ ಕೇಳಿಬರುತ್ತಿದ್ದು, ತಂಡಕ್ಕೆ ಎರಡನೇ ಬಾರಿ ಕಪ್ ಗೆಲ್ಲುವ ಪ್ರಯತ್ನ ನಮ್ಮದು’ ಎಂದು ಹೇಳಿದರು.
‘ಕಬಡ್ಡಿ ಈ ಮಣ್ಣಿನ ಕ್ರೀಡೆ. ಪ್ರೊ ಕಬಡ್ಡಿ ಲೀಗ್ ಬಂದ ಬಳಿಕ ದೇಶದಲ್ಲಿ ಈ ಕ್ರೀಡೆ ಮತ್ತಷ್ಟು ಜನಪ್ರಿಯವಾಗುತ್ತಿದೆ. ಹೊಸ ಪ್ರತಿಭೆಗಳ ಉದಯವಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಕಬಡ್ಡಿಗೆ ಇನ್ನಷ್ಟು ಪೂರಕ ಸೌಲಭ್ಯ, ವಾತಾವರಣ ನಿರ್ಮಾಣವಾಗಬೇಕು ಎಂಬುದು ಹಂಬಲ. ಈ ನಿಟ್ಟಿನಲ್ಲಿ ಹಲವು ಯೋಚನೆಗಳು ನನ್ನ ತಲೆಯಲ್ಲಿದೆ. ಅವಕಾಶ ಸಿಕ್ಕಾಗ ಕಾರ್ಯಗತಗೊಳಿಸುತ್ತೇನೆ’ ಎಂದು ಹೇಳಿದರು.
‘ದೊಡ್ಡ ಕನಸು ನನಸಾಗಿದೆ’
‘ಕನ್ನಡಿಗರಾಗಿ ಬುಲ್ಸ್ ತಂಡಕ್ಕೆ ಆಡುವುದು ನಮ್ಮ ದೊಡ್ಡ ಕನಸಾಗಿತ್ತು. ರಮೇಶ್ ಅವರು ಕೋಚ್ ಆಗಿರುವಾಗಲೇ ಅದು ಈಡೇರಿರುವುದು ಮರೆಯಲಾಗದ ಅನುಭವ’ ಎಂದು ತಂಡದ ರೇಡರ್ ಗಣೇಶ್ ಬಿ. ಹಣಮಂತಗೋಳ ಮತ್ತು ಡಿಫೆಂಡರ್ ಸತ್ಯಪ್ಪ ಮಟ್ಟಿ ಹೇಳಿದರು.
‘ನಮ್ಮದು ಕೃಷಿ ಕುಟುಂಬ. ಶಾಲೆಯಲ್ಲಿ ಸ್ನೇಹಿತರೊಂದಿಗೆ ಕಬಡ್ಡಿ ಆಡುತ್ತಿದ್ದೆವು. ಆದರೆ ಮುಂದೊಂದು ದಿನ ಪ್ರೊ ಕಬಡ್ಡಿ ಲೀಗ್ ಆಡುತ್ತೇವೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಲೀಗ್‌ನಲ್ಲಿ ಮೊದಲ ಬಾರಿ ಆಡುತ್ತಿದ್ದೇನೆ. ಕಠಿಣ ಪರಿಶ್ರಮದಿಂದ ಅದು ಸಾಧ್ಯವಾಗಿದೆ. ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಗುರಿಯನ್ನು ಹೊಂದಿದ್ದೇನೆ’ ಎಂದು ವಿಜಯಪುರದ ಗಣೇಶ್ ಪ್ರತಿಕ್ರಿಯಿಸಿದರು.
‘ಕಳೆದ ಆವೃತ್ತಿಯಲ್ಲಿ ಮೊದಲ ಬಾರಿ ಪುಣೇರಿ ಪಲ್ಟನ್ ತಂಡಕ್ಕೆ ಆಡಿದ್ದೆ. ರಮೇಶ್ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಬುಲ್ಸ್ ತಂಡಕ್ಕೆ ಕರೆತಂದಿದ್ದಾರೆ. ಅವರಂಥ ದಿಗ್ಗಜರ ಮಾರ್ಗದರ್ಶನ ಸಿಕ್ಕಿರುವುದು ನನ್ನ ಅದೃಷ್ಟ. ಟ್ಯಾಕಲ್‌ನಲ್ಲಿ ಹೊಸ ಹೊಸ ತಂತ್ರಗಾರಿಕೆಯನ್ನು ಕಲಿಯುತ್ತಿದ್ದೇನೆ. ಇನ್ನಷ್ಟು ಸಾಧನೆಯ ಗುರಿ ನನ್ನದು’ ಎಂದು ಬಾಗಲಕೋಟೆಯ ಸತ್ಯಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.