ADVERTISEMENT

ಪ್ರೊ ಕಬಡ್ಡಿ | 27 ಪಾಯಿಂಟ್ ಕೊಳ್ಳೆ ಹೊಡೆದ ಪವನ್; ಬೆಂಗಳೂರು ಬುಲ್ಸ್ ಜಯಭೇರಿ

ಯುಪಿ ಯೋಧಾ – ಹರಿಯಾಣ ಪಂದ್ಯ ಟೈ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 4:21 IST
Last Updated 13 ಜನವರಿ 2022, 4:21 IST
ಬೆಂಗಳೂರು ಬುಲ್ಸ್‌ ತಂಡದ ನಾಯಕ ಪವನ್ ಶೆರಾವತ್ (ಕೆಂಪು ಪೋಷಾಕು)
ಬೆಂಗಳೂರು ಬುಲ್ಸ್‌ ತಂಡದ ನಾಯಕ ಪವನ್ ಶೆರಾವತ್ (ಕೆಂಪು ಪೋಷಾಕು)   

ಬೆಂಗಳೂರು: ಇಪ್ಪತ್ತೇಳು ಪಾಯಿಂಟ್‌ಗಳನ್ನು ಕೊಳ್ಳೆ ಹೊಡೆದ ನಾಯಕ ಪವನ್ ಶೆರಾವತ್ ಆಟದಿಂದ ಬೆಂಗಳೂರು ಬುಲ್ಸ್‌ ತಂಡವು ಜಯಭೇರಿ ಬಾರಿಸಿತು.

ವೈಟ್‌ಫೀಲ್ಡ್‌ನಲ್ಲಿರುವ ಗ್ರ್ಯಾಂಡ್ ಶೆರಟಾನ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬುಲ್ಸ್ ತಂಡವು 61–22ರಿಂದ ದಬಂಗ್ ಡೆಲ್ಲಿ ತಂಡವನ್ನು ಹಣಿಯಿತು.

ಹೋದ ಪಂದ್ಯದಲ್ಲಿ ಸೋತಿದ್ದ ಬುಲ್ಸ್ ತಂಡವು ಈ ಪಂದ್ಯದಲ್ಲಿ ಎದುರಾಳಿ ಡೆಲ್ಲಿ ತಂಡಕ್ಕೆ ಯಾವುದೇ ಹಂತದಲ್ಲಿಯೂ ಅವಕಾಶವನ್ನೇ ನೀಡಲಿಲ್ಲ. ಅದರಲ್ಲೂ ಪವನ್ ಅವರ ದಾಳಿಯೇ ವಿಜೃಂಭಿಸಿತು. ಅವರಿಗೆ ರೇಡರ್ ಭರತ್ (6 ಅಂಕ) ಮತ್ತು ಚಂದ್ರನ್ ಅವರು ಉತ್ತಮ ಜೊತೆ ನೀಡಿದರು.

ADVERTISEMENT

ಮೊದಲಾರ್ಧದಲ್ಲಿಯೇ ಬೆಂಗಳೂರು ತಂಡವು 27–11ರಿಂದ ಮುನ್ನಡೆ ಸಾಧಿಸಿತು. ನಂತರದ ಅವಧಿಯಲ್ಲಿಯಂತೂ ಪವನ್ ಪಡೆಯ ಆಟಕ್ಕೆ ಡೆಲ್ಲಿ ಕಂಗಾಲಾಯಿತು.

ರೋಚಕ ಟೈ: ಹರಿಯಾಣ ಸ್ಟೀಲರ್ಸ್ ಮತ್ತು ಯುಪಿ ಯೋಧಾ ನಡುವಣ ಪಂದ್ಯವು ರೋಚಕ ಟೈನಲ್ಲಿ ಅಂತ್ಯ ಕಂಡಿತು.ನಾಯಕನಿಗೆ ತಕ್ಕ ಆಟವಾಡಿದ ಹರಿಯಾಣ ತಂಡದ ವಿಕಾಸ್‌ ಖಂಡೋಲ 17 ಅಂಕ ಮತ್ತು ಯೋಧಾ ತಂಡದ ಸುರೀಂದರ್ ಗಿಲ್ 14 ಅಂಕ ಗಳಿಸುವುದರೊಂದಿಗೆ ಪಂದ್ಯವನ್ನು ಸಮಬಲದತ್ತ ಕೊಂಡೊಯ್ದರು.

ಅರ್ಧವಿರಾಮದ ಹೊತ್ತಿಗೆ ಯೋಧಾ ತಂಡವು 14–13ರಿಂದ ಮುನ್ನಡೆ ಸಾಧಿಸಿತ್ತು. ವಿರಾಮದ ನಂತರ ವಿಕಾಸ್ ಚುರುಕಾದ ದಾಳಿ ನಡೆಸಿ ಹೋರಾಟಕ್ಕೆ ಬಲ ತುಂಬಿದರು. ಅಲ್ಲದೇ ಸೋಲದಂತೆ ನೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.