ADVERTISEMENT

ಪ್ರೊ ಕಬಡ್ಡಿ ಲೀಗ್‌ ಫೈನಲ್: ಪ್ರಶಸ್ತಿಗಾಗಿ ಪುಣೇರಿ – ಡೆಲ್ಲಿ ಸೆಣಸಾಟ

ಪಿಟಿಐ
Published 30 ಅಕ್ಟೋಬರ್ 2025, 23:30 IST
Last Updated 30 ಅಕ್ಟೋಬರ್ 2025, 23:30 IST
<div class="paragraphs"><p>ಟ್ರೋಫಿಯೊಂದಿಗೆ ದಬಂಗ್‌ ಡೆಲ್ಲಿ ತಂಡದ ನಾಯಕ ಅಶು ಮಲಿಕ್‌ ಮತ್ತು ಪುಣೇರಿ ಪಲ್ಟನ್‌ ತಂಡದ ನಾಯಕ ಅಸ್ಲಾಂ ಇನಾಮ್‌ದಾರ್</p></div>

ಟ್ರೋಫಿಯೊಂದಿಗೆ ದಬಂಗ್‌ ಡೆಲ್ಲಿ ತಂಡದ ನಾಯಕ ಅಶು ಮಲಿಕ್‌ ಮತ್ತು ಪುಣೇರಿ ಪಲ್ಟನ್‌ ತಂಡದ ನಾಯಕ ಅಸ್ಲಾಂ ಇನಾಮ್‌ದಾರ್

   

–ಎಕ್ಸ್‌ ಚಿತ್ರ

ನವದೆಹಲಿ: ಹಾಲಿ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ದಬಂಗ್ ಡೆಲ್ಲಿ ಮತ್ತು ಪುಣೇರಿ ಪಲ್ಟನ್‌ ತಂಡಗಳು ಶುಕ್ರವಾರ ಇಲ್ಲಿನ ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರೊ ಕಬಡ್ಡಿ ಲೀಗ್‌ನ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ.

ADVERTISEMENT

ಲೀಗ್‌ ಹಂತದಲ್ಲಿ ಮೊದಲೆರಡು ಸ್ಥಾನ ಪಡೆದ ಪುಣೇರಿ ಮತ್ತು ಡೆಲ್ಲಿ ತಂಡಗಳು ಪ್ಲೇಆಫ್‌ ಹಂತದಲ್ಲೂ ಉತ್ತಮ ಪ್ರದರ್ಶನ ನೀಡಿ ನಿರೀಕ್ಷೆಯಂತೆ ಪ್ರಶಸ್ತಿ ಸುತ್ತು ಪ್ರವೇಶಿಸಿವೆ. ಕಳೆದ 11 ಆವೃತ್ತಿಗಳಲ್ಲಿ ತಲಾ ಒಂದೊಂದು ಬಾರಿ ಚಾಂಪಿಯನ್‌ ಆಗಿರುವ ಉಭಯ ತಂಡಗಳು, ಇದೀಗ ಎರಡನೇ ಬಾರಿ ಕಿರೀಟ ಮುಡಿಗೇರಿಸಿಕೊಳ್ಳುವ ಛಲದಲ್ಲಿವೆ.

2023ರ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿರುವ ಪುಣೇರಿ ಮತ್ತು 2021–22ರ ಚಾಂಪಿಯನ್‌ ಡೆಲ್ಲಿ ತಂಡಗಳು ಹಾಲಿ ಆವೃತ್ತಿಯಲ್ಲಿ ಮೂರು ಬಾರಿ ಮುಖಾಮುಖಿಯಾಗಿವೆ. ವಿಶೇಷವೆಂದರೆ ಮೂರೂ ಬಾರಿಯು ನಿಗದಿತ ಅವಧಿಯಲ್ಲಿ ಪಂದ್ಯಗಳು ಟೈ ಆಗಿದ್ದವು. ಟೈಬ್ರೇಕರ್‌ ಮತ್ತು ಗೋಲ್ಡನ್‌ ರೇಡ್‌ನಲ್ಲಿ ಫಲಿತಾಂಶ ನಿರ್ಧಾರವಾಗಿತ್ತು. ಇದೀಗ ನಾಲ್ಕನೇ ಬಾರಿ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ.

ಮೊದಲ ಕ್ವಾಲಿಫೈಯರ್‌ನಲ್ಲಿ ಈ ತಂಡಗಳು ಮುಖಾಮುಖಿಯಾಗಿದ್ದ ವೇಳೆ ನಿಗದಿತ ಅವಧಿಯಲ್ಲಿ 34–34ರಿಂದ ಸಮಬಲವಾಗಿತ್ತು. ಟೈಬ್ರೇಕರ್‌ನಲ್ಲಿ ದಬಂಗ್‌ ತಂಡವು 6–4ರಿಂದ ಗೆದ್ದು ಫೈನಲ್‌ ಟಿಕೆಟ್‌ ಪಡೆದಿತ್ತು. ಎರಡನೇ ಕ್ವಾಲಿಫೈಯರ್‌ನಲ್ಲಿ ಪುಣೇರಿ 50–45ರಿಂದ ತೆಲುಗು ಟೈಟನ್ಸ್‌ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿತ್ತು.

ನಾಯಕಿ ಆಶು ಮಲಿಕ್ ನೇತೃತ್ವದ ದಬಂಗ್‌ ತಂಡವು ಉತ್ತಮ ಲಯದಲ್ಲಿದೆ. ಹಾಲಿ ಆವೃತ್ತಿಯಲ್ಲಿ 19 ಪಂದ್ಯಗಳಲ್ಲಿ 15 ಜಯ ಸಾಧಿಸಿದೆ. ರೇಡರ್‌ ಮಲಿಕ್‌ ಅವರು 13 ಪಂದ್ಯಗಳಿಂದ 150 ಅಂಕ ಗಳಿಸಿ, ತಂಡದ ಪರ ಗರಿಷ್ಠ ಸ್ಕೋರ್‌ ಎನಿಸಿದ್ದಾರೆ.

ಅಸ್ಲಾಂ ಇನಾಮ್‌ದಾರ್ ಸಾರಥ್ಯದ ಪಲ್ಟನ್ ತಂಡವು ಕಳೆದ ನಾಲ್ಕು ಋತುಗಳಲ್ಲಿ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಈ ಬಾರಿ 20 ಪಂದ್ಯಗಳಲ್ಲಿ 14 ಅನ್ನು ಗೆದ್ದಿದೆ. ಆದಿತ್ಯ ತುಷಾರ್ ಶಿಂಧೆ 17 ಪಂದ್ಯಗಳಲ್ಲಿ 149 ಅಂಕ ಗಳಿಸಿ, ತಂಡದ ಯಶಸ್ವಿ ರೇಡರ್‌ ಎನಿಸಿದ್ದಾರೆ.

ಪಂದ್ಯ ಆರಂಭ: ರಾತ್ರಿ 8

ನೇರಪ‍್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.