ಪುಣೆ: ಅಂತಿಮ ಕ್ಷಣದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದ ಹರಿಯಾಣ ಸ್ಟೀಲರ್ಸ್ ತಂಡ ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಯು.ಪಿ. ಯೋಧಾಸ್ ತಂಡದ ಸವಾಲನ್ನು 28–25ರಲ್ಲಿ ಮೆಟ್ಟಿನಿಂತು ಫೈನಲ್ ಪ್ರವೇಶಿಸಿತು.
ಬಾಲೇವಾಡಿ ಕ್ರೀಡಾ ಸಂಕೀರ್ಣದಲ್ಲಿ ಶುಕ್ರವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸ್ಟೀಲರ್ಸ್ ತಂಡ ವಿರಾಮದ ವೇಳೆ ಕೇವಲ ಒಂದು ಪಾಯಿಂಟ್‌ನಿಂದ (12–11ರಲ್ಲಿ) ಮುಂದಿತ್ತು. ಹರಿಯಾಣ ಸ್ಟೀಲರ್ಸ್ ಇದೇ 29ರಂದು (ಭಾನುವಾರ) ನಡೆಯಲಿರುವ ಫೈನಲ್‌ನಲ್ಲಿ ಮೂರು ಬಾರಿಯ ಚಾಂಪಿಯನ್ ಪಟ್ನಾ ಪೈರೇಟ್ಸ್ ತಂಡವನ್ನು ಎದುರಿಸಲಿದೆ.
ರೋಚಕ ಹೋರಾಟ ಕಂಡ ಎರಡನೇ ಸೆಮಿಫೈನಲ್‌ನಲ್ಲಿ ಪೈರೇಟ್ಸ್, 32–28 ರಿಂದ ದಬಾಂಗ್ ಡೆಲ್ಲಿ ತಂಡವನ್ನು ಸೋಲಿಸಿತು. ವಿರಾಮದ ವೇಳೆ ಪೈರೇಟ್ಸ್ 17–10 ಪಾಯಿಂಟ್‌ಗಳಿಂದ ಮುಂದಿತ್ತು.
ಲೀಗ್ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದ ಹರಿಯಾಣ ನೇರವಾಗಿ ಸೆಮಿಫೈನಲ್ ಪ್ರವೇಶಿಸಿತ್ತು. ಯೋಧಾಸ್ ತಂಡ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಸೋಲಿಸಿ ನಾಲ್ಕರ ಘಟ್ಟ ತಲುಪಿತ್ತು.
ಸ್ಟೀಲರ್ಸ್ ತಂಡದ ಪರ ಶಿವಂ ಪತಾರೆ ಮತ್ತು ವಿನಯ್ ಕ್ರಮವಾಗಿ 7 ಮತ್ತು 6 ಅಂಕ ಗಳಿಸಿದರು. ರಾಹುಲ್ 5 ಅಂಕ ಗಳಿಸಿದರು. ಯೋಧಾಸ್ ಪರ ಗಗನ್ ಗೌಡ ಮತ್ತು ಭವಾನಿ ರಜಪೂತ್ ಕ್ರಮವಾಗಿ 10 ಮತ್ತು 5 ಅಂಕ ಗಳಿಸಿ ತಂಡದ ಹೋರಾಟಕ್ಕೆ ಸಾಕ್ಷಿಯಾದರು.
ಪಂದ್ಯದಲ್ಲಿ ಯೋಧಾಸ್ ಒಮ್ಮೆ (ದ್ವಿತೀಯಾರ್ಧದ ಎರಡನೇ ನಿಮಿಷ) ಆಲೌಟ್ ಆಯಿತು. ಮುಕ್ತಾಯಕ್ಕೆ ಐದು ನಿಮಿಷಗಳು ಬಾಕಿ ಇರುವಾಗ ಹರಿಯಾಣ ಸ್ಟೀಲರ್ಸ್ 23– 21ರಲ್ಲಿ ಅಂತರ
ಕಾಯ್ದುಕೊಳ್ಳುವ ಮೂಲಕ ಅಲ್ಪ ಮುನ್ನಡೆ ಉಳಿಸಿಕೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.