ADVERTISEMENT

PKL ಸ್ವರೂಪದಲ್ಲಿ ಹಲವು ಬದಲಾವಣೆ: ಪ್ಲೇ ಆಫ್ ಹಂತಕ್ಕೆ ಎಂಟು ತಂಡಗಳಿಗೆ ಅವಕಾಶ

ಪಿಟಿಐ
Published 22 ಆಗಸ್ಟ್ 2025, 15:52 IST
Last Updated 22 ಆಗಸ್ಟ್ 2025, 15:52 IST
.
.   

ಮುಂಬೈ : ಇದೇ 29ರಂದು ಆರಂಭವಾಗುವ 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ (ಪಿಕೆಎಲ್‌) ಸ್ವರೂಪದಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಸ್ಪರ್ಧೆಯನ್ನು ಇನ್ನಷ್ಟು ರೋಚಕಗೊಳಿಸುವ ಉದ್ದೇಶದಿಂದ ಲೀಗ್‌ ಹಂತ ಮತ್ತು ಪ್ಲೇ ಆಫ್‌ ಹಂತದಲ್ಲಿ ಹೊಸತನ ಮೂಡಿಸಲಾಗಿದೆ. 

ಹಾಲಿ ಆವೃತ್ತಿಯ ಲೀಗ್ ಹಂತದ ಪಂದ್ಯಗಳು ವಿಶಾಖಪಟ್ಟಣ, ಜೈಪುರ, ಚೆನ್ನೈ ಮತ್ತು ದೆಹಲಿಯಲ್ಲಿ ನಿಗದಿಯಾಗಿವೆ. ಪ್ರತಿ ತಂಡಗಳಿಗೆ 18 ಪಂದ್ಯಗಳಂತೆ ಒಟ್ಟು 108 ಪಂದ್ಯಗಳು ನಡೆಯಲಿವೆ. 

ಲೀಗ್ ಹಂತದ ಪಂದ್ಯಗಳಲ್ಲೂ ‘ಗೋಲ್ಡನ್ ರೈಡ್’ ಸ್ವರೂಪ ಒಳಗೊಂಡಂತೆ ‘ಸಮಗ್ರ ಟೈ ಬ್ರೇಕರ್’ ನಿಯಮವನ್ನು ಪರಿಚಯಿಸಲಾಗಿದೆ. ಈ ನಿಯಮ ಹಿಂದೆ ಪ್ಲೇ ಆಫ್‌ ಪಂದ್ಯಗಳಿಗೆ ಮಾತ್ರ ಸೀಮಿತವಾಗಿತ್ತು. ಅದನ್ನು ಇಡೀ ಟೂರ್ನಿಗೆ ವಿಸ್ತರಿಸಲಾಗಿದೆ. 

ADVERTISEMENT

ಪಂದ್ಯ ಟೈ ಆದ ಸಂದರ್ಭದಲ್ಲಿ ಸಮಗ್ರ ಟೈ ಬ್ರೇಕರ್ ನಿಯಮದಂತೆ ಐದು ರೈಡ್‌ಗಳ ‘ಶೂಟೌಟ್‌’ ನಡೆಯುತ್ತಿದೆ. ಈ ವೇಳೆ ಎರಡೂ ತಂಡಗಳು 7 ಆಟಗಾರರನ್ನು ಆಡಿಸುತ್ತವೆ. ಇಲ್ಲಿ ಬಾಲ್ಕ್ ಲೈನ್ ಅನ್ನು ಬಾಲ್ಕ್ ಲೈನ್ ಮತ್ತು ಬೋನಸ್ ಲೈನ್ ಎಂದು ಪರಿಗಣಿಸಲಾಗುತ್ತದೆ. ಎರಡೂ ತಂಡಕ್ಕೆ ಭಿನ್ನ ಆಟಗಾರರೊಂದಿಗೆ ಐದು ರೈಡ್‌ ಅವಕಾಶ ನೀಡಿ, ಹೆಚ್ಚು ಅಂಕ ಗಳಿಸಿದ ತಂಡ ವಿಜಯಿಯಾಗುತ್ತದೆ.

ಇಲ್ಲೂ ಅಂಕ ಟೈ ಆದಲ್ಲಿ ಗೋಲ್ಡನ್ ರೈಡ್ ನಿಯಮ ಅನ್ವಯಿಸುತ್ತದೆ. ಅದರಂತೆ ಟಾಸ್‌ ಮೂಲಕ ನಿರ್ಣಾಯಕ ರೈಡಿಂಗ್‌ ನಿರ್ಧರಿಸಲಾಗುತ್ತದೆ. ಅದರ ನಂತರವೂ ತಂಡಗಳ ಅಂಕ ಸಮಬಲವಾಗಿದ್ದರೆ ವಿಜೇತರನ್ನು ಟಾಸ್‌ ಮೂಲಕ ತೀರ್ಮಾನಿಸಲಾಗುತ್ತದೆ. ಅಲ್ಲದೆ, ಪಿಕೆಎಲ್ ಅಂಕ ವ್ಯವಸ್ಥೆಯನ್ನೂ ಸರಳೀಕರಿಸಲಾಗಿದೆ. ತಂಡವೊಂದರ ಗೆಲುವಿಗೆ 2 ಅಂಕ ಸಿಗಲಿದೆ.  

ಪ್ಲೇ ಆಫ್ ಸ್ವರೂಪ ಪರಿಷ್ಕರಣೆಯೊಂದಿಗೆ ಪ್ಲೇ ಇನ್‌ ಮಾದರಿಯನ್ನೂ ಪರಿಚಯಿಸಲಾಗಿದೆ. ಲೀಗ್‌ ಹಂತದಲ್ಲಿ 5ರಿಂದ 8ನೇ ಸ್ಥಾನ ಪಡೆಯುವ ತಂಡಗಳು ಪ್ಲೇ ಇನ್ ಪಂದ್ಯಗಳಲ್ಲಿ ಆಡಲಿವೆ. ಹೀಗಾಗಿ, ಲೀಗ್ ಹಂತದಿಂದ ಅಗ್ರ 8 ತಂಡಗಳಿಗೆ ಪ್ಲೇ ಆಫ್‌ಗೆ ಅರ್ಹತೆ ಪಡೆಯುವ ಅವಕಾಶವಿದೆ. ಪ್ಲೇಆಫ್ ಹಂತದಲ್ಲಿ ಮೂರು ಎಲಿಮಿನೇಟರ್‌, ಎರಡು ಕ್ವಾಲಿಫೈಯರ್‌, ಒಂದು ಮಿನಿ ಕ್ವಾಲಿಫೈಯರ್‌ ಮತ್ತು ಫೈನಲ್‌ ಪಂದ್ಯಗಳು ನಡೆಯಲಿವೆ.‌‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.