ADVERTISEMENT

PKL Eliminator | ಪಟ್ನಾ ಪರೇಟ್ಸ್‌ಗೆ ಮಣಿದ ಬುಲ್ಸ್‌

ಪ್ರೊ ಕಬಡ್ಡಿ: ಹಾಲಿ ಆವೃತ್ತಿಯಲ್ಲಿ ಅಭಿಯಾನ ಮುಗಿಸಿದ ಬೆಂಗಳೂರು ತಂಡ

ಪಿಟಿಐ
Published 27 ಅಕ್ಟೋಬರ್ 2025, 16:18 IST
Last Updated 27 ಅಕ್ಟೋಬರ್ 2025, 16:18 IST
ಬೆಂಗಳೂರು ಬುಲ್ಸ್‌ ತಂಡದ ರೇಡರ್‌ನನ್ನು ಪಟ್ನಾ ಪೈರೇಟ್ಸ್‌ ಆಟಗಾರರು ಟ್ಯಾಕಲ್‌ ಮಾಡಲು ಯತ್ನಿಸಿದರು –ಎಕ್ಸ್‌ ಚಿತ್ರ
ಬೆಂಗಳೂರು ಬುಲ್ಸ್‌ ತಂಡದ ರೇಡರ್‌ನನ್ನು ಪಟ್ನಾ ಪೈರೇಟ್ಸ್‌ ಆಟಗಾರರು ಟ್ಯಾಕಲ್‌ ಮಾಡಲು ಯತ್ನಿಸಿದರು –ಎಕ್ಸ್‌ ಚಿತ್ರ   

ನವದೆಹಲಿ: ಅಯಾನ್‌ ಲೋಚಬ್‌ ಅವರ ಅಮೋಘ ರೇಡಿಂಗ್‌ ಬಲದಿಂದ ಪಟ್ನಾ ಪೈರೇಟ್ಸ್‌ ತಂಡವು ಸೋಮವಾರ ಪ್ರೊ ಕಬಡ್ಡಿ ಲೀಗ್‌ನ ಎರಡನೇ ಎಲಿಮಿನೇಟರ್‌ ಪಂದ್ಯದಲ್ಲಿ 46–37 ಅಂಕಗಳಿಂದ ಬೆಂಗಳೂರು ಬುಲ್ಸ್‌ ತಂಡವನ್ನು ಮಣಿಸಿತು.

ಈ ಸೋಲಿನೊಂದಿಗೆ ಕನ್ನಡಿಗ ಬಿ.ಸಿ.ರಮೇಶ್‌ ಮಾರ್ಗದರ್ಶನದ ಬುಲ್ಸ್‌ ತಂಡವು ಹಾಲಿ ಆವೃತ್ತಿಯ ಅಭಿಯಾನ ಮುಗಿಸಿತು. ಲೀಗ್‌ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದ ಬೆಂಗಳೂರು ತಂಡವು ಪ್ಲೇ ಆಫ್‌ ಹಂತದಲ್ಲಿ ಸತತ ಎರಡು ಪಂದ್ಯಗಳನ್ನು ಸೋತು ಕೈಸುಟ್ಟುಕೊಂಡಿತು. ಎರಡನೇ ಬಾರಿ ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದ್ದ ತಂಡವು ನಿರಾಸೆ ಅನುಭವಿಸಿತು. 2018ರಲ್ಲಿ ಬೆಂಗಳೂರು ತಂಡವು ಚಾಂಪಿಯನ್‌ ಆಗಿತ್ತು. 

ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಪಟ್ನಾ ತಂಡವು ಮೊದಲಾರ್ಧದಲ್ಲಿ 14 ಅಂಕಗಳ (27–13) ಭರ್ಜರಿ ಮುನ್ನಡೆ ಪಡೆಯಿತು. ದ್ವಿತೀಯಾರ್ಧದಲ್ಲಿ ಬುಲ್ಸ್‌ ತಂಡವು ಪ್ರತಿಹೋರಾಟ ನಡೆಸಿದರೂ ಗೆಲುವಿಗೆ ಅದು ಸಾಕಾಗಲಿಲ್ಲ.  

ADVERTISEMENT

ಲೀಗ್‌ ಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದಿದ್ದ ಪಟ್ನಾ ತಂಡವು ಪ್ಲೇ ಆಫ್‌ ಹಂತದಲ್ಲಿ ಸತತ ಮೂರು ಪಂದ್ಯಗಳನ್ನು ಗೆದ್ದು, ಮೂರನೇ ಎಲಿಮಿನೇಟರ್‌ಗೆ ಅರ್ಹತೆ ಪಡೆಯಿತು. ಮಂಗಳವಾರದ ನಡೆಯುವ ಈ ಪಂದ್ಯದಲ್ಲಿ ತೆಲುಗು ಟೈಟನ್ಸ್‌ ತಂಡವನ್ನು ಎದುರಿಸಲಿದೆ. 

ಪಟ್ನಾ ಪರ ಏಕಾಂಗಿ ಹೋರಾಟ ನಡೆಸಿದ ಅಯಾನ್‌ 19 ಅಂಕ ಗಳಿಸಿದರು. ಅವರು ರೇಡಿಂಗ್‌ನಿಂದ 17 ಪಾಯಿಂಟ್ಸ್‌ ಗಳಿಸಿದರೆ, ಬೋನಸ್‌ನಿಂದ ಎರಡು ಅಂಕವನ್ನು ಚಾಚಿದರು. ಅವರು ಹಾಲಿ ಆವೃತ್ತಿಯಲ್ಲಿ 21 ಪಂದ್ಯಗಳಿಂದ 302 ಅಂಕ ಗಳಿಸಿದ್ದಾರೆ. ರೇಡರ್‌ ಅಂಕಿತ್‌ ಕುಮಾರ್‌ ರಾಣಾ (7), ಡಿಫೆಂಡರ್‌ಗಳಾದ ದೀಪತ್‌ ರಾಠಿ (6), ನವದೀಪ್‌ (5) ಅವರಿಗೆ ಸಾಥ್‌ ನೀಡಿದರು. 

ಬೆಂಗಳೂರು ತಂಡದ ಪ್ರಮುಖ ರೇಡರ್‌ ಅಲಿರೆಜಾ ಮಿರ್ಜೈಯಾನ್ (6) ಅವರಿಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಶುಭಂ ಬಿತಕೆ 7 ಅಂಕ ಗಳಿಸಿದರು. ಅಶಿಶ್‌ ಮಲಿಕ್‌ ಮತ್ತು ಕನ್ನಡಿಗ ಬಿ. ಗಣೇಶ್‌ ‘ಹೈಫೈ’ ಗಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.