ADVERTISEMENT

ಪ್ರೊ ಕಬಡ್ಡಿ: ಪಟ್ನಾ ಪೈರೆಟ್ಸ್, ಹರಿಯಾಣ ಸ್ಟೀಲರ್ಸ್‌ ಜಯಭೇರಿ

ಸಚಿನ್ ಮಿಂಚು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 16:41 IST
Last Updated 28 ಡಿಸೆಂಬರ್ 2021, 16:41 IST
ತೆಲುಗು ಟೈಟನ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳ ಆಟಗಾರರ ಸೆಣಸಾಟ  –ಟ್ವಿಟರ್ ಚಿತ್ರ
ತೆಲುಗು ಟೈಟನ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳ ಆಟಗಾರರ ಸೆಣಸಾಟ  –ಟ್ವಿಟರ್ ಚಿತ್ರ   

ಬೆಂಗಳೂರು: ಸಚಿನ್ ಮತ್ತು ಪ್ರಶಾಂತ್ ಕುಮಾರ್ ಅವರ ಚುರುಕಿನ ದಾಳಿಗಳಿಂದಾಗಿ ಪಟ್ನಾ ಪೈರೆಟ್ಸ್ ತಂಡವು ಪ್ರೊ ಕಬಡ್ಡಿ ಟೂರ್ನಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಜಯಭೇರಿ ಬಾರಿಸಿತು.

ವೈಟ್‌ಫೀಲ್ಡ್‌ನ ಶೆರಟಾನ್ ಗ್ರ್ಯಾಂಡ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಪಟ್ನಾ ತಂಡವು 38–26ರಿಂದ ಪುಣೇರಿ ಪಲ್ಟನ್ ಎದುರು ಜಯಿಸಿತು. ಸಚಿನ್ 10 ಮತ್ತು ಪ್ರಶಾಂತ್ ಕುಮಾರ್ ಐದು ಅಂಕಗಳನ್ನು ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳೂ ಸಮಬಲದ ಹೋರಾಟ ನಡೆಸಿದವು. ರೋಚಕ ಹೋರಾಟ ಕಂಡುಬಂದಿತು. ಅದರಿಂದಾಗಿ ವಿರಾಮಕ್ಕೆ 14–14ರಿಂದ ತಂಡಗಳು ಸಮ ಸಾಧನೆ ಮಾಡಿದ್ದವು.

ADVERTISEMENT

ಆದರೆ ವಿರಾಮದ ನಂತರದಲ್ಲಿ ಪಟ್ನಾ ದಾಳಿಗಾರರ ಆಟದ ವೇಗಕ್ಕೆ ಪುಣೇರಿ ಆಟಗಾರರು ಸಾಟಿಯಾಗಲಿಲ್ಲ. ದ್ವಿತೀಯಾರ್ಧದಲ್ಲಿ ಪೈರೇಟ್ಸ್ ತಂಡವು 24 ಅಂಕಗಳನ್ನು ಸೂರೆ ಮಾಡಿತು. ಪುಣೇರಿ ತಂಡವು ಕೇವಲ 12 ಅಂಕ ಗಳಿಸಿತು. ಇದರಿಂದಾಗಿ ಪಟ್ನಾ ಜಯದತ್ತ ಸಾಗಿತು.

ಪಲ್ಟನ್ ತಂಡವು ನಾಲ್ಕು ಆಲೌಟ್ ಪಾಯಿಂಟ್ಸ್‌ ಗಳಿಸಿತು. ಇದರಿಂದಾಗಿ ಪುಣೇರಿ ಮೇಲಿನ ಒತ್ತಡ ಹೆಚ್ಚಿತು.

ಸ್ಟೀಲರ್ಸ್‌ಗೆ ರೋಚಕ ಜಯ

ರಾತ್ರಿ ನಡೆದ ಇನ್ನೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವು 39–37ರಿಂದ ತೆಲುಗು ಟೈಟನ್ಸ್ ವಿರುದ್ಧ ರೋಚಕ ಜಯ ಸಾಧಿಸಿತು.

ಆಲ್‌ರೌಂಡರ್ ಮೀಟು ಮತ್ತು ರೋಹಿತ್ ಗುಲಿಯಾ ಅವರು ಕ್ರಮವಾಗಿ 12 ಮತ್ತು 8 ಅಂಕಗಳನ್ನು ಗಳಿಸಿ ತಂಡದ ಜಯದ ರೂವಾರಿಗಳಾದರು.

ಅರ್ಧವಿರಾಮದ ವೇಳೆಗೆ ಹರಿಯಾಣ ತಂಡವು 23–19 ರಿಂದ ಮುನ್ನಡೆ ಸಾಧಿಸಿತು.

ಆದರೆ ವಿರಾಮದ ನಂತರ ತೆಲುಗು ತಂಡದ ರೇಡರ್‌ಗಳು ಮಿಂಚಿನ ಆಟವಾಡಿದರು. ಸಿದ್ಧಾರ್ಥ್ ದೇಸಾಯಿ (9) ಮತ್ತು ನಾಯಕ ರಾಕೇಶ್ ಗೌಡ (7) ಅಮೋಘ ಆಟವಾಡಿ, ಕಠಿಣ ಪೈಪೋಟಿಯೊಡ್ಡಿದರು. ಈ ಅವಧಿಯಲ್ಲಿ ಟೈಟನ್ಸ್‌ 18 ಮತ್ತು ಸ್ಟೀಲರ್ಸ್ 16 ಅಂಕಗಳನ್ನು ಗಳಿಸಿತು. ಒಟ್ಟಾರೆ ಎರಡು ಅಂಕಗಳಿಂದ ಸ್ಟೀಲರ್ಸ್ ಗೆದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.