ADVERTISEMENT

ಗೋಪಿಚಂದ್‌ ₹26 ಲಕ್ಷ ದೇಣಿಗೆ

ಪಿಟಿಐ
Published 6 ಏಪ್ರಿಲ್ 2020, 20:00 IST
Last Updated 6 ಏಪ್ರಿಲ್ 2020, 20:00 IST
ಪುಲ್ಲೇಲ ಗೋಪಿಚಂದ್‌
ಪುಲ್ಲೇಲ ಗೋಪಿಚಂದ್‌   

ನವದೆಹಲಿ: ಕೋವಿಡ್‌–19 ಪಿಡುಗಿನ ವಿರುದ್ಧದ ಸಮರಕ್ಕೆ ಸಹಾಯಾರ್ಥವಾಗಿ ಭಾರತ ರಾಷ್ಟ್ರೀಯ ಬ್ಯಾಡ್ಮಿಂಟನ್‌ ತಂಡದ ಕೋಚ್‌ ಪುಲ್ಲೇಲ ಗೋಪಿಚಂದ್‌ ₹ 26 ಲಕ್ಷ ದೇಣಿಗೆ ನೀಡಿದ್ದಾರೆ.

‘ಮಾರಣಾಂತಿಕ ಪಿಡುಗಿನ ವಿರುದ್ಧದ ಹೋರಾಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನನ್ನ ಸಣ್ಣ ಕೊಡುಗೆ ಇದು’ ಎಂದು ಅವರು ಹೇಳಿದ್ದಾರೆ.

ಅರ್ಜುನ ಹಾಗೂ ದ್ರೋಣಾ ಚಾರ್ಯ ಪ್ರಶಸ್ತಿ ಪುರಸ್ಕೃತ ಗೋಪಿಚಂದ್‌ ಅವರು ‘ಪಿಎಂ ಕೇರ್ಸ್‌ ನಿಧಿ’ಗೆ 11 ಲಕ್ಷ, ತೆಲಂ ಗಾಣ ಸರ್ಕಾರಕ್ಕೆ 10 ಲಕ್ಷ ಹಾಗೂ ಆಂಧ್ರಪ್ರದೇಶ ಸರ್ಕಾರಕ್ಕೆ ₹ 5 ಲಕ್ಷ ನೆರವು ನೀಡಿದ್ದಾರೆ.

ADVERTISEMENT

‘ಕೊರೊನಾ ವಿರುದ್ಧದ ಸಮರದಿಂದ ಸರ್ಕಾರಗಳಿಗೆ ಆರ್ಥಿಕ ಹೊರೆಯಾಗಲಿದೆ. ಹಾಗಾಗಿ ಪ್ರತಿಯೊಬ್ಬರು ಸಾಧ್ಯವಾದಷ್ಟು ನೆರವು ನೀಡಲು ಮುಂದಾಗಬೇಕು’ ಎಂದು ಅವರು ನುಡಿದಿದ್ದಾರೆ.

ಪಂಕಜ್ ನೆರವು: ಸ್ನೂಕರ್ ಮತ್ತು ಬಿಲಿಯರ್ಡ್ಸ್‌ನಲ್ಲಿ 23 ಬಾರಿ ವಿಶ್ವ ಚಾಂಪಿಯನ್ ಆಗಿರುವ ಪಂಕಜ್ ಅಡ್ವಾಣಿ ಕೊರೊನಾ ಎದುರಿನ ಸಮರದಲ್ಲಿ ಕೈಜೋಡಿಸಲು ಪಿಎಂ ಕೇರ್ಸ್‌ ನಿಧಿಗೆ ₹ 5 ಲಕ್ಷ ಮೊತ್ತದ ದೇಣಿಗೆ ನೀಡಿದ್ದಾರೆ.

‘ಕೊರೊನಾ ವಿರುದ್ಧ ದೊಡ್ಡ ಸಮರವೇ ನಡೆಯುತ್ತಿದೆ. ಇದಕ್ಕೆ ನನ್ನ ಸಣ್ಣ ಕಾಣಿಕೆ. ಕೊರೊನಾ ಮಹಾಮಾರಿಯ ವಿರುದ್ಧ ಜಾಗೃತಿ ಮೂಡಿಸಿ ಪರಸ್ಪರ ಪ್ರೀತಿಸುತ್ತ ಸಹಬಾಳ್ವೆ ನಡೆಸೋಣ. ಈ ಮೂಲಕ ಮಾನವೀಯತೆ ಮೆರೆಯೋಣ. ಜೈ ಹಿಂದ್’ ಎಂದು ಅವರು ಸೋಮವಾರ ಟ್ವೀಟ್‌ ಮಾಡಿದ್ದಾರೆ.

ಮನೆ ಬಾಗಿಲಿಗೆ ಆಹಾರ ತಲುಪಿಸುವೆ:ನಿಕ್‌ ಕಿರ್ಗಿಯೋಸ್‌

ಮುಂಬೈ: ಆಸ್ಟ್ರೇಲಿಯದ ಟೆನಿಸ್‌ ಆಟಗಾರ ನಿಕ್‌ ಕಿರ್ಗಿಯೋಸ್‌, ಕೋವಿಡ್‌–19 ನಿಂದ ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದ್ದಾರೆ. ಹಸಿವಿನಿಂದ ಬಳಲುತ್ತಿರುವವರ ಮನೆಬಾಗಿಲಿಗೆ ಆಹಾರ ತಲುಪಿಸುವುದಾಗಿ ಅವರು ಸೋಮವಾರ ಹೇಳಿದ್ದಾರೆ.

ಟೆನಿಸ್‌ ಅಂಗಣದಲ್ಲಿ ಕೆಲವು ಸಲ ಅನುಚಿತ ವರ್ತನೆಯಿಂದ ‘ಬ್ಯಾಡ್‌ ಬಾಯ್‌’ ಎನಿಸಿಕೊಂಡಿದ್ದ ಕಿರ್ಗಿಯೋಸ್‌, ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾದ ಕಾಳ್ಗಿಚ್ಚಿನಲ್ಲಿ ಸಂತ್ರಸ್ತರಾದವರಿಗೆ ನೆರವು ನೀಡಿ ಸೈ ಎನಿಸಿಕೊಂಡಿದ್ದರು.

‘ಯಾರಾದರೂ ಕೆಲಸವಿಲ್ಲದೆ, ಹಸಿವಿನಿಂದ ಬಳಲುತ್ತಿದ್ದರೆ ಖಾಲಿ ಹೊಟ್ಟೆಯಲ್ಲಿ ಮಲಗಬೇಡಿ. ನನಗೊಂದು ಸಂದೇಶ ಕಳುಹಿಸಿ. ನನ್ನಲ್ಲಿದ್ದುದ್ದನ್ನು ಹಂಚಿಕೊಳ್ಳುತ್ತೇನೆ. ಮನೆಬಾಗಿಲಿಗೆ ಬಂದು ಆಹಾರ ತಲುಪಿಸುತ್ತೇನೆ’ ಎಂದು ಕಿರ್ಗಿಯೋಸ್‌ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.