ADVERTISEMENT

ಪ್ರೊ ಕಬಡ್ಡಿ ಲೀಗ್‌: ಪಲ್ಟನ್‌ ಎದುರು ‘ಬುಲ್ಸ್‌’ ಪಲ್ಟಿ

ಅಸ್ಥಿರ ಪ್ರದರ್ಶನ ಮುಂದುವರಿಸಿದ ಬೆಂಗಳೂರು ಬುಲ್ಸ್‌

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 20:00 IST
Last Updated 21 ಆಗಸ್ಟ್ 2019, 20:00 IST
ಬೆಂಗಳೂರು ಬುಲ್ಸ್‌ ವಿರುದ್ಧ ರೈಡಿಂಗ್‌ ಕೌಶಲ ಪ್ರದರ್ಶಿಸಿದ ಪುಣೇರಿ ಪಲ್ಟನ್‌ನ ಮಂಜೀತ್‌
ಬೆಂಗಳೂರು ಬುಲ್ಸ್‌ ವಿರುದ್ಧ ರೈಡಿಂಗ್‌ ಕೌಶಲ ಪ್ರದರ್ಶಿಸಿದ ಪುಣೇರಿ ಪಲ್ಟನ್‌ನ ಮಂಜೀತ್‌   

ಚೆನ್ನೈ: ಸರ್ವಾಂಗೀಣ ಆಟದ ಪ್ರದರ್ಶನ ನೀಡಿದ ಪುಣೇರಿ ಪಲ್ಟನ್‌ ತಂಡ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಬುಧವಾರ 31–23 ಪಾಯಿಂಟ್‌ಗಳಿಂದ ಬೆಂಗಳೂರು ಬುಲ್ಸ್‌ ತಂಡವನ್ನು ಸೋಲಿಸಿತು. ಅಸ್ಥಿರ ಪ್ರದರ್ಶನ ಮುಂದುವರಿಸಿದ ಬುಲ್ಸ್‌ಗೆ ಇದು 9 ಪಂದ್ಯಗಳಲ್ಲಿ ನಾಲ್ಕನೇ ಸೋಲು ಎನಿಸಿತು.

ಚೆನ್ನೈನ ಜವಾಹರಲಾಲ್‌ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯ ವಿರಾಮದವರೆಗೆ ತೀವ್ರ ಪೈಪೋಟಿಯಿಂದ ಸಾಗಿತ್ತು. ಆದರೆ 10–10 ರಿಂದ ಉತ್ತರಾರ್ಧದಲ್ಲಿ ಆಟ ಆರಂಭಿಸಿದ ಪಲ್ಟನ್ಸ್‌ ಹಿಡಿತ ಸಾಧಿಸಿತಲ್ಲದೇ ಒಮ್ಮೆಯೂ ಮುನ್ನಡೆ ಬಿಟ್ಟುಕೊಡಲಿಲ್ಲ. ಪಲ್ಟನ್‌ಗೆ ಇದು 9 ಪಂದ್ಯಗಳಲ್ಲಿ ಮೂರನೇ ಗೆಲುವು ಎನಿಸಿತು.

ಮಂಜೀತ್‌ ಏಳು ರೈಡಿಂಗ್‌ ಪಾಯಿಂಟ್ಸ್‌ ಸಂಗ್ರಹಿಸಿದರೆ, ಸುರ್ಜಿತ್‌ ಸಿಂಗ್‌ ಟ್ಯಾಕ್ಲಿಂಗ್‌ನಲ್ಲಿ ಆರು ಪಾಯಿಂಟ್ಸ್‌ ಗಳಿಸಿದರು. ಬೆಂಗಳೂರು ಪರ ರೋಹಿತ್‌ ಏಳು ಪಾಯಿಂಟ್ಸ್‌ ಮತ್ತು ಪವನ್‌ ಶೆರಾವತ್‌ ಐದು ಪಾಯಿಂಟ್ಸ್‌ ಗಳಿಸಿದರು.

ADVERTISEMENT

ಪ್ಯಾಂಥರ್ಸ್‌ಗೆ ಜಯ: ಇನ್ನೊಂದು ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ 28–26 ಪಾಯಿಂಟ್‌ಗಳಿಂದ ತಮಿಳು ತಲೈವಾಸ್‌ ತಂಡವನ್ನು ಸೋಲಿಸಿತು.ವಿರಾಮದ ವೇಳೆ 13–11ರಲ್ಲಿ ಜೈಪುರ ತಂಡ ಮುಂದಿತ್ತು.

ಪ್ಯಾಂಥರ್ಸ್‌ ಪರ ನೀಲೇಶ್‌ ಸಾಳುಂಕೆ ಏಳು ರೈಡಿಂಗ್‌ ಅಂಕ ಗಳಿಸಿದರೆ, ರಾಹುಲ್‌ ಚೌಧರಿ ಮತ್ತು ಅಜಯ್‌ ಥಾಕೂರ್‌ ತಲಾ ಆರು ರೈಡಿಂಗ್‌ ಪಾಯಿಂಟ್ಸ್ ಗಳಿಸಿ ಹೋರಾಟ ತೋರಿದರು. ಇದು ಪ್ಯಾಂಥರ್ಸ್‌ಗೆ 9 ಪಂದ್ಯಗಳಲ್ಲಿ ಏಳನೇ ಗೆಲುವು. ತಲೈವಾಸ್‌ಗೆ ಇದು 9 ಪಂದ್ಯಗಳಲ್ಲಿ ನಾಲ್ಕನೇ ಸೋಲೆನಿಸಿತು.

ಗುರುವಾರದ ಪಂದ್ಯ: ಬೆಂಗಾಲ್‌ ವಾರಿಯರ್ಸ್‌– ಪಟ್ನಾ ಪೈರೇಟ್ಸ್‌ (7.30).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.