
ಬೆಂಗಳೂರು: ಶುಕ್ರವಾರ ನಿಧನರಾದ ‘ವೃಕ್ಷಮಾತೆ’, ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರಿಗೆ ಕ್ವೀನ್ಸ್ ಪ್ರೀಮಿಯರ್ ಲೀಗ್ (ಕ್ಯೂಪಿಎಲ್) ಕ್ರೀಡೋತ್ಸವದಲ್ಲಿ ಗೌರವ ನಮನ ಸಲ್ಲಿಸಲಾಯಿತು.
ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಸ್ಪರ್ಧೆಗಳ ನಡುವೆ ಆಟಗಾರ್ತಿಯರು ಮೌನಾಚರಣೆ ನಡೆಸಿ ಸಂತಾಪ ಸೂಚಿಸಿದರು. ಜೊತೆಗೆ, ತಿಮ್ಮಕ್ಕ ಅವರ ಸ್ಮರಣಾರ್ಥವಾಗಿ ಕ್ರೀಡಾಂಗಣದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ನಟರಾದ ಉಗ್ರಂ ಮಂಜು, ಮನೋಜ್ ರವಿಚಂದ್ರನ್ ಹಾಗೂ ಚಲನಚಿತ್ರ ನಿರ್ಮಾಪಕ ಸಂತೋಷ್ ಕುಮಾರ್ ಕೆ.ಸಿ. ಅವರು ಎರಡನೇ ಐದನೇ ದಿನವಾದ ಶುಕ್ರವಾರ ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಲಗೋರಿ, ಕ್ರಿಕೆಟ್, ಚೆಸ್, ಲೂಡೊ, ಕೇರಂ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಯ ಅರ್ಹತಾ ಸುತ್ತಿನ ಪಂದ್ಯಗಳು ಮುಕ್ತಾಯಗೊಂಡಿದ್ದು, ಶನಿವಾರ ಫೈನಲ್ ಪಂದ್ಯಗಳು ನಡೆಯಲಿವೆ. ಸ್ಟಾರ್ ನಾಯಕಿಯರ ತಂಡಗಳು ಪ್ರಶಸ್ತಿಗಾಗಿ ಕಠಿಣ ಪೈಪೋಟಿ ಒಡ್ಡಲು ಸಿದ್ಧವಾಗಿವೆ.
ಟೂರ್ನಿಯ ಪ್ರಚಾರ ರಾಯಭಾರಿ, ನಟಿ ರಮ್ಯಾ ಅವರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಪಂದ್ಯ ವೀಕ್ಷಣೆಗೆ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.